ಬಿಜೆಪಿ ಕಚೇರಿಯಲ್ಲಿ ಬಾಂಬ್ ದಾಳಿಗೆ ಸಂಚು; ಬೊಮ್ಮಾಯಿ ಹೇಳಿದ್ದೇನು?
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಬೆನ್ನತ್ತಿರುವ ಎನ್‌ಐಎ ಅಧಿಕಾರಿಗಳು ಮತ್ತೊಂದು ಭಯಾನಕ ಸಂಗತಿಯನ್ನು ನಿನ್ನೆ ಬಹಿರಂಗಪಡಿಸಿದ್ದಾರೆ. ಈ ಪ್ರಕರಣದ ಆರೋಪಿಗಳು ರಾಮೇಶ್ವರಂ ಕೆಫೆಗೂ ಮುನ್ನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಸ್ಫೋಟಿಸಲು ಯೋಜನೆ ರೂಪಿಸಿದ್ದರು ಎನ್ನುವ ಸ್ಫೋಟಕ ವಿಚಾರವನ್ನು ನಿನ್ನೆ ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ರಿವೀಲ್ ಮಾಡಿದ್ದಾರೆ.
ಈ ವಿಚಾರ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಬಿಜೆಪಿ ನಾಯಕರು ಕೂಡ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೂಡ ಈ ವಿಚಾರವಾಗಿ ಶಾಕ್‌ಗೆ ಒಳಗಾಗಿದ್ದಾರೆ. ರಾಜ್ಯ ಬಿಜೆಪಿ ಕಚೇರಿ ಮೇಲೆ ಭಯೊತ್ಪಾದಕರು ದಾಳಿ ನಡೆಸಲು ಮುಂದಾಗಿದ್ದು ಅತ್ಯಂತ ಆಘಾತಕಾರಿ ಸಂಗತಿ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಣಿಸಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವ ಉಗ್ರರಿಗೆ ಕಠಿಣ ಶಿಕ್ಷೆಯಾಗಲು ರಾಜ್ಯ ಸರ್ಕಾರ ಎನ್ಐಎಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಗ್ರಹಕ್ಕೆ ಟಾಸ್ಕ್ ಫೋರ್ಸ್ ರಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು. ಐಟಿ-ಬಿಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಈ ರೀತಿ ಭಯದ ವಾತಾವರಣ ಸೃಷ್ಟಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ನಗರದ ಆರ್ಥಿಕತೆಯ ನಾಶಕ್ಕೆ ಭಯೋತ್ಪಾದಕರು ಮುಂದಾಗಿದ್ದರು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಎನ್‌ಐಎ ಅಧಿಕಾರಿಗಳು ಹೇಳಿದ್ದೇನು?: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನವನ್ನು ಸ್ಫೋಟಿಸಲು ಇವರು ಸಂಚು ರೂಪಿಸಿದ್ದರು ಎನ್ನುವ ಭಯಾನಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ನಡೆಯುತ್ತಿತ್ತು. ಅದೇ ದಿನದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ IED ದಾಳಿ ನಡೆಸಲು ಸಂಚು ಇಬ್ಬರು ಆರೋಪಿಗಳು ರೂಪಿಸಿದ್ದರು ಎಂದು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

ಆದರೆ ಈ ಯೋಜನೆ ವಿಫಲವಾಗಿತ್ತು. ಇದು ವಿಫಲವಾದ ನಂತರ ಇಬ್ಬರು ಆರೋಪಿಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪ್ಲ್ಯಾನ್ ಮಾಡಿದ್ದರು. ಈ ಬಗ್ಗೆ ತನಿಕೆ ಮುಂದುವರಿದಿದೆ ಎಂದು ಎನ್‌ಐಎ ಹೇಳಿದೆ. ಅಂದರೆ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನವೇ ಬಿಜೆಪಿ ಕಚೇರಿ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಕೇಸ್‌ನಲ್ಲಿ ಮುಖ್ಯವಾಗಿ ನಾಲ್ವರು ಆರೋಪಿಗಳಾದ ಮುಜಾಮೀಲ್ ಷರೀಫ್, ಮುಸಾವೀರ್ ಹುಸೇನ್ ಶಜೀಬ್, ಅಬ್ದುಲ್ ಮತೀನ್ ತಾಹಾ, ಮಾಜ್ ಮುನೀರ್ ಅಹ್ಮದ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಮುಸಾವೀರ್ ಹುಸೇನ್ ಶಜೀಬ್ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಐಪಿಸಿ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಪಿಡಿಎಲ್‌ಪಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಸ್ತುತ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications