ಅಬಕಾರಿ ಇಲಾಖೆ: ಸಚಿವರಿಗೆ ಅಧಿಕಾರಿಗಳಿಂದಲೇ ಲಂಚ ರವಾನೆ: ರಾಜೀನಾಮೆ ಪಡೆಯಿರಿ..
ಬೆಂಗಳೂರು, ನವೆಂಬರ್ 09: ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅಧಿಕಾರಿಗಳೇ ಸಚಿವರಿಗೆ ಲಂಚವನ್ನು ತಲುಪಿಸುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ. ಕೂಡಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆ ಪಡೆಯುವಂತೆ ಒತ್ತಡ ಹೆಚ್ಚಾಗಿದೆ.
ಈ ಭ್ರಷ್ಟಾಚಾರ ಕುರಿತು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಪತ್ರದಲ್ಲಿ ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳೇ ಸಚಿವರಿಗೆ ಲಂಚ ನೀಡುತ್ತಿದ್ದಾರೆ. ಇದೆಲ್ಲ ನೋಡಿದರೆ ಅಬಕಾರಿ ಇಲಾಖೆಯಲ್ಲಿ ಅವ್ಯವಹಾರ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.

ಈಗಷ್ಟೇ ಅಲ್ಲ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಬಕಾರಿ ಇಲಾಖೆಯಲ್ಲಿ ಈವರೆಗೆ ಸುಮಾರು 900 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ ಎಂದು ಅವರು ವಿವರಿಸಿದ್ದಾರೆ.
ಮದ್ಯ ಮಾರಾಟಗಾರರ ಸಂಘದಿಂದಲೇ ಆರೋಪ
ಪ್ರತಿ ತಿಂಗಳು ಸಚಿವರಿಗೆ ಮಾಮೂಲಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳೇ ಮದ್ಯದಂಗಡಿಗಳಲ್ಲಿ ಹಫ್ತಾ ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮದ್ಯ ಮಾರಾಟಗಾರರ ಸಂಘವೇ ಸಚಿವರ ವಿರುದ್ಧ ಆರೋಪ ಮಾಡಿದೆ. ಇದೆಲ್ಲ ನೋಡಿದರೆ ಎಷ್ಟೊಂದು ಭ್ರಷ್ಟಾಚಾರ ಹರಡಿಸಿ ಎಂಬುದು ತಿಳಿಯುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ವಿಮುಕ್ತಿಗೊಳಿಸಬೇಕು. ಇಲಾಖೆ ವ್ಯಾಪ್ತಿಯಲ್ಲಿ ನಡೆದ ಬೃಹತ್ ಭ್ರಷ್ಟಾಚಾರವನ್ನು ತನಿಖೆ ನಡೆಸಲು ಕೂರಲೇ ಆದೇಶ ಕೊಡಬೇಕು. ಈ ವಿಚಾರದಲ್ಲಿ ನೀವು ಮೌನವಾಗಿದ್ದರೆ ಈ ಭ್ರಷ್ಟಾಚಾರಕ್ಕೆ ನಿಮ್ಮ ಒಪ್ಪಿಗೆ ಕೂಡ ಇದೆ ಎನ್ನುವ ಕೆಟ್ಟ ಸಂದೇಶ ರವಾನಿಸದಂತಾಗುತ್ತದೆ. ಈ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಅವರು ಹೇಳಿದ್ದಾರೆ.

ಮೊಟ್ಟೆಗಾಗಿ ದಾನಿಗಳು ನೀಡುವ ಹಣದಲ್ಲೂ ಭ್ರಷ್ಟಾಚಾರ
ಕರ್ನಾಟಕ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡುವ ಯೋಜನೆಗೆ 1,500 ಕೋಟಿ ರೂಪಾಯಿ ಹಣವನ್ನು ಉದ್ಯಮಿ ಅಜೀಂ ಪ್ರೇಮ್‌ಜೀ ಫೌಂಡೇಷನ್ ನೀಡಿದೆ. ಆದರೆ ಮೌಲ್ಯಮಾಪನ ಅಧ್ಯಯನ ವರದಿಯಲ್ಲಿ ಮಕ್ಕಳಿಗೆ ಮೊಟ್ಟೆಯನ್ನೇ ಕೊಡುತ್ತಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಇದೆಲ್ಲ ನೋಡಿದರೆ, ದಾನಿಗಳು ಕೊಡುವ ಹಣದಲ್ಲೂ ಭ್ರಷ್ಟಾಚಾರ ನಡೆದಿದೆ. ಇದೇ ಮುಂದುವರಿದರೆ ಭವಿಷ್ಯದಲ್ಲಿ ಯಾರೂ ದಾನ ಮಾಡಲು ಮನಸ್ಸು ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಮೊಟ್ಟೆ ಪೂರೈಕೆಯಲ್ಲಿ ಕಮಿಷನ್ ಪಡೆದ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ಅವಧಿಯಲ್ಲಿ ಮೊಟ್ಟೆಯನ್ನೇ ಕೊಡದೆ ವಂಚನೆ ಮಾಡಲಾಗುತ್ತಿದೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ನೀವುಗಳು ಈಗ ಮಾಡುತ್ತಿರುವುದು ಏನು ಎಂದು ನಿಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಗ್ರಾಮೀಣ, ಬಡ ಮಕ್ಕಳಿಗೆ ಮೊಟ್ಟೆ ವಿತರಿಸಲು ಕ್ರಮ ವಹಿಸಬೇಕು ಎಂದರು.












Click it and Unblock the Notifications