ಐದು ರಾಜ್ಯಗಳ ಫಲಿತಾಂಶ: ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಗೆ ಕಂಟಕ?

ಬೆಂಗಳೂರು, ಮೇ 09: ಉತ್ತರಪ್ರದೇಶ, ಪಂಜಾಬ್ ಸಹಿತ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಬರುವುದಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಇಲ್ಲಿ ಏನೇ ಫಲಿತಾಂಶ ಬಂದರೂ ಕರ್ನಾಕಟದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಖುರ್ಚಿ ಅಲುಗಾಡುವುದು ಖಚಿತ ಎಂದು ಹೇಳಲಾಗುತ್ತದೆ.

ಐದು ರಾಜ್ಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಂದಿರುವ ಮತದಾನೋತ್ತರ ಸಮೀಕ್ಷೆಗಳು ಪ್ರಕಾರ ಬಿಜೆಪಿ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿವೆ. ಗೋವಾದಲ್ಲಿ ಅಂತಂತ್ರವಾದರೂ ಕೇಂದ್ರದಲ್ಲಿರುವ ಅಧಿಕಾರ ಬಲದಿಂದ ಮತ್ತೊಮ್ಮೆ ರಾಜ್ಯವನ್ನು ಕೈವಶ ಮಾಡಿಕೊಳ್ಳಲೂಬಹುದು. ಒಂದು ವೇಳೆ ಸಮೀಕ್ಷೆ ನಿಜವೇ ಆದರೆ ಕರ್ನಾಕಟದಲ್ಲಿ ಇದರ ಪ್ರಭಾವ ತಪ್ಪಿದ್ದಲ್ಲ.

ಹೀಗೆ ನಿರೀಕ್ಷೆಯಂತೆ ಮೂರು ಅಥವಾ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಜಯಿಸಿದ್ದೇ ಆದಲ್ಲಿ ಬಿಜೆಪಿಯನ್ನು ಕಟ್ಟಿ ನಿಲ್ಲಿಸುವವರಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಕೋವಿಡ್‌ ನಿರ್ವಹಣೆ, ಆರ್ಥಿಕ ಕುಸಿತ, ನಿರುದ್ಯೋಗ, ಬೆಲೆ ಏರಿಕೆ ಇಂತಹ ಎಲ್ಲ ವಿಷಯಗಳ ಹೊರತಾಗಿಯೂ ಜನಸಮುದಾಯ ಬಿಜೆಪಿ ಪರ ಗುರುತಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ ಅಥವಾ ಬಿಜೆಪಿ ವಿರುದ್ಧವಾಗಿ ಪರ್ಯಾಯ ಆಯ್ಕೆಗಳಿಲ್ಲದೆ ಅನಿವಾರ್ಯವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ವಿಮರ್ಶಿಸಲೂಬಹುದು.

ಆದರೆ, ಅದೇನೆ ಇದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಓಟಕ್ಕೆ ಲಗಾಮು ಇಲ್ಲ ಎಂಬ ಸಂದೇಶವಂತೂ ಖಚಿತ. ಬಳಿಕ ಅವರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಯಾರೂ ಎದುರುತ್ತರ ಎಲ್ಲದೆ ಪಾಲಿಸುವಂತಹ ಅನಿವಾರ್ಯತೆ ಸೃಷ್ಟಿಯಾದರೂ ಅಚ್ಚರಿಯಿಲ್ಲ.

Five state election result: Karnataka Chief Minister Bommais chair is sure to shake

ಕರ್ನಾಟಕಕ್ಕೆ ಉತ್ತರಾಖಂಡ ಮಾದರಿಯಾಗುತ್ತದೆಯೇ?

ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಉತ್ತರಾಖಂಡವೂ ಒಂದು. ಛಾರ್‌ಧಾಮ ಕ್ಷೇತ್ರಗಳ ಮೂಲಕ ಇಡೀ ದೇಶದ ಧಾರ್ಮಿಕ ಪ್ರವಾಸಿಗರನ್ನು ಆಕರ್ಷಿಸುವ ಉತ್ತರಾಖಂಡದಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿನ 70 ಕ್ಷೇತ್ರಗಳ ಪೈಕಿ ಬಿಜೆಪಿ ಸರಳ ಬಹುಮತ ಗಳಿಸುತ್ತದೆ ಎಂದು ಎಲ್ಲ ಸಮೀಕ್ಷೆಗಳೂ ಅಂದಾಜು ಮಾಡಿವೆ.

ಚುನಾವಣೆ ವರ್ಷದಲ್ಲಿಯೇ ಬಿಜೆಪಿ ಉತ್ತರಾಖಂಡದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲು ಮಾಡಿದೆ. 2017ರಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸಲು ಕೆಲವು ದಿನಗಳು ಬಾಕಿ ಇರುವಾಗಲೇ 2021ರ ಮಾರ್ಚ್ 9ರಂದು ಅವರ ರಾಜೀನಾಮೆ ಪಡೆಯಲಾಯಿತು.

