ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಹಾವೇರಿಯ ನವೀನ್ ಸಾವು; ಮಾಜಿ ಸಿಎಂ ಎಚ್‌ಡಿಕೆ ಸಂತಾಪ
ಹಾವೇರಿ, ಮಾರ್ಚ್ 1: ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಹಾವೇರಿ ಜಿಲ್ಲೆಯ ನವೀನ್ ಎಂಬ ವಿದ್ಯಾರ್ಥಿ ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ವಾಸವಾಗಿದ್ದರು. ಮಂಗಳವಾರ ಬೆಳಗ್ಗೆ ತಿಂಡಿ ತರುವುದಕ್ಕಾಗಿ ಹೊರಗೆ ಹೋಗಿದ್ದ ವೇಳೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಮಾಜಿ ಸಿಎಂ ಎಚ್‌ಡಿಕೆ ತೀವ್ರ ಸಂತಾಪ
ರಷ್ಯಾ ದಾಳಿಗೆ ಹಾವೇರಿಯ ನವೀನ್ ಮೃತಪಟ್ಟಿದ್ದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು (ಮಂಗಳವಾರ) ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ ಎಂದು ಟ್ವೀಟ್ ಮಾಡಿ ಶೋಕ ವ್ಯಕ್ತಪಡಿಸಿದ್ದಾರೆ.

ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್ ಉಕ್ರೇನ್‌ಗೆ ಹೋಗಿದ್ದರು. ಭಾರತದಲ್ಲಿ, ದುಬಾರಿ ವೈದ್ಯಕೀಯ ಶಿಕ್ಷಣ ಕೈಗೆಟುಕದೇ ಅವರು ಉಕ್ರೇನ್‌ಗೆ ತೆರಳಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಇಂಥ ಅನೇಕ ವಿದ್ಯಾರ್ಥಿಗಳು ಇನ್ನೂ ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಶೆಲ್ ದಾಳಿಗೆ ತುತ್ತಾಗುವ ಮುನ್ನ 2 ಸಲ ತಮ್ಮ ಪೋಷಕರಿಗೆ ನವೀನ್ ಕರೆ ಮಾಡಿದ್ದರು, ಅದಾದ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದ್ದಾರೆ ಎಂಬುದನ್ನು ನೆನೆದರೆ ಬಹಳ ನೋವಾಗುತ್ತದೆ. ಬಾಂಬ್, ಕ್ಷಿಪಣಿ, ಶೆಲ್ ಸ್ಫೋಟಗಳಿಂದ ಅವರೆಲ್ಲರೂ ಖಾರ್ಕೀವ್ ನಗರದಲ್ಲಿ ತತ್ತರಿಸುತ್ತಿದ್ದಾರೆ. ಮೊದಲೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸಬೇಕಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

ಆ ವಿದ್ಯಾರ್ಥಿಳೆಲ್ಲರೂ 6 ದಿನಗಳಿಂದ ಬಂಕರ್‌ನಲ್ಲೇ ಇದ್ದಾರೆ. ಅವರೀಗ ಕೇವಲ ಚಾಕೋಲೇಟ್, ಬಿಸ್ಕೆಟ್, ಸ್ನೀಕರ್‌ಗಳನ್ನು ತಿನ್ನುತ್ತಾ ಬದುಕುಳಿದಿದ್ದಾರೆ. ನೀರು- ಆಹಾರಕ್ಕೆ ತತ್ವಾರವಾಗಿದೆ ಎಂದು ಅಲ್ಲಿನ ಕನ್ನಡ ವಿದ್ಯಾರ್ಥಿಗಳು ಮಾಧ್ಯಮಗಳ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು. ಉಕ್ರೇನ್ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೇಳಿಬರುತ್ತಿದೆ ಎಂದು ಟ್ವೀಟ್ ಮೂಲಕ ಟೀಕಿಸಿದರು.

ವಿದ್ಯಾರ್ಥಿ ನವೀನ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಗನನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಅವರ ಪೋಷಕರಿಗೆ ನನ್ನ ಪ್ರಗಾಢ ಸಂತಾಪಗಳು. ನವೀನ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications