ಯಡಿಯೂರಪ್ಪ ವಿರುದ್ದ ಕೆಂಡಕಾರಿದ ಕುಮಾರಸ್ವಾಮಿ: ಅಸಲಿಗೆ ಆಗಿದ್ದೇನು?
ಬೆಂಗಳೂರು, ಡಿ 22: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಾಲುಸಾಲು ಟ್ವೀಟ್ ಮೂಲಕ ಎಚ್ಡಿಕೆ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
"ಕುಮಾರಸ್ವಾಮಿ ಅಡ್ರೆಸ್ ಇಲ್ಲದೇ ಹೋಗಿದ್ದಾರೆ. ಇನ್ನು, ಮೂರುವರೆ ವರ್ಷ ನಾನೇ ಸಿಎಂ" ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ, ಕುಮಾರಸ್ವಾಮಿ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ, ಕುಮಾರಸ್ವಾಮಿ ಟ್ವೀಟ್ ಮಾಡಿರುವುದು ಹೀಗೆ:
"ಮೂರೂವರೆ ವರ್ಷ ನಾನೇ ಸಿಎಂ, ಕುಮಾರಸ್ವಾಮಿ ಅಡ್ರೆಸ್‌ಗೆ ಇಲ್ಲದಂತಾಗಿದ್ದಾರೆ' ಎಂದಿದ್ದಾರೆ ಬಿಎಸ್‌ವೈ. ಶತಮಾನಗಳ ಕಾಲ ಭಾರತವನ್ನು ದಾಸ್ಯದಲ್ಲಿಟ್ಟುಕೊಂಡ ಬ್ರಿಟಿಷರ ಅಂಕುಶವಿಲ್ಲದಂತಿದ್ದ ಸಾಮ್ರಾಜ್ಯವನ್ನೇ ಈ ನೆಲದ ಜನ ಕೊನೆಗಾಣಿಸಿದ್ದಾರೆ. ಇನ್ನು ನಿಮ್ಮ ಮೂರು ವರ್ಷ ಯಾವ ಲೆಕ್ಕ?" - ಕುಮಾರಸ್ವಾಮಿ ಟ್ವೀಟ್ - 1.

"ನನ್ನ ಅಡ್ರೆಸ್ ಬಗ್ಗೆ ನೀವು ಮಾತನಾಡಿದ್ದೀರಿ ಬಿಎಸ್ವೈ. ನನ್ನ ಅಡ್ರೆಸ್ ತೋರಿಸುವುದು ಈ ನೆಲ, ಈ ಜನ. ಅತೀ ಶೀಘ್ರದಲ್ಲೇ ಜನ ನಿಮಗೆ ನನ್ನ ಅಡ್ರೆಸ್ ತೋರಿಸುತ್ತಾರೆ. ಅಷ್ಟಕ್ಕೂ 2006ರಲ್ಲಿ ಒಂದು ಸಚಿವ ಸ್ಥಾನಕ್ಕಾಗಿ ನನ್ನ 'ಅಡ್ರೆಸ್' ಹುಡುಕಿಕೊಂಡು ಬಂದವರು ನೀವೇ ಅಲ್ಲವೇ? ನೆನಪಿಲ್ಲದಿದ್ದರೆ ಒಂದು ಬಾರಿ ನೆನಪಿಸಿಕೊಳ್ಳಿ" - ಟ್ವೀಟ್ - 2.
"ಅಧಿಕಾರದ ಅಮಲು ನಿಮ್ಮ ಮೂಲಕ ಏನೇನನ್ನೋ ಹೇಳಿಸುತ್ತಿದೆ. ಅಂಕುಶವಿಲ್ಲದಂತಿದ್ದ ಬಿಳಿಯರ ಸಾಮ್ರಾಜ್ಯವನ್ನೇ ಈ ಜನ ಅಂತ್ಯಗೊಳಿಸಿದ್ದಾರೆ. ಸಣ್ಣ ಪ್ರಾಂತ್ಯವನ್ನು ಮುನ್ನಡೆಸಿದರೂ, ಉತ್ತಮ ಆಡಳಿತ ನೀಡಿದ ಕೆಂಪೇಗೌಡರ ಪ್ರಾಂತ್ಯವೂ ಇದೇ ನೆಲದಲ್ಲೇ ಅಳಿದಿದೆ. ಆದರೆ, ಇಲ್ಲಿ ಉಳಿದಿದ್ದು ಹೆಸರು. ನಿಮ್ಮ-ನಮ್ಮ ವಿಚಾರದಲ್ಲೂ ಇದು ಅನ್ವಯ" - ಟ್ವೀಟ್ - 3.
"ಅಧಿಕಾರದ ಮದದಲ್ಲಿ ಆಣೆಗಳನ್ನಿಟ್ಟವರನ್ನೇ ನಮ್ಮ ಜನ ಬಿಟ್ಟಿಲ್ಲ. ಅವರಿಗೆ ನನ್ನ ಅಡ್ರೆಸ್ ತೋರಿಸಿದ್ದಾರೆ. ಇನ್ನು ನೀವು ಅಡ್ರೆಸ್ ಕೇಳಿದಾಗ್ಯೂ ಜನ ನನ್ನ ಅಡ್ರೆಸ್ ತೋರಿಸದೇ ಬಿಟ್ಟಾರೆಯೇ? ಎಚ್ಚರದಿಂದಿರಿ" - ಟ್ವೀಟ್ - 4.












Click it and Unblock the Notifications