Karnataka Election, Exit Poll: 2018ರಲ್ಲಿ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದೇನು, ಆಗಿದ್ದೇನು?
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅಲ್ಲಲ್ಲಿ ಮಾತಿನ ಚಕಮಕಿ, ಇವಿಎಂ, ವಿವಿಪ್ಯಾಟ್ ಹೊಡೆದು ಹಾಕಿದ್ದನ್ನು ಬಿಟ್ಟರೆ, ಉಳಿದಂತೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬರಲಾರಂಭಿಸಿವೆ. ಈ ಸಮೀಕ್ಷೆಯನ್ನು ಆಧರಿಸಿ ರಾಜಕೀಯ ಬೆಳವಣಿಗೆಗಳು ಆರಂಭವಾದ ಉದಾಹರಣೆಗಳು ನಮ್ಮ ಮುಂದಿವೆ.
ಈ ಚುನಾವಣಾತ್ತೋರ ಸಮೀಕ್ಷೆಗಳ ಇತಿಹಾಸವನ್ನು ಕೆದಕಿದಾಗ ಕೆಲವೇ ಕೆಲವು ವಾಹಿನಿಗಳು ಜಂಟಿಯಾಗಿ ನೀಡಿದ ಸರ್ವೇಗಳು ಮಾತ್ರ ನೈಜ ಫಲಿತಾಂಶಕ್ಕೆ ಹತ್ತಿರವಾಗಿದ್ದವು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಹಲವು ವಾಹಿನಿಗಳು ಮತಗಟ್ಟೆ ಸಮೀಕ್ಷೆಯನ್ನು ನಡೆಸಿದ್ದವು. ಅದರಲ್ಲಿ, ಒಂದು ವಾಹಿನಿಯು ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎನ್ನುವ ಫಲಿತಾಂಶವನ್ನು ನೀಡಿತ್ತು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ. 36.35 ಮತವನ್ನು ಪಡೆದು 104 ಸೀಟನ್ನು ಗೆದ್ದಿತ್ತು. ಕಾಂಗ್ರೆಸ್, ಶೇ. 38.14 ಮತಗಳನ್ನು ಪಡೆದು 80 ಸ್ಥಾನವನ್ನು ಪಡೆದಿತ್ತು. ಜೆಡಿಎಸ್ ಶೇ. 18.3 ಮತವನ್ನು ಪಡೆದು 37ಸ್ಥಾನವನ್ನು ಪಡೆದಿತ್ತು. ಇತರರು ಒಂದು ಸ್ಥಾನದಲ್ಲಿ ಗೆದ್ದಿದ್ದರು.
2018ರ ಇಂಡಿಯಾ ಟಿವಿ - ವಿಎಂಆರ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 94, ಕಾಂಗ್ರೆಸ್ 97, ಜೆಡಿಎಸ್ 28 ಮತ್ತು ಇತರರು ಮೂರು ಸ್ಥಾನವನ್ನು ಗೆಲ್ಲುತ್ತಾರೆ ಎಂದು ವಾಹಿನಿ ಅಂದಾಜಿಸಿತ್ತು. ಇನ್ನು, ಎಬಿಪಿ-ಸಿವೋಟರ್ , ಬಿಜೆಪಿ 110, ಕಾಂಗ್ರೆಸ್ 88, ಜೆಡಿಎಸ್ 24 ಮತ್ತು ಇತರರು ಎರಡು ಸ್ಥಾನ ಗೆಲ್ಲುತ್ತೆ ಎಂದು ಹೇಳಿತ್ತು.
ಟೈಮ್ಸ್ ನೌ - ಟುಡೇಸ್ ಚಾಣಕ್ಯ
ಟೈಮ್ಸ್ ನೌ - ಟುಡೇಸ್ ಚಾಣಕ್ಯದ ಪ್ರಕಾರ ಬಿಜೆಪಿ 120, ಕಾಂಗ್ರೆಸ್ 73, ಜೆಡಿಎಸ್ 26 ಮತ್ತು ಇತರರು ಮೂರು ಸ್ಥಾನ ಗೆದ್ದು ಬಿಜೆಪಿ ಸರಕಾರ ನಡೆಸುತ್ತದೆ ಎಂದು ಹೇಳಿತ್ತು. ಇಂಡಿಯಾ ಟುಡೇ - ಏಕ್ಸಿಸ್ ಮೈ ಇಂಡಿಯಾ ಪ್ರಕಾರ ಬಿಜೆಪಿ 85, ಕಾಂಗ್ರೆಸ್ 111, ಜೆಡಿಎಸ್ 26 ಸ್ಥಾನ ಗೆಲುತ್ತದೆ ಎಂದು ಹೇಳಿತ್ತು.
ದಿಗ್ವಿಜಯ ನ್ಯೂಸ್ ಸಮೀಕ್ಷೆ
ಇನ್ನು, ದಿಗ್ವಿಜಯ ನ್ಯೂಸ್ ತನ್ನ ಸಮೀಕ್ಷೆಯಲ್ಲಿ ಬಿಜೆಪಿ 105, ಕಾಂಗ್ರೆಸ್ 80, ಜೆಡಿಎಸ್ 33 ಮತ್ತು ಇತರರು ನಾಲ್ಕು ಸ್ಥಾನದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಹೇಳಿತ್ತು. ನ್ಯೂಸ್ ನೇಶನ್ ಸಮೀಕ್ಷೆಯ ಪ್ರಕಾರ ಬಿಜೆಪಿ 107, ಕಾಂಗ್ರೆಸ್ 73, ಜೆಡಿಎಸ್ 38 ಮತ್ತು ಇತರರು ನಾಲ್ಕು ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಿತ್ತು.












Click it and Unblock the Notifications