ನೀತಿ ಸಂಹಿತೆ ಉಲ್ಲಂಘನೆ: ಎಂಪಿ ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು, ಏಪ್ರಿಲ್. 07: ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಅನೇಕ ಕಡೆ ಇದು ಉಲ್ಲಂಘನೆಯಾಗುತ್ತಿದೆ. ರಾಜಕೀಯ ನಾಯಕರು ಕೂಡ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸೇರಿದ್ದಾರೆ.
ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಶುಕ್ರವಾರ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹೊನ್ನಾಳಿ ಶಾಸಕರಾಗಿರುವ ರೇಣುಕಾಚಾರ್ಯ ಅವರು ಪೂರ್ವಾನುಮತಿ ಇಲ್ಲದೆ ರಾಜಕೀಯ ಕಾರ್ಯಕ್ರಮ ನಡೆಸಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಮಾದರಿ ನೀತಿ ಸಂಹಿತೆಯ ಪ್ರಕಾರ, ಚುನಾವಣಾ ಆಯೋಗ ಅಥವಾ ಪೊಲೀಸ್ ಇಲಾಖೆಯ ಅನುಮತಿಯಿಲ್ಲದೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರು ರಾಜಕೀಯ ಸ್ವರೂಪದ ಸಭೆಗಳು ಅಥವಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
ಎಂಪಿ ರೇಣುಕಾಚಾರ್ಯ ಅನುಮತಿ ಪಡೆಯದೆ ಶಿವಾನಂದ ಸರ್ಕಲ್ ಬಳಿಯ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿದ್ದರು. ಸಭೆಯ ವೇಳೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಸ್ಟೇಜ್ ಮೇಲೆ ರೇಣುಕಾಚಾರ್ಯ ಮಾತನಾಡುತ್ತಿದ್ದ ವೇಳೆಯೇ ಮೈಕ್ ಕಸಿದುಕೊಂಡು ಅಧಿಕಾರಿಗಳು ಕಾರ್ಯಕ್ರಮ ನಿಲ್ಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 171 E ಮತ್ತು 717 I ಅಡಿಯಲ್ಲಿ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್ ಅನುಮತಿ ಪಡೆದು ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ವಿವರಗಳು ನಡೆಯುತ್ತಿವೆ. ಬಿಜೆಪಿ ಶಾಸಕರು ಕಳೆದ ವರ್ಷ ತಮ್ಮ ಮಗಳಿಗೆ ನಕಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಶಾಸಕರ ಕುಟುಂಬವು ನಿಜವಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದೆ.

ರೇಣುಕಾಚಾರ್ಯ ಅವರ ಕುಟುಂಬದ ಸದಸ್ಯರ ವಿರುದ್ಧ ತನಿಖೆ ನಡೆಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಪಿ ರವೀಂದ್ರನಾಥ್ ಅವರು ನಂತರ ಮಾನಸಿಕ ಕಿರುಕುಳವನ್ನು ಆರೋಪಿಸಿ ರಾಜೀನಾಮೆ ಸಲ್ಲಿಸಿದರು. ಇನ್ನೂ, ರಾಜ್ಯದಲ್ಲಿ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಕಳೆದ ವರ್ಷವೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಸುದ್ದಿಯಾಗಿದ್ದರು.
ಇನ್ನು, ಅಕ್ರಮ ಆಸ್ತಿ ಗಳಿಕೆ ಸಂಬಂಧ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಪ್ರಶ್ನಿಸಿ ರೇಣುಕಾಚಾರ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ ನಟರಾಜನ್ ಅವರು ವಜಾಗೊಳಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಶಾಸಕ ರೇಣುಕಾಚಾರ್ಯ ರಾಜಕೀಯ ಕಾರ್ಯಕ್ರಮ ನಡೆಸಿದ್ದಾರೆ. ಇನ್ನು ಟಿಕೆಟ್ ಘೋಷಣೆಯಾಗದಿದ್ದರೂ ತಾನೇ ಅಭ್ಯರ್ಥಿ ಎಂದು ಹೇಳಿ ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications