ಆಸ್ತಿ ವಿವಾದ : ನಿವೃತ್ತ ಯೋಧನಿಂದ ಚಿಕ್ಕಪ್ಪನ ಹತ್ಯೆ
ಬೆಂಗಳೂರು, ಜ. 3 : ಜಮೀನು ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ದೇವನಹಳ್ಳಿ ತಾಲೂಕಿನಲ್ಲಿ ನಡೆದಿದೆ. ನಿವೃತ್ತ ಬಿಎಸ್‌ಎಫ್ ಯೋಧ ಮಂಜನಾಥ್ ಎಂಬುವವರು ಚಿಕ್ಕಪ್ಪನನ್ನು ಗುಂಡು ಹಾರಿಸಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಲೆಯಾದವರನ್ನು ದೇವನಹಳ್ಳಿ ತಾಲ್ಲೂಕಿನ ಮಲ್ಲೇಪುರದ ನಿವಾಸಿ ನಾಗರಾಜಾಚಾರಿ (65) ಎಂದು ಗುರುತಿಸಲಾಗಿದೆ. ಕೌಟುಂಬಿಕ ಹಾಗೂ ಜಮೀನು ವಿವಾದದ ಹಿನ್ನಲೆಯಲ್ಲಿ ನಾಗರಾಜಾಚಾರಿ ಅವರ ಅಣ್ಣನ ಮಗ ಮಂಜುನಾಥ್ ಶನಿವಾರ ಬೆಳಗ್ಗೆ ಚಿಕ್ಕಪ್ಪನನ್ನು ಕೊಲೆ ಮಾಡಿದ್ದಾರೆ. [ದೇವನಹಳ್ಳಿಯಲ್ಲಿ ಹೆಜ್ಜೇನು ದಾಳಿಗೆ ಇಬ್ಬರು ಬಲಿ]

ನಿವೃತ್ತ ಬಿಎಸ್‌ಎಫ್ ಯೋಧ ಮಂಜುನಾಥ್ ಮತ್ತು ಮೃತ ನಾಗರಾಜಾಚಾರಿ ನಡುವೆ ಆಸ್ತಿ ವಿವಾದದ ಹಿನ್ನಲೆಯಲ್ಲಿ ವೈಷಮ್ಯವಿತ್ತು ಎನ್ನಲಾಗಿದೆ. ನಾಗರಾಜಾಚಾರಿ ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಮಂಜುನಾಥ್‌ಗೆ ನೋಟಿಸ್ ಜಾರಿಗೊಳಿಸಿತ್ತು. [ಮಣ್ಣುತಿಂದ ಮೊಮ್ಮಗಳನ್ನು ನೇಣುಹಾಕಿ ಕೊಂದ ಅಜ್ಜಿ]
ಶನಿವಾರ ಬೆಳಗ್ಗೆ ನಾಗರಾಜಾಚಾರಿ ಮನೆಗೆ ಬಂದ ಮಂಜುನಾಥ್ ಈ ವಿಚಾರವಾಗಿ ಜಗಳವಾಡಿದ್ದಾರೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋದಾಗ ಮಂಜುನಾಥ್ ರಿವಾಲ್ವರ್‌ನಿಂದ ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಬ್ಬರ ಜಗಳವನ್ನು ಬಿಡಿಸಲು ಬಂದ ನಾಗರಾಜಾಚಾರಿ ಪುತ್ರ ರವಿಕುಮಾರ್ ಅವರ ಮೇಲೂ ಮಂಜುನಾಥ್ ಗುಂಡು ಹಾರಿಸಿದ್ದು, ಗಾಯಗೊಂಡ ಅವರನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದು, ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications