ಶಿಕ್ಷಣ ನೀತಿ ರೂಪಿತಗೊಳ್ಳುತ್ತಿರುವುದು ನಾಗಪುರದಲ್ಲಿ: ಅಮೀನ್ ಮಟ್ಟು
ಮಂಗಳೂರು, ಡಿ 21: ಈ ದೇಶದ ಶಿಕ್ಷಣ ನೀತಿ, ಸಾಂಸ್ಕೃತಿಕ ನೀತಿಯನ್ನು ರೂಪಿಸುತ್ತಿರುವುದು ಚುನಾಯಿತ ಸರ್ಕಾರವಲ್ಲ. ಅದು ರೂಪಿತಗೊಳ್ಳುತ್ತಿರುವುದು ನಾಗಪುರದಲ್ಲಿ ಮತ್ತು ಕೇಶವ ಕೃಪಗಳಂತ ಕಡೆಗಳಲ್ಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತ ಪಡಿಸಿದ್ದಾರೆ.
ಇಲ್ಲಿನ ನಂತೂರು ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಮಂಗಳೂರು ಆಯೋಜಿಸಿದ್ದ 'ಜನನುಡಿ 2015' ಸಮಾವೇಶದ ಸಮಾರೋಪದಲ್ಲಿ (ಡಿ 20) ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅಮೀನ್, ಇಂತಹ ಹಿನ್ನೆಲೆಯಲ್ಲಿದ್ದು ಎಲ್ಲವನ್ನೂ ನಿಯಂತ್ರಿಸುವವರು ಯಾರೂ ಎದುರಿಗೆ ಬರುವುದಿಲ್ಲ. ಅಂತಹ ಸಂವಿಧಾನೇತರ ಶಕ್ತಿಗಳು ಸರ್ಕಾರದ ಕೆಲಸವನ್ನು ತಾವೇ ಮುಂದಾಗಿ ಮಾಡುತ್ತಿವೆ ಎಂದಿದ್ದಾರೆ. (ಜನನುಡಿ ಮೊದಲ ದಿನದ ವರದಿ)
ಎಸ್.ಎನ್. ಬಾಲಗಂಗಾಧರನಂತ ವ್ಯಕ್ತಿ ಅಂಬೇಡ್ಕರ್ ಬಗ್ಗೆ ಈಡಿಯಟ್ ಎಂದು ಕರೆದಿರುವಾಗ ರಾಜ್ಯದಲ್ಲಿ ದಲಿತ ಸಂಘಟನೆಗಳಿಗೆ ಈ ವಿಷಯವೇ ತಿಳಿಯದ ಹಾಗೆ ಇರುವುದು ಏನನ್ನು ಸೂಚಿಸುತ್ತದೆ? ಕಲಬುರಗಿಯವರನ್ನು ಛೋಟಾ ರಾಜನ್ ಗೆ ಹೋಲಿಸುವ ಮತ್ತು ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ಕೀಳುಮಟ್ಟದ ಬಾಲಗಂಗಾಧರನ ವಿರುದ್ಧ ಇಷ್ಟೊಂದು ಸಹಿಷ್ಣುತೆ ಅಗತ್ಯವಿಲ್ಲ ಎಂದು ದಿನೇಶ್ ಅಮೀನ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಚಿಂತಕ ರೆಹಮತ್ ತರೀಕೆರೆ, ಈ ದೇಶದ ಸಾಂಸ್ಕೃತಿಕ ವಿಸ್ತಾರದ ಕುರಿತು ಪರಮ ಅಜ್ಞಾನ ಹೊಂದಿರುವುದೇ ದೇಶದ ಮೂಲಭೂತವಾದಿಗಳು, ಕೋಮುವಾದಿಗಳ ದೊಡ್ಡ ಸಮಸ್ಯೆ. ಇಂಥವರಿಗೆ ದೇಶದ ಸಾಂಸ್ಕೃತಿಕ ವಾರಸುದಾರಿಕೆಯ ಹಕ್ಕಿಲ್ಲ ಎಂದು ರೆಹಮತ್ ಹೇಳಿದ್ದಾರೆ. (ಕುಕ್ಕೇಯಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ)
ಇಂತವರು ಎಲ್ಲಾ ಧರ್ಮಗಳಲ್ಲಿ ಏಕರೂಪೀ ಸಂಸ್ಕೃತಿಯನ್ನು ಹೇರುವುದರ ವಿರುದ್ಧ ನಾವು ಪ್ರತಿಭಟಿಸಬೇಕಾಗಿದೆ. ಧರ್ಮ-ಜಾತಿಗಳ ಬೇಲಿಯನ್ನು ಸೀಮೋಲ್ಲಂಘನೆ ಮಾಡಿರುವ ಸಂಸ್ಕೃತಿಯನ್ನು ಇಡೀ ಭಾರತದ ತುಂಬ ತಿರುಗಾಡಿ ಕಂಡಿದ್ದೇನೆ.
ಶುದ್ಧ ಇಸ್ಲಾಂ, ಶುದ್ಧ ಹಿಂದುತ್ವ ಎಂದು ಹುಡುಕಲು ಹೊರಟವರು ಅಸಹಿಷ್ಣುಗಳಾಗಿರುವುದರಿಂದ ಅಂತವರ ವಿರುದ್ಧ ನಾವು ಧ್ವನಿ ಎತ್ತಬೇಕಾಗಿದೆ ಎಂದು ರೆಹಮತ್ ಅಭಿಪ್ರಾಯ ಪಟ್ಟಿದ್ದಾರೆ.
ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ ಮೌಲ್ಯ, ಮುಂದೆ ಓದಿ..

ನಾಥ, ಶಾಕ್ತ, ಸೂಫಿ ಪಂಥಗಳ ಹೆಮ್ಮೆಯ ವಾರಸುದಾರ
ನನ್ನ ಅಧ್ಯಯನಗಳ ಭಾಗವಾಗಿ ನಾಥ, ಶಾಕ್ತ, ಸೂಫಿ ಪಂಥಗಳ ಹೆಮ್ಮೆಯ ವಾರಸುದಾರ ನಾನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಆದರೆ ಇಂದು ಇಂತಹ ಕೂಡು ಸಂಸ್ಕೃತಿಯನ್ನು ನಿರಾಕರಿಸುವ ಕೆಲಸ ನಡೆಯುತ್ತಿರುವುದು ಆತಂಕಕಾರಿ ಎಂದು ರೆಹಮತ್ ವಿಷಾದ ವ್ಯಕ್ತ ಪಡಿಸಿದ್ದಾರೆ.

ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ ಮೌಲ್ಯ
ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ ಮೌಲ್ಯಗಳನ್ನು ಹೇರಲಾಗುತ್ತಿರುವುದು ಆತಂಕದ ವಿಚಾರ. ಮುಸಲ್ಮಾನರ ಮೇಲಿನ ದ್ವೇಷ ಸಾಧನೆ ಮತ್ತು ಶೂದ್ರ ಸಂಸ್ಕೃತಿಯ ತಿರಸ್ಕಾರವನ್ನು ಪಠ್ಯಗಳ ಮೂಲಕ ಬಿತ್ತಲಾಗುತ್ತಿದೆ. ಎಳೆಯ ಮಕ್ಕಳಲ್ಲಿ ಮತದ್ವೇಷ ತುಂಬುವ ಕೆಲಸ ಪಠ್ಯಪುಸ್ತಕಗಳಲ್ಲಿ ನಡೆಯುತ್ತಿರುವುದು ಆತಂಕಕಾರಿ. ಒಂದು ಸಮುದಾಯವನ್ನು ರಾಕ್ಷಸೀಕರಿಸಿ ಮತ್ತೊಂದು ಬಹುಸಂಖ್ಯಾತ ಸಮುದಾಯವನ್ನು ಪಠ್ಯಕ್ಕೆ ತರದೇ ಇರುವುದು ಅನ್ಯಾಯವಾಗಿದೆ - ರೆಹಮತ್ ತರೀಕೆರೆ

ನರೇಂದ್ರ ನಾಯಕ್
ವಿಚಾರವಾದಿ ನರೇಂದ್ರ ನಾಯಕ್ ಮಾತನಾಡುತ್ತಾ, ನಮ್ಮ ದೇಶದ ದೊಡ್ಡ ದುರಂತ ಎಂದರೆ ನಮ್ಮ ತಂತ್ರಜ್ಞಾನ 21ನೇ ಶತಮಾನದಲ್ಲಿದ್ದು ನಮ್ಮ ಮನಸ್ಥಿತಿಗಳು 16ನೇ ಶತಮಾನದಲ್ಲಿರುವುದು. ನಮ್ಮ ಚಿಂತನೆಗಳನ್ನು ಸಹ 21ನೇ ಶತಮಾನಕ್ಕೆ ತರಬೇಕಾದ ಅಗತ್ಯ ಇಂದಿದೆ. ಖೋಟಾ ವಿಜ್ಞಾನ ಜನರ ಮೇಲೆ ದಾಳಿ ಮಾಡುತ್ತಿದೆ, ಇದರ ವಿರುದ್ಧ ನಾವು ಹೋರಾಟ ನಡೆಸಬೇಕಾಗಿದೆ ಎಂದು ನಾಯಕ್ ಪ್ರತಿಪಾದಿಸಿದ್ದಾರೆ.

ದಿನೇಶ್ ಅಮೀನ್ ಮಟ್ಟು
ಅಸಹಿಷ್ಣುತೆ ವಿರುದ್ಧದ ಹೋರಾಟ ಈಗಿನದಲ್ಲ. ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಇವರೆಲ್ಲರೂ ನಡೆಸಿದ್ದು ಅಸಹಿಷ್ಣುತೆಯ ವಿರುದ್ಧದ ಹೋರಾಟ. ಇಲ್ಲಿ ಬಹುಸಂಖ್ಯಾತ ತಳ ಸಮುದಾಯಗಳ ಬಗ್ಗೆ ಅಸಹಿಷ್ಣುತೆ ಬಹಳ ಹಿಂದಿನಿಂದಲೂ ಇದೆ. ಇಂದು ಪ್ರಭುತ್ವವೇ ಅಸಹಿಷ್ಣುತೆಗೆ ಬೆಂಗಾವಲಾಗಿ ನಿಂತಿರುವುದೇ ಬಹು ದೊಡ್ಡ ವ್ಯತ್ಯಾಸ - ದಿನೇಶ್ ಅಮೀನ್ ಮಟ್ಟು.

ದಕ್ಷಿಣ ಕನ್ನಡದ ಜನ
ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಎತ್ತರದಲ್ಲಿರುವ ದಕ್ಷಿಣ ಕನ್ನಡದ ಜನರು ಹೇಗೆ ಮನುಷ್ಯ ಸಂಬಂಧಗಳಲ್ಲಿ ಸೂಕ್ಷ್ಮತೆಗಳನ್ನು ಕಳೆದುಕೊಂಡು ಬದುಕುತ್ತಿದ್ದಾರೆ. ದಕ್ಷಿಣ ಕನ್ನಡದ ಹೆಮ್ಮೆಯ ಶಿವರಾಮ ಕಾರಂತರು ವಿಶ್ವವಿದ್ಯಾಲಯವಾಗಿ ಕೆಲಸ ಮಾಡಿ ಬ್ರಿಟಿಷರಿಂದ ಬಿಡುಗಡೆಯಾಗಲಿದ್ದ ಭಾರತಕ್ಕೆ ಜನಮಾನಸವನ್ನು ಸಿದ್ಧಪಡಿಸುತ್ತಿದ್ದರು. ಆದರೆ ಇಂದು ಈ ದಕ್ಷಿಣ ಕನ್ನಡದ ನೆಲ ಯಾಕೆ ಕಟಕಟೆಯಲ್ಲಿ ನಿಂತಿದೆ - ರೆಹಮತ್ ತರೀಕೆರೆ.