ಬಳಿಕ ಪೌರಿ ಗರ್ವಾಲ್ ಕ್ಷೇತ್ರದ ಸಂಸದ ತೀರಥ್ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 116 ದಿನದೊಳಗೆ ಅವರನ್ನು ಬದಲಾಯಿಸಿ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಹೀಗೆ ಚುನಾವಣೆ ಮುಂಚಿತವಾಗಿ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಧೈರ್ಯವಾಗಿ ಬದಲಾಯಿಸಿತ್ತು.

Five state election result: Karnataka Chief Minister Bommais chair is sure to shake

ಒಂದು ವೇಳೆ ಬಿಜೆಪಿ ನಿರೀಕ್ಷೆಗೂ ಮೀರಿದ ಹೆಚ್ಚಿನ ಪ್ರಾಬಲ್ಯವನ್ನು ಈ ಚುನಾವಣೆಗಳಲ್ಲಿ ಗಳಿಸಿದರೆ ಕರ್ನಾಟಕದಲ್ಲಿಯೂ ಇದು ಪುನರಾವರ್ತನೆಯಾದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಈಗಲೇ ಕೇಳಿ ಬರುತ್ತಿವೆ. ಬಹುತೇಕ ಮೂರು ವರ್ಷ ಅಧಿಕಾರದಲ್ಲಿದ್ದ ಯಡಿಯೂರಪ್ಪ ಅವರನ್ನು ಬದಲಾಯಿಸಿ 2021 ರ ಜುಲೈನಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಸರಿಯಾಗಿ ಇನ್ನೊಂದು ವರ್ಷ ಬಾಕಿ ಇದೆ. ಹೊಸ ತಂತ್ರ ಪ್ರಯೋಗ ಮಾಡಬೇಕು ಎಂಬ ದೃಷ್ಟಿಯಿಂದ ಬಸವರಾಜ ಬೊಮ್ಮಾಯಿ ಅವರನ್ನೂ ಬದಲಾಯಿಸಿ ಮತ್ತೊಬ್ಬರನ್ನು ಅಧಿಕಾರದಲ್ಲಿ ಕೂಡಿಸಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ, ಟೆಂಡರ್‌ ಪ್ರಕ್ರಿಯೆಗಳಲ್ಲಿ ಹಗರಣ ಮತ್ತು ಶೇ 40ರಷ್ಟು ಕಮಿಷನ್ ಹಗರಣಗಳು ಬಹುವಾಗಿ ಸದ್ದು ಮಾಡಿವೆ. ಇವು ಆಗಲೇ ಬಸವರಾಜ ಬೊಮ್ಮಾಯಿ ಅವರ ಕುರ್ಚಿಗೆ ಕಂಟಕ ತಂದಿದ್ದವು. ಆದರೆ, ಕೇಂದ್ರ ನಾಯಕರ ಬಲದಿಂದಾಗಿ ಅಧಿಕಾರ ಉಳಿಸಿಕೊಂಡಿದ್ದಾರೆ. ಇಂತಹ ವಿಷಯಗಳು ಚುನಾವಣಾ ಅಸ್ತ್ರ ಆಗಬಾರದು ಎಂಬ ಮುಂದಾಲೋಚನೆಯಿಂದ ಬಸವರಾಜ ಬೊಮ್ಮಾಯಿ ಅವರ ಕುರ್ಚಿಗೂ ಕುತ್ತು ತರಬಹುದು. ಹಾಗೇನಾದರೂ ಒಂದು ವೇಳೆ ಅಂತಹ ಸಂದರ್ಭ ಎದುರಾದರೆ ಬಸವರಾಜ ಬೊಮ್ಮಾಯಿವರು ಅದಕ್ಕೆ ತಲೆಬಾಗುತ್ತಾರೆ ಹೊರತು ಕೇಂದ್ರ ನಾಯಕರನ್ನು ಎದುರು ಹಾಕಿಕೊಂಡು ಅಧಿಕಾರದಲ್ಲಿ ಗಟ್ಟಿಯಾಗಿ ಕೂಡುತ್ತಾರೆ ಎಂಬ ನಿರೀಕ್ಷೆಗಳೂ ಯಾರಲ್ಲಿಯೂ ಇಲ್ಲ.

Five state election result: Karnataka Chief Minister Bommais chair is sure to shake

ಯಾರಿದ್ದಾರೆ ಸಿಎಂ ರೇಸ್‌ನಲ್ಲಿ?

