ಅಪಘಾತ : ಮದುವೆ ಮುಗಿಸಿ ಬರುತ್ತಿದ್ದವರು ಮಸಣಕ್ಕೆ

ಮೃತರೆಲ್ಲರು ಬೀದರ್ ಜಿಲ್ಲೆಯವರಾಗಿದ್ದು, ಗುರುವಾರ ಗುಲ್ಬರ್ಗ ಜಿಲ್ಲೆಯಲ್ಲಿನ ವಿವಾಹಕ್ಕೆ ಆಗಮಿಸಿದ್ದರು. ತಡರಾತ್ರಿ ಮದುವೆ ಮುಗಿಸಿಕೊಂಡು ಟವೇರಾ ವಾಹನ ಬಾಡಿಗೆಗೆ ಪಡೆದು ಬೀದರ್ ಗೆ ಮರಳುತ್ತಿದ್ದರು. ಶುಕ್ರವಾರ ಮುಂಜಾನೆ 4 ಗಂಟೆಯ ವೇಳೆಗೆ ಜೇವರ್ಗಿ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿಯ ಮಹಗಾಂವ್ ಗ್ರಾಮದ ಬಳಿ ಟವೇರಾ ಕಬ್ಬು ಸಾಗಿಸುತ್ತಿದ್ದ ಲಾರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ವೇಗವಾಗಿ ತೆರಳುತ್ತಿದ್ದ ಟವೇರಾ ಚಾಲಕ ನಿಯಂತ್ರಣ ತಪ್ಪಿ, ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಟವೇರಾ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ನಾಲ್ವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. (ವಿವಾಹದ ಹಿಂದಿನ ದಿನ ರೈಲಿಂದ ಜಿಗಿದು ಆತ್ಮಹತ್ಯೆ)
ಸಾವನ್ನಪ್ಪಿದವರನ್ನು ನಾಗನಾಥ ರೆಡ್ಡಿ (50), ವಿಮಲಾ (52), ನೀಲಮ್ಮ (60), ಅವಿನಾಶ್ (23), ಟವೇರಾ ಚಾಲಕ ಮಹೇಶ್(28) ಎಂದು ಗುರುತಿಸಲಾಗಿದೆ. ಟವೇರಾದಲ್ಲಿ 9 ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.












Click it and Unblock the Notifications