ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಗ್ನಿಶಾಮಕ ದಳ ಮುಂದಾಳತ್ವ ವಹಿಸಬೇಕು: ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರು, ಜುಲೈ 26: ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ರಾಜ್ಯದ ಯಾವ ಮೂಲೆಯಲ್ಲಿ ಅನಾಹುತ ಸಂಭವಿಸಿದರೂ, ಅಗ್ನಿಶಾಮಕ ದಳ ತುರ್ತಾಗಿ ಜನ ರಕ್ಷಣೆಗೆ ಮುಂದಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತು ಬುಧವಾರ ತಮ್ಮ ಕಚೇರಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳ ಜೊತೆಗೆ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ ಸಚಿವರು, ರಾಜ್ಯದಲ್ಲಿ ಮಳೆ ದಿನದಿಂದ ದಿನಕ್ಕೆ ಚುರುಗಾಗುತ್ತಿದೆ. ಕೆಲವೆಡೆ ಮನೆ ಹಾಗೂ ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ, ಕೆಲವೆಡೆ ಜನವಸತಿ ಪ್ರದೇಶಗಳ ಸಂಪರ್ಕ ರಸ್ತೆ ಕಡಿತವಾಗಿದೆ. ಇದನ್ನು ಬಿಟ್ಟತೆ ರಾಜ್ಯದಲ್ಲಿ ಬೇರೆ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಅನಾಹುತ ಸಂದರ್ಭದಲ್ಲಿ ಎನ್ ಡಿಆರ್ ಎಫ್ ತುಕಡಿಗೆ ಕಾಯುವ ಮುನ್ನ ಅಗ್ನಿಶಾಮಕ ದಳ ತುರ್ತಾಗಿ ಜನ ರಕ್ಷಣೆಗೆ ಮುಂದಾಗಬೇಕು ಎಂದರು.

ಪ್ರಕೃತಿ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಆಪ್ತಮಿತ್ರ ಯೋಜನೆ ಜಾರಿಗೆ ತರಲಾಗಿದೆ. ಅಗ್ನಿಶಾಮಕ ದಳ ಈವರೆಗೆ ತನ್ನ ಸಿಬ್ಬಂದಿಗಳ ಜೊತೆಗೆ ಸಾವಿರಾರು ಸಾರ್ವಜನಿಕರಿಗೆ, ವಾಲೆಂಟರಿಗಳಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತರಬೇತಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ವಾಲೆಂಟರಿಗಳಿಗೆ ತರಬೇತಿ ನೀಡಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.
ಹೊಸ ಉಪಕರಣ ಖರೀದಿಗೆ ಹಣದ ಅಗತ್ಯ ಇದ್ದರೆ ಅದನ್ನು ಪೂರೈಸಲು ಸರ್ಕಾರ ಬದ್ದವಾಗಿದೆ. ಆದರೆ, ಜನರ ಹಣ ಪೋಲಾಗದಂತೆ ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಅಗ್ನಿಶಾಮಕ ದಳ ಪರಿಣಾಮಕಾರಿ ತಂಡ ರಚಿಸಬೇಕು. ರಾಜ್ಯ ಮೀಸಲು ಪಡೆಯನ್ನೂ ಈ ಕೆಲಸಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು" ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು. ಇನ್ನೂ ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications