ರೈತರ ಜೊತೆ ಯಡಿಯೂರಪ್ಪ ಸಭೆ ವಿಫಲವಾಗಿದ್ದೇಕೆ?
ಬೆಂಗಳೂರು, ಸೆಪ್ಟೆಂಬರ್ 25 : ಕರ್ನಾಟಕ ಬಂದ್ಗೆ ಕರೆ ನೀಡಿರುವ ರೈತ ಮುಖಂಡರ ಜೊತೆ ಮುಖ್ಯಮಂತ್ರಿಗಳು ನಡೆಸಿದ ಸಭೆ ವಿಫಲವಾಗಿದೆ. ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ ನಡೆಯುವುದು ಖಚಿವಾಗಿದೆ.
ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರೈತ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ಮಾತುಕತೆ ವಿಫಲವಾಯಿತು.
ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟವನ್ನು ಪ್ರತಿನಿಧಿಸುವ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಆಗಿತ್ತು. ಆದರೆ, ಸಭೆ ವಿಫಲವಾಯಿತು. ಕಂದಾಯ ಸಚಿವ ಆರ್. ಅಶೋಕ್, ಕೃಷಿ ಸಚಿವ ಬಿ. ಸಿ. ಪಾಟೀಲ್ ಮುಂತಾದವರು ಸಭೆಯಲ್ಲಿದ್ದರು.
ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋದಲ್ಲಿ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಮಾರುತಿ ಮಾನ್ಪಡೆ, ಗುರುಪ್ರಸಾದ್ ಕೆರಗೋಡು, ವಿ.ಗಾಯತ್ರಿ, ಕವಿತ ಕುರುಗಂಟಿ, ಟಿ. ಯಶವಂತ, ಡಾ. ಪ್ರಕಾಶ್ ಕಮ್ಮರಡಿ ಇದ್ದರು.

ಅಪಾಯಗಳ ಬಗ್ಗೆ ಸಿಎಂಗೆ ವಿವರಣೆ
ಕರ್ನಾಟಕ ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸಿರುವ ಭೂ ಸುಧಾರಣೆ ಕಾಯ್ದೆ / ಎ.ಪಿ.ಎಂ.ಸಿ ಕಾಯ್ದೆ / ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮಸೂದೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು. ನಿಯೋಗ ಸಭೆಯಲ್ಲಿ ಈ ಮೂರು ಮಸೂದೆಗಳಿಂದ ರೈತ, ದಲಿತ, ಕಾರ್ಮಿಕರ ಸಮುದಾಯಗಳಿಗೆ ಆಗುವ ತೀವ್ರ ಅಪಾಯಗಳ ಬಗ್ಗೆ ವಿವರಿಸಿತು.

ಕಾನೂನುಗಳನ್ನು ವಿರೋಧಿಸಿ
ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಸಹ ರಾಜ್ಯ ಸರ್ಕಾರ ವಿರೋಧಿಸಬೇಕು ಎಂದು ಒತ್ತಾಯಿಸಲಾಯಿತು. ಕೇಂದ್ರ ಸರ್ಕಾರ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ, ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು. ಕೃಷಿ ಪಂಪ್ ಸೆಟ್‌ಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸಲು ಹಾಗು ಮೀಟರ್ ಅಳವಡಿಸಲು ಇದು ಹುನ್ನಾರವಾಗಿದೆ ಎಂದು ತಿಳಿಸಲಾಯಿತು.

ರಾಜ್ಯ ಸರ್ಕಾರ ಒಪ್ಪಿಗೆ ನೀಡಲಿಲ್ಲ
ನಿಯೋಗದ ಹಕ್ಕೊತ್ತಾಯಗಳನ್ನು ಸಮಗ್ರವಾಗಿ ನೋಡದ ಸರ್ಕಾರ ನೆಪಮಾತ್ರಕ್ಕೆ ಕೆಲವು ಅಲ್ಪ ಬದಲಾವಣೆಯನ್ನು ತರಲು ಯೋಚಿಸುವುದಾಗಿ ಹೇಳಿತು. ಇದನ್ನು ಒಪ್ಪುವುದಿಲ್ಲ ಎಂದು ನಿಯೋಗವು ತಿಳಿಸಿತು. ಅಲ್ಲದೆ ಮುಖ್ಯ ಮಂತ್ರಿಗಳು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಗುಣಗಾನವನ್ನು ಮಾಡಿದರು. ಆದ್ದರಿಂದ, ನಿಯೋಗ ಹೋರಾಟ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದೆ.

ಕರ್ನಾಟಕ ಬಂದ್ ನಡೆಯಲಿದೆ
ಸರ್ಕಾರ ಹಾಗೂ ನಿಯೋಗದ ನಡುವಿನ ಮಾತುಕತೆ ಮುರಿದು ಬಿದ್ದ ಕಾರಣ ಹೋರಾಟ ಅನಿವಾರ್ಯವಾಗಿದೆ. ಹಿಂದೆಯೇ ಘೋಷಣೆ ಮಾಡಿದಂತೆ ಐಕ್ಯ ಹೋರಾಟ ಸಮಿತಿ ಈಗಾಗಲೇ ಫೋಷಿಸಿರುವಂತೆ ಸೋಮವಾರ ಕರ್ನಾಟಕ ಬಂದ್ ನಡೆಯಲಿದೆ.












Click it and Unblock the Notifications