ಲಿಂಗಾಯತರಾಯ್ತು, ಈಗ ಮೀನುಗಾರರ ಮತಬುಟ್ಟಿಗೆ ಕಾಂಗ್ರೆಸ್ ಗಾಳ
ಬೆಂಗಳೂರು, ಅಕ್ಟೋಬರ್ 17: ಲಿಂಗಾಯತ ಮತಬುಟ್ಟಿಗೆ ಕೈ ಹಾಕಿದ ಕಾಂಗ್ರೆಸ್ ಈಗ ಬಿಜೆಪಿಯ ಮತ್ತೊಂದು ಸಾಂಪ್ರದಾಯಿಕ ಮತಬುಟ್ಟಿಗೆ ಕೈಹಾಕಲು ಹೊರಟಿದೆ.
ಕರಾವಳಿ ಭಾಗದಲ್ಲಿ ಕೇಸರಿ ಪಕ್ಷದ ಸಾಂಪ್ರದಾಯಿಕ ಮತದಾರರಾಗಿ ಗುರುತಿಸಿಕೊಂಡಿರುವ ಮೀನುಗಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ನ ಮೀನುಗಾರರ ಘಟಕದ ಮೊದಲ ಕಾರ್ಯಕಾರಿಣಿಯಲ್ಲಿ ಮೀನುಗಾರರ ಮತಗಳನ್ನು ಸೆಳೆಯಲು ರಣತಂತ್ರ ಹೆಣೆಯಲಾಗಿದೆ.
ಇದರ ಮೊದಲ ಭಾಗವಾಗಿ, "ನವೆಂಬರ್ 21ರಂದು ವಿಶ್ವ ಮೀನುಗಾರರ ದಿನದಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮೀನುಗಾರರ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿಲಿದ್ದಾರೆ," ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಈಗಾಗಲೇ ಎಐಸಿಸಿಯಲ್ಲಿ ಮೀನುಗಾರರ ಘಟಕವಿದ್ದು, ಕೆಪಿಸಿಸಿಯಲ್ಲೂ ಮೀನುಗಾರರ ಘಟಕ ಆರಂಭವಾಗಿದೆ ಎಂದು ಹೇಳಿರುವ ಅವರು, "ಈ ಘಟಕ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಮೀನುಗಾರರ ಸಮುದಾಯದ ಅಭಿವೃದ್ಧಿಗೆ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ತೀರ್ಮಾನಿಸಲಿದೆ," ಎಂದಿದ್ದು ನೇರವಾಗಿ ಮೀನುಗಾರರಿಗೆ ಗಾಳ ಹಾಕಿದ್ದಾರೆ.












Click it and Unblock the Notifications