ಆಂಬ್ಯುಲೆನ್ಸ್ ಸುಗಮ ಸಂಚಾರಕ್ಕೆ ತುರ್ತು ಪ್ರತಿಕ್ರಿಯೆ ವಿಶೇಷ ವ್ಯವಸ್ಥೆ
ಬೆಂಗಳೂರು, ಜನವರಿ 12; ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಮಧ್ಯೆ ಗೋಲ್ಡನ್ ಅವಧಿಯಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ಇದು ಆ್ಯಂಬುಲೆನ್ಸ್‌ಗಳಿಗೆ ಮಾತ್ರವಲ್ಲ ಪೊಲೀಸರಿಗೂ ತಲೆನೋವಿನ ಕೆಲಸವಾಗಿದೆ. ಹಾಗಾಗಿ ಹೈಕೋರ್ಟ್ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು 'ವಿಶೇಷ ತುರ್ತು ಪ್ರತಿಕ್ರಿಯೆ ಮೇಜಿನ ಸೇವೆ' ಆರಂಭಿಸಿದೆ.
ಈ ಕುರಿತಂತೆ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿದೆ. ಪ್ರಮಾಣ ಪತ್ರ ದಾಖಲಿಸಿಕೊಂಡ ಹೈಕೋರ್ಟ್, ರಾಜ್ಯ ಸರ್ಕಾರವು ಅರ್ಜಿಯಲ್ಲಿ ಎತ್ತಲಾಗಿದ್ದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದೆ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದೆ.

ಅಲ್ಲದೆ, ವೈದ್ಯಕೀಯ ತುರ್ತು ಸೇವೆಗಳನ್ನು ಸಾರ್ವಜನಿಕರಿಗೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕ್ರಮಗಳನ್ನು ನಿಗದಿತ ಅವಧಿಯಲ್ಲಿ ರಾಜ್ಯ, ಜಿಲ್ಲೆ ಮತ್ತು ವಲಯ ಮಟ್ಟದಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.
ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರಿ ವಕೀಲರು, ಕರ್ನಾಟಕ ರಸ್ತೆ ಸುರಕ್ಷತೆ ಪ್ರಾಧಿಕಾರದ ಜಂಟಿ ಆಯುಕ್ತ ಜೆ. ಪುರುಷೋತ್ತಮ್ ಮತ್ತು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ಕಾರ್ಯದರ್ಶಿ ನಾಗರಾಜ್ ಸಲ್ಲಿಸಿರುವ ಪ್ರತ್ಯೇಕ ಪ್ರಮಾಣ ಪತ್ರವನ್ನು ಸಲ್ಲಿಸಿದರು.
ಹೊಸ ಆ್ಯಂಬುಲೆನ್ಸ್ ನೋಂದಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲಾಗಿದೆ. 'ವಾಹನ ಸಾಫ್ಟ್‌ವೇರ್' ಆ್ಯಂಬುಲೆನ್ಸ್‌ನಲ್ಲಿ ಜಿಪಿಎಸ್ ದತ್ತಾಂಶದ ಕುರಿತು ನಿರ್ವಹಣೆ ಮಾಡಲಾಗುವುದು ಮತ್ತು ಅದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು.
ಇನ್ನೂ 100 ಸೇವಾದಾರರನ್ನು ಆಯ್ಕೆ ಮಾಡಲು 31 ದಿನಗಳ ಅಲ್ಪಾವಧಿ ಟೆಂಡರ್ ಕರೆಯಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ಜ 9 ರಂದು ಟೆಂಡರ್ ಆಹ್ವಾನಿಸಲಾಗಿದೆ. ಫೆಬ್ರವರಿ 2ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಆ್ಯಂಬುಲೆನ್ಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಂಚಾರ ಪೊಲೀಸರ ವತಿಯಿಂದ 'ವಿಶೇಷ ತುರ್ತು ಪ್ರತಿಕ್ರಿಯೆ ಮೇಜಿನ ಸೇವೆ' (ಇಆರ್‌ಎಸ್‌ಎಸ್) ಮತ್ತು ಸ್ಥಿರ ದೂರವಾಣಿ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದೆ.
ಆ್ಯಂಬುಲೆನ್ಸ್‌ಗಳು ಸಂಚಾರ ಆರಂಭಿಸಿದಾಗ ಮತ್ತು ರೋಗಿಗಳನ್ನು ತುರ್ತು ಚಿಕಿತ್ಸೆಗೆ ರವಾನಿಸುತ್ತಿದ್ದಾಗ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದರೆ, ವಾಹನ ದಟ್ಟಣೆ ನಿವಾರಿಸಲು ಇಆರ್‌ಎಸ್‌ಎಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು ಎಂದು ತಿಳಿಸಲಾಗಿದೆ.
ಈ ಸಹಾಯವಾಣಿ ಸಂಖ್ಯೆಯನ್ನು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪರ ಮತ್ತು ಕೋಲಾರ ಜಿಲ್ಲೆಗಳ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್‌ಗಳಿಗೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.












Click it and Unblock the Notifications