ವಿದ್ಯುತ್ ಕೊರತೆ ವಿರುದ್ಧ ಪ್ರತಿಭಟನೆಗೆ ಮೊಸಳೆಯನ್ನೇ ಹಿಡಿದು ತಂದ ರೈತರು
ಹುಬ್ಬಳ್ಳಿ, ಅಕ್ಟೋಬರ್ 25: ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿ ಸಿಡಿದೆದ್ದ ವಿಜಯಪುರ ಜಿಲ್ಲೆಯ ರೈತರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕಚೇರಿಗೆ ಮೊಸಳೆಯನ್ನು ಹಿಡಿದು ತಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಹಗಲಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ರಾತ್ರಿ ವೇಳೆ ಜಮೀನಿಗೆ ಹೋದಾಗ ಕಾಡುಪ್ರಾಣಿಗಳು, ಹಾವುಗಳ ಕಾಟದಿಂದ ಪರದಾಡುವಂತಾಗಿದೆ. ಕಳೆದ ವಾರ ರಾತ್ರಿ ವಿದ್ಯುತ್ ಸರಬರಾಜು ಮಾಡಿದ ನಂತರ ರೈತರೊಬ್ಬರು ತಮ್ಮ ಜಮೀನಿಗೆ ನೀರು ಹಾಕಲು ಹೋದಾಗ ತಮ್ಮ ಕೃಷಿ ಕ್ಷೇತ್ರದಲ್ಲಿ ದೊಡ್ಡ ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿದ್ದರು. ಮೊಸಳೆಯು ಬೇಟೆಯನ್ನು ಹುಡುಕಿಕೊಂಡು ಸಮೀಪದ ಕೃಷ್ಣಾ ನದಿಯಿಂದ ಬಂದಿತ್ತು ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮೊಸಳೆಯನ್ನು ಹಿಡಿದು ವಿದ್ಯುತ್ ಕೇಂದ್ರಕ್ಕೆ ತಂದು ಹೆಸ್ಕಾಂ ಸಿಬ್ಬಂದಿ ಬರುವರೆಗೂ ಠಿಕಾಣಿ ಹೂಡಿದ್ದರು. ತಮ್ಮ ಕಚೇರಿಯಲ್ಲಿ ಮೊಸಳೆಯನ್ನು ಕಂಡು ದಂಗಾದ ಹೆಸ್ಕಾಂ ಅಧಿಕಾರಿಗಳು ರಕ್ಷಣೆಗಾಗಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳನ್ನು ಕರೆ ಮಾಡಿದರು. ನಂತರ ಅರಣ್ಯಾಧಿಕಾರಿಗಳು ಮೊಸಳೆಯನ್ನು ಆಲಮಟ್ಟಿ ಅಣೆಕಟ್ಟಿನಲ್ಲಿ ಬಿಟ್ಟರು.
మాకు కరెంట్ ఇస్తారా ముసలిని సబ్ స్టేషన్లో వదలాలా అంటూ ముసలిని తీసుకొచ్చిన కర్ణాటక రైతులు. pic.twitter.com/HFaaEFDtSG
— Actual India (@ActualIndia) October 21, 2023
ಬಳಿಕ ಹಗಲು ಹೊತ್ತಿನಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು. ನೀರಾವರಿ ಇಲಾಖೆಯ ಪ್ರಕಾರ, ಈ ವರ್ಷ ಅಲ್ಪ ಪ್ರಮಾಣದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತವಾಗಿವೆ. ಅಣೆಕಟ್ಟುಗಳಲ್ಲಿ ನೀರಾವರಿ ಉದ್ದೇಶಕ್ಕೆ ಬಿಡುವಷ್ಟು ನೀರು ಇಲ್ಲ. ರೈತರು ನೀರಾವರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದಾರೆ. ನೀರಾವರಿ ಉದ್ದೇಶಕ್ಕಾಗಿ ಅತಿಯಾದ ವಿದ್ಯುತ್ ಬಳಕೆ ವಿದ್ಯುತ್ ಕೊರತೆಯನ್ನು ಸೃಷ್ಟಿಸಿದೆ ಎಂದು ತಿಳಿದು ಬಂದಿದೆ.
ಬೇಡಿಕೆ ಮತ್ತು ಬಳಕೆಯಲ್ಲಿ ತೀವ್ರ ಏರಿಕೆಯಿಂದಾಗಿ ಕರ್ನಾಟಕದಲ್ಲಿ ವಿದ್ಯುತ್ ಕೊರತೆಯಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೇಳಿದ್ದರು. ಅಕ್ಟೋಬರ್‌ನಲ್ಲಿ ವಿದ್ಯುತ್ ಬಳಕೆ ಸುಮಾರು 10,000 ಮೆಗಾವ್ಯಾಟ್ ಆಗಿದ್ದು, ಕೃಷಿ ಉದ್ದೇಶಗಳಿಗಾಗಿ ಹೆಚ್ಚಿದ ವಿದ್ಯುತ್ ಬಳಕೆಯಿಂದಾಗಿ ರಾಜ್ಯದಲ್ಲಿ 16,000 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ.












Click it and Unblock the Notifications