ಅಂತೂ ಇಂತೂ ಸತ್ಯ ಸಂಗತಿ ಹೊರಬಿದ್ದಿದೆ : ಸಿದ್ದು ಕಾಲೆಳೆದ ಅಶೋಕ
Recommended Video

ಬೆಂಗಳೂರು, ಏಪ್ರಿಲ್ 21 : "ಅಂತೂ ಇಂತೂ ಸತ್ಯ ಸಂಗತಿ ಹೊರಬಿದ್ದಿದೆ!" ಇದು ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರು ಸಿದ್ದರಾಮಯ್ಯ ಅವರ ಬಗ್ಗೆ ನೀಡಿರುವ ಪ್ರತಿಕ್ರಿಯೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಸಿದ್ದರಾಮಯ್ಯ ಅವರು ಬಾಗಲಕೋಟೆಯ ಬಾದಾಮಿಯಿಂದಲೂ ಸ್ಪರ್ಧಿಸುವ ಬಗ್ಗೆ ಹಾರಿಕೆಯ ಉತ್ತರ ನೀಡುತ್ತಲೇ ಬಂದಿದ್ದಾರೆ. ಆದರೆ, ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯನವರೇ ಸ್ಪಷ್ಟ ಸೂಚನೆ ನೀಡುತ್ತಿರುವುದರಿಂದ ಅಶೋಕ್ ಈರೀತಿ ಪ್ರತಿಕ್ರಿಯಿಸಿದ್ದಾರೆ.
ಪದ್ಮನಾಭ ನಗರದಿಂದ ಬಿಜೆಪಿ ಹುರಿಯಾಳಾಗಿ ಕಣಕ್ಕಿಳಿದಿರುವ ಆರ್ ಅಶೋಕ್ ಅವರು ಟ್ವಿಟ್ಟರಿನಲ್ಲಿ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಯಾಗಿ 2014ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಕೂಡ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಅವರಿಗೆ ಸೋಲುವ ಹೆದರಿಕೆ ಇತ್ತೆ ಎಂದು ಟ್ವಿಟ್ಟಿಗರೊಬ್ಬರು ಕುಟುಕಿದ್ದಾರೆ.
Finally cat is out of the bag! CM @siddaramaiah has confirmed contesting from Badami as well. When the Govt is involved in corruption & caste politics rather than development activities, it is obvious that your own people (Chamundeshwari) will ditch you & look for suitable leader pic.twitter.com/dWCqeinG0z
— R Ashoka (@RAshokaBJP) April 21, 2018
"ಸಿದ್ದರಾಮಯ್ಯ ಅವರು ಬಾದಾಮಿಯಿಂದಲೂ ಸ್ಪರ್ಧಿಸುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಬದಲು ಭ್ರಷ್ಟಾಚಾರ ಮತ್ತು ಜಾತಿ ರಾಜಕಾರಣದಲ್ಲಿ ಸರಕಾರ ಮುಳುಗಿರುವಾಗ ನಿಮ್ಮದೇ ಕ್ಷೇತ್ರದ (ಚಾಮುಂಡೇಶ್ವರಿ) ಜನ ನಿಮ್ಮನ್ನು ಮುಳುಗಿಸಲಿದ್ದಾರೆ, ಬೇರೆ ನಾಯಕರನ್ನು ಹುಡುಕುತ್ತಿದ್ದಾರೆ" ಎಂದು ಆರ್ ಅಶೋಕ್ ಅವರು ಟ್ವೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸುವ ಅಥವಾ ಸ್ಪರ್ಧಿಸದಿರುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯನವರು ಯಾವ ಗುಟ್ಟನ್ನೂ ಬಿಟ್ಟುಕೊಡುತ್ತಿಲ್ಲ. ಆದರೆ, ಸಿದ್ದರಾಮಯ್ಯ ಅವರ ಮನದಲ್ಲಿ ಇರುವ ಇಂಗಿತ ಏನೆಂದು ಬಾದಾಮಿ ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ ಅವರನ್ನು ಕೇಳಿದರೆ ಹೇಳಬಲ್ಲರು.
ಶುಕ್ರವಾರ ಚಾಮುಂಡೇಶ್ವರಿಯಿಂದ ನಾಮಪತ್ರ ಸಲ್ಲಿಸಿರುವ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ, ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ನಿರಾಕರಿಸುತ್ತಿದ್ದಾರಾದರೂ, ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಹೈಕಮಾಂಡ್ ಗೆ ಮನವಿ ಸಲ್ಲಿಸಿದ್ದು ಸುಳ್ಳಲ್ಲ. ಈ ಮನವಿಯನ್ನು ಆರಂಭದಲ್ಲಿಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಚಾಮುಂಡೇಶ್ವರಿಯಿಂದ ಮಾತ್ರ ಸ್ಪರ್ಧಿಸಬೇಕೆಂದು ತಾಕೀತು ಮಾಡಿದ್ದಾರೆ.
ಕಾಂಗ್ರೆಸ್ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ಹೆಸರು ಕಂಡಿದ್ದಿಲ್ಲ. ಬದಲಿಗೆ, ಸ್ಥಳೀಯ ವೈದ್ಯರಾಗಿರುವ ಡಾ. ದೇವರಾಜ್ ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಅವರಿಗೆ ಇನ್ನೂ ಬಿ ಫಾರಂ ನೀಡಿಲ್ಲದಿರುವುದು ಭಾರೀ ಅನುಮಾನಗಳಿಗೆ ಕಾರಣವಾಗಿದೆ ಮತ್ತು ಸಿದ್ದರಾಮಯ್ಯನವರೇ ಅಲ್ಲಿಂದಲೂ ಸ್ಪರ್ಧಿಸುತ್ತಿರುವ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿದೆ.
ಸಿದ್ದರಾಮಯ್ಯನವರನ್ನು ಹೊರತುಪಡಿಸಿದರೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮಾತ್ರ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ಅವರು ಎದುರಾಳಿಯಾಗಿದ್ದರೆ, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಕೂಡ ಕೊರಟಗೆರೆ ಅಲ್ಲದೆ ಪುಲಕೇಶಿ ನಗರದಿಂದ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡಿಗೆ ಮನವಿ ಸಲ್ಲಿಸಿದ್ದರು. ಆದರೆ, ಅವರ ಮನವಿಯನ್ನು ಹೈಕಮಾಂಡ್ ಪುರಸ್ಕರಿಸಿಲ್ಲ. ಕಳೆದ ಚುನಾವಣೆಯಲ್ಲಿ ಪರಮೇಶ್ವರ ಅವರು ಕೊರಟಗೆರೆಯಲ್ಲಿ ಜೆಡಿಎಸ್ ನ ಸುಧಾಕರ ಲಾಲ್ ವಿರುದ್ಧ ಹೀನಾಯವಾಗಿ ಸೋತಿದ್ದರು ಮತ್ತು ಮುಖ್ಯಮಂತ್ರಿ ಕುರ್ಚಿಯನ್ನೂ ತಪ್ಪಿಸಿಕೊಂಡಿದ್ದರು.












Click it and Unblock the Notifications