ಪ್ರಶಸ್ತಿ ವಾಪ್ಸಿ
ದೇಶದಲ್ಲಿ ನಡೆಯುತ್ತಿರುವ ಪ್ರಶಸ್ತಿ ವಾಪಾಸ್ ಚಳವಳಿ ಬಹಳ ದೊಡ್ಡ ಸಂಚಲನವನ್ನುಂಟುಮಾಡಿದೆ. ಕವಿಗಳು ಇನ್ನೂ ಹೆಚ್ಚು ಕವಿತೆಗಳನ್ನು ಬರೆಯುಬೇಕು. ಕಾದಂಬರಿಕಾರರು ಇನ್ನೂ ಹೆಚ್ಚು ಕಾದಂಬರಿಗಳನ್ನು ಬರೆಯಬೇಕು. ಲೇಖಕರು ಇನ್ನೂ ಹೆಚ್ಚು ಲೇಖನಗಳನ್ನು ಬರೆಯುವ ದೃಢ ನಿರ್ಧಾರ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದೂ ಅದನ್ನು ಚಲಾಯಿಸದಿರುವುದು ದೊಡ್ಡ ಪಾಪದ ಕೆಲಸ. ಇದು ಜೀವವಿರೋಧಿಯೂ ಸಹ ಆಗಿದೆ - ದಿನೇಶ್ ಅಮೀನ್

ಬಿಜೆಪಿ ಜೊತೆಯಲ್ಲಿ ಕೋಮುವಾದ ಉಚಿತ
ನಮ್ಮ ದೇಶದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳ ನಡುವೆ ಅಂತಹ ವ್ಯತ್ಯಾಸಗಳಿಲ್ಲ. ಎರಡೂ ಸಹ ಮಾರುಕಟ್ಟೆಯ ಪರವಾದ ಪಕ್ಷಗಳೇ. ಬಿಜೆಪಿ ಜೊತೆಯಲ್ಲಿ ಕೋಮುವಾದವನ್ನೂ ಉಚಿತವಾಗಿ ನೀಡುತ್ತಿದೆ ಅಷ್ಟೆ. 90ರ ನಂತರ ಎರಡೂ ನಿರ್ದಿಷ್ಟ ಕಾರ್ಯಕ್ರಮವನ್ನು ಜಾರಿಗೆ ತರುತ್ತಿವೆ. ಇತರೆ ಪ್ರಾದೇಶಿಕ ಪಕ್ಷಗಳಿಗೆ ಸ್ವತಂತ್ರವಾದಂತಹ ಆರ್ಥಿಕ ನೀತಿಗಳು ಈ ಪಕ್ಷಗಳಿಗೆ ಇಲ್ಲ. ಎರಡೂ ಪಕ್ಷಗಳ ಧೋರಣೆಯಿಂದ ಬಹುದೊಡ್ಡ ಅಸಮಾನತೆ. ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಗಳು ಹೆಚ್ಚಾಗುತ್ತಿವೆ - ಜನನುಡಿಯ 'ಅಭಿವೃದ್ಧಿಯ ಸವಾಲುಗಳು' ಗೋಷ್ಠಿಯಲ್ಲಿ ಡಾ. ಎಂ. ಚಂದ್ರಪೂಜಾರಿ

ರೆಹಮತ್ ತರೀಕೆರೆ
ಸೂಫಿಧರ್ಮವು ಇಸ್ಲಾಂ ಅಲ್ಲ ಎಂದು ಹೇಳುವ ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ನಿಜಕ್ಕೂ ಸಾಂಸ್ಕೃತಿಕ ಅನಕ್ಷರಸ್ಥರಾಗಿದ್ದಾರೆ. ಕೂಡಿಬಾಳುವ ಸಂಸ್ಕೃತಿ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿದೆ. ಇಸ್ಲಾಂ ಇಲ್ಲಿ ಬಹು ಹಿಂದೆಯೇ ಭಾರತೀಕರಣಗೊಂಡಿದೆ. ಮತೀಯವಾದಿ ಸಂಘಟನೆಗಳಾಚೆಗೆ ಈ ದೇಶ ನಾವೆಲ್ಲ ಹೆಮ್ಮಪಡುವ ಸಂಸ್ಕೃತಿಯನ್ನು ನಿರ್ಮಾಣ ಮಾಡಿದೆ ಎಂದರು.












Click it and Unblock the Notifications