ಮೊದಲ ಬಾರಿ ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಪಟ್ಟ ಬಿಜೆಪಿಗೆ!
ಬೆಂಗಳೂರು, ನವೆಂಬರ್ 17; ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಶಾಫಿ ಸಾಅದಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಗೆ ವಕ್ಫ್ ಮಂಡಳಿ ಅಧ್ಯಕ್ಷ ಪಟ್ಟ ಸಿಕ್ಕಿದೆ.
ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ ಡಾ.ಮಹಮ್ಮದ್ ಯೂಸುಫ್ ನಿಧನದಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಬುಧವಾರ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಮಂಡಳಿ ಕಚೇರಿಯಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು.
ಮುಸ್ಲಿಂ ಸಮುದಾಯದ ಹಿಂಜರಿಕೆ ಹೊಗಲಾಡಿಸಲು ಸಲ್ಮಾನ್ ಖಾನ್ ಮಹಾರಾಷ್ಟ್ರ ಲಸಿಕೆ ರಾಯಭಾರಿ
ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಫಿ ಸಾಅದಿ ಗೆಲುವು ಸಾಧಿಸಿದರು. ಈ ಗೆಲುವಿಗೆ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಜಮೀರ್ ಅಹಮದ್ ಶಿಷ್ಯನಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಪಟ್ಟ
ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಕಾನೂನು ಸಚಿವ ಮಾಧುಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಪಕ್ಷದ ಮುಖಂಡರು ಶಾಫಿ ಸಾಅದಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ರಾಜ್ಯದ ವಕ್ಫ್ ಮಂಡಳಿ ಅಧ್ಯಕ್ಷ ಮಹಮ್ಮದ್ ಯೂಸುಫ್ ನಿಧನ
ಚುನಾವಣೆ ನಡೆಯಿತು; ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಮಂಡಳಿ ಕಚೇರಿಯಲ್ಲಿ ಬುಧವಾರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. 10.30ರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿತ್ತು. ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು.
ಹೆಚ್ಚು ಮತಗಳನ್ನು ಪಡೆದ ಶಾಫಿ ಸಾಅದಿ ಗೆಲವು ಸಾಧಿಸಿದರು. ಈ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿಗೆ ವಕ್ಫ್ ಮಂಡಳಿ ಅಧ್ಯಕ್ಷ ಹುದ್ದೆ ಒಲಿಯಿತು.
ಶಾಫಿ ಸಾಅದಿ ಎರಡು ಬಾರಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಎರಡು ಅವಧಿಗೆ ವಕ್ಫ್ ಮಂಡಳಿ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು. ಪ್ರಸ್ತುತ ಶಾಫಿ ಸಾಅದಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಚುನಾವಣೆ ವೇಳೆ ಮಾಜಿ ಸಚಿವ ತನ್ವೀರ್ ಸೇಠ್, ರಾಜ್ಯ ಸಭಾಸದಸ್ಯ ನಾಸೀರ್ ಹುಸೇನ್, ಶಾಸಕಿ ಕನೀಝ್ ಫಾತಿಮಾ ಮುಂತಾದವರು ಉಪಸ್ಥಿತರಿದ್ದರು.
ಸಚಿವರ ಸಂತಸ; ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷರ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. 'ಇಂದು ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾಗಿರುವ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಶಾಫಿ ಸಾಅದಿ ಅವರಿಗೆ ಹೂಗುಚ್ಛ ನೀಡಿ, ಅಭಿನಂದನೆ ಸಲ್ಲಿಸಲಾಯಿತು' ಎಂದು ಹೇಳಿದ್ದಾರೆ.
'ಕರ್ನಾಟಕದ ಇತಿಹಾಸದಲ್ಲೇ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಸಂದರ್ಭದಲ್ಲಿ ಕಾನೂನು ಸಚಿವರಾದ ಶ್ರೀ ಮಾಧುಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿ ಕುಮಾರ್, ಪಕ್ಷದ ಮುಖಂಡರು, ವಕ್ಫ್ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಕ್ಫ್ ಮಂಡಳಿ ಬಗ್ಗೆ; ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ವಕ್ಪ್ ಕಾಯ್ದೆ 1995ರ ಅಡಿಯಲ್ಲಿ ರಚಿಸಲಾದ ಶಾಸನ ಬದ್ಧ ಸಂಸ್ಥೆ. ವಕ್ಫ್ ಮಂಡಳಿಯು ವಿವಿಧ ವಿಭಾಗಗಳಿಂದ ನಾಮ ನಿರ್ದೇಶಿತ ಮತ್ತು ಚುನಾಯಿತ ಸದಸ್ಯರನ್ನು ಹೊಂದಿದೆ. ಮಂಡಳಿಯ ಅಧ್ಯಕ್ಷರನ್ನು ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ.
ಮಂಡಳಿಯ ಸಿಬ್ಬಂದಿಯ ನೇತೃತ್ವವನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಹಿಸಿಕೊಳ್ಳುತ್ತಾರೆ. ಈ ಹುದ್ದೆಗೆ ಹಿರಿಯ ಕೆಎಎಸ್ ಅಧಿಕಾರಿ ನೇಮಕವಾಗಿರುತ್ತಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಇದೆ.
ವಕ್ಪ್ ಮಂಡಳಿಯು ಎಲ್ಲಾ ವಕ್ಫ್ ಸಂಸ್ಥೆಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತದೆ. ಕಾಲಕಾಲಕ್ಕೆ ವಕ್ಫ್ ಸಂಸ್ಥೆಗಳಿಗೆ ಚುನಾಯಿತ ಅಥವಾ ನಾಮ ನಿರ್ದೇಶನದ ನಂತರ ತಮ್ಮ ನಿರ್ವಹಣಾ ಯೋಜನೆಯ ಪ್ರಕಾರ ಜಮಾತ್‌ನಿಂದ ಮುತವಾಲೀಗಳು ಮತ್ತು ವ್ಯವಸ್ಥಾಪನಾ ಸಮಿತಿಗಳನ್ನು ನೇಮಿಸುತ್ತದೆ. ಎಲ್ಲಾ ವಕ್ಫ್ ಸಂಸ್ಥೆಗಳು ತಮ್ಮ ಬಜೆಟ್ ಅಂದಾಜು ಮತ್ತು ಹಣಕಾಸು ಖಾತೆಗಳನ್ನು ಮಂಡಳಿಗೆ ಸಲ್ಲಿಸಬೇಕಾಗುತ್ತದೆ ಮತ್ತು ಮಂಡಳಿಯು ಪ್ರಮುಖ ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ಮಾಡುತ್ತದೆ.