ಹುಟ್ಟುಹಬ್ಬದಂದು ಪ್ರಚಾರದಲ್ಲಿ ಸಿದ್ದರಾಮಯ್ಯ ಬ್ಯುಸಿ
ಬೆಂಗಳೂರು, ಆ.12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಮ್ಮ ಹುಟ್ಟು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಹುಟ್ಟುಹಬ್ಬದ ಆಚರಣೆಯ ಕಾರ್ಯಗಳಲ್ಲಿ ತೊಡಗಿಕೊಳ್ಳದ ಸಿಎಂ ಉಪ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಶಿಕಾರಿಪುರದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಅವರು ಮತಯಾಚನೆ ಮಾಡಲಿದ್ದಾರೆ.
ಹೌದು ಮಂಗಳವಾರ ಸಿದ್ದರಾಮಯ್ಯ ಅವರ 67ನೇ ಜನ್ಮದಿನ. ಮುಖ್ಯಮಂತ್ರಿಗಳ ಜನ್ಮ ದಿನದ ಹಿನ್ನೆಲೆಯಲ್ಲಿ ಬೆಂಬಲಿಗರು, ಸಚಿವ ಸಂಪುಟದ ಸಹೋದ್ಯೋಗಿಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ, ಎಲ್ಲವನ್ನು ಬದಿಗೊತ್ತಿರುವ ಸಿಎಂ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆಯೇ ನೂರಾರು ಕಾರ್ಯಕರ್ತರು ಸಿಎಂ ಗೃಹ ಕಚೇರಿ ಕೃಷ್ಣಾ ಮುಂದೆ ಸಿದ್ದರಾಮಯ್ಯ ಅವರಿಗೆ ಶುಭಾಶಯ ಹೇಳಲು ಕಾದು ನಿಂತಿದ್ದರು. ಕೆಲವರು ಸಿಎಂಗೆ ಶುಭ ಹಾರೈಸಿದರು. ಆದರೆ, ಸಮಯದ ಅಭಾವವಿದ್ದ ಕಾರಣ ಸಿಎಂ, ನಿಗದಿತ ಕಾರ್ಯಕ್ರಮದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಶಿಕಾರಿಪುರಕ್ಕೆ ತೆರಳಿದ್ದಾರೆ. [ಶಿಕಾರಿಪುರದಿಂದ ಸಿದ್ದರಾಮಯ್ಯ ಮತಬೇಟೆ]
ಕೇಕ್ ಕಟ್ ಮಾಡುವುದು, ಸಿಹಿ ವಿತರಿಸುವುದು ಸೇರಿದಂತೆ ಸಂಭ್ರಮಾಚರಣೆ ನಡೆಸಬಾರದು ಎಂದು ಸಿದ್ದರಾಮಯ್ಯ ಅವರು ಅಭಿಮಾನಿಗಳಿಗೆ ಸೂಚನೆ ನೀಡಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆ ಪಕ್ಷದ ಪಾಲಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಅದರಲ್ಲಿ ಗೆಲುವು ಸಾಧಿಸಲು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಿಎಂ ಕರೆ ನೀಡಿದ್ದಾರೆ.
ಅಭ್ಯರ್ಥಿಗಳಿಂದ ಶುಭಾಶಯ : ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಕೆಪಿಎಸ್ಸಿ ನೇಮಕಾತಿ ರದ್ದುಗೊಳಿಸಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ನೊಂದ ಅಭ್ಯರ್ಥಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನೊಂದ ಅಭ್ಯರ್ಥಿಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.











Click it and Unblock the Notifications