ರಾಜ್ಯದಲ್ಲಿ ಒಂದು ವೇಳೆ ಮುಖ್ಯಮಂತ್ರಿ ಹುದ್ದೆ ಖಾಲಿಯಾದರೆ ಅಲ್ಲಿ ಬಿಜೆಪಿ ಹೈಕಮಾಂಡ್ ಯಾರನ್ನು ಕೂಡಿಸುತ್ತದೆ ಎಂಬುದೂ ಮುಖ್ಯ. ಐದು ರಾಜ್ಯಗಳ ಚುನಾವಣೆಯಲ್ಲಿ ಜನಸಾಮಾನ್ಯರ ವಿಷಯಗಳ ಹೊರತಾಗಿಯೂ ಹಿಂದುತ್ವದ ನಿಲುವೇ ಮುಖ್ಯವಾಗಿರುವುದು ಕಂಡುಬಂದಲ್ಲಿ, ಕರ್ನಾಟದಲ್ಲಿಯೂ ಆರ್‌ಎಸ್‌ಎಸ್‌ ಮತ್ತು ಪಕ್ಷಕ್ಕೆ ನಿಷ್ಟರಾಗಿರುವವರನ್ನು ಮುಖ್ಯಮಂತ್ರಿ ಖುರ್ಚಿಯಲ್ಲಿ ಕೂಡಿಸುವುದು ಖಚಿತವಾಗುತ್ತದೆ.

ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿ?

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಬಹುತೇಕ ಒಂದು ವರ್ಷದಿಂದ ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಸದ್ಯ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಗಳಲ್ಲೊಬ್ಬರಾಗಿದ್ದರು. ಉತ್ತರ ಪ್ರದೇಶದ ಬಹುತೇಕ ಕ್ಷೇತ್ರಗಳಲ್ಲಿ ಮನೆ ಮನೆ ಪ್ರಚಾರ ಮಾಡಿ ಪಕ್ಷದ ನಿಷ್ಠೆ ಮತ್ತು ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಮೂರ್ನಾಲ್ಕು ದಿನಗಳ ಹಿಂದಷ್ಟೇ ರಾಜ್ಯಕ್ಕೆ ಬಂದಿರುವ ಶೋಭಾ ಕರಂದ್ಲಾಜೆ ಅವರು ಶಿವಮೊಗ್ಗದಲ್ಲಿ ಹಲ್ಲೆಯಿಂದ ಸಾವನ್ನಪ್ಪಿದ ಹರ್ಷ ಮತ್ತು ಉಕ್ರೇನ್‌ನಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ಹಾವೇರಿ ಜಿಲ್ಲೆಯ ನವೀನ್ ಮನೆಗೆ ಭೇಟಿ ಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶೋಭಾ ಕರಂದ್ಲಾಜೆ ಅವರಿಗೆ 'ಕರ್ನಾಟಕದಲ್ಲಿ ದೊಡ್ಡ ಹುದ್ದೆ ಸಿಗಬಹುದು, ಎಲ್ಲಿಯೂ ವಿವಾದ ಮಾಡಿಕೊಳ್ಳದಿರಿ' ಎಂದು ಕೇಂದ್ರ ನಾಯಕರು ಮುನ್ಸೂಚನೆಯೊಂದನ್ನು ಈಗಾಗಲೇ ಎರಡು ಬಾರಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಅದರಂತೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕ ರಾಜಕಾರಣ ಅಥವಾ ರಾಜ್ಯದಲ್ಲಿ ನಡೆದ ಯಾವುದೇ ಕೋಮು ಗಲಭೆಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಲಿಲ್ಲ. ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆಯೂ ಶೋಭಾ ನಕ್ಕು ಸುಮ್ಮನಾಗಿದ್ದರು. ಹೀಗೆ ಶೋಭಾ ಅವರ ಮೌನದ ಹಿಂದೆ ಕೇಂದ್ರ ನಾಯಕರ ವಿವಿಧ ಲೆಕ್ಕಾಚಾರಗಳು ಅಡಗಿವೆ.

ಸಂಘಕ್ಕೆ ಮತ್ತು ಪಕ್ಷಕ್ಕೆ ನಿಷ್ಟರಾಗಿರುವ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದರೂ ಅಚ್ಚರಿಯಿಲ್ಲ ಎಂಬ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗುತ್ತಿದೆ. ಸಂಘಕ್ಕೆ ಮತ್ತು ಪಕ್ಷಕ್ಕೆ ನಿಷ್ಠರಾಗಿರುವ ಶೋಭಾ ಅವರನ್ನು ಮುಖ್ಯಮಂತ್ರಿ ಮಾಡಿದರೆ ಯಾರಿಂದಲೂ ವಿರೋಧ ಬರುವುದಿಲ್ಲ.

ಉತ್ತರಪ್ರದೇಶ, ಉತ್ತರಾಖಂಡದಂತೆ ಖಟ್ಟಾ ಹಿಂದೂಪರ ಧೋರಣೆ ಉಳ್ಳವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಬಹುದು. ಪ್ರಮುಖವಾಗಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯಮಂತ್ರಿಯೊಬ್ಬನ್ನು ಮಾಡಿದ ಸಂದೇಶವೂ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ಈ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಆದರೆ, ಇದೆಲ್ಲವೂ ಸಾಧ್ಯವಾಗುತ್ತದಾ? ಎನ್ನುವುದನ್ನು ನೋಡುವುದಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+