ಅತಿಯಾದ "ಕನ್ನಡ" ಭಾಷಾಭಿಮಾನವೂ ಮತಾಂಧತೆ: ಹೀಗಂದಿದ್ಯಾರು ?
ಕನ್ನಡ ಭಾಷಾಭಿಮಾನ ಒಳ್ಳೆಯದೇ. ಆದರೆ, ಭಾಷಾಭಿಮಾನ ಎನ್ನುವುದು ಅಂಧಾಭಿಮಾನವಾಗಿ ಬದಲಾಗಬಾರದು ಎಂದು ಉದ್ಯಮಿ ಹಾಗೂ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಅವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡಾಭಿಮಾನದ ಬಗ್ಗೆ ದೇಶದಾದ್ಯಂತ ಪರ - ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಗೋಪಿನಾಥ್ ಅವರು ಹೇಳಿರುವ ಮಾತು ಚಿಂತೆಗೆ ದೂಡುವಂತಿದೆ. ನಮ್ಮ ಕನ್ನಡಭಿಮಾನ ಅಂಧಾಭಿಮಾನದತ್ತ ತಿರುಗುತ್ತಿದೆಯೇ ಎನ್ನುವ ಬಗ್ಗೆ ಚಿಂತಿಸುವಂತೆ ಮಾಡಿದೆ.
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಗೋಪಿನಾಥ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾಷಾ ಮೀಸಲಾತಿಯಿಂದಲೂ ಭ್ರಷ್ಟಾಚಾರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಹೇಳಿರುವ ಮತ್ತೊಂದು ವಿಷಯವೆಂದರೆ, ಕನ್ನಡಿಗರಿಗೇ ಈಗಲೂ ಹಲವು ಭಾಗದಲ್ಲಿ ಮೊದಲ ಆದ್ಯತೆ ಇದೆ. ಆದರೆ, ಒಂದೊಮ್ಮೆ ಖಾಲಿ ಇರುವ ಉದ್ಯೋಗಗಳಿಗೆ ಕನ್ನಡಿಗರು ಬರದೆ ಇದ್ದರೆ, ಆ ಸ್ಥಾನಗಳನ್ನು (ಹುದ್ದೆ) ಭರ್ತಿ ಮಾಡಲು ಸಾಧ್ಯವಿಲ್ಲದೆ. ಖಾಲಿ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ರೀತಿ ಮಾಡಲು ಬರುವುದಿಲ್ಲ. ಯಾರು ಆ ಹುದ್ದೆಗೆ ಬರಲಿಲ್ಲ ಎಂದು ಖಾಲಿ ಬಿಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿವಸೇನೆ ಮಾದರಿ ನಮಗೆ ಬೇಡ
ಶಿವಸೇನೆ ಮಾದರಿಯನ್ನು ಕನ್ನಡಿಗರು ಅನುಸರಿಸುವುದು ಬೇಡ. ಶಿವಸೇನೆ ಅವರು ಮರಾಠೇತರರ ಮೇಲೆ ಮಾಡಿದ ದಂಗೆಯಿಂದ ತಪ್ಪು ಸಂದೇಶ ಹೋಗಿತ್ತು. ಈ ಮಾದರಿ ಕನ್ನಡ ಮತ್ತು ಕರ್ನಾಟಕಕ್ಕೆ ಅವಶ್ಯಕತೆ ಇಲ್ಲ. ಆ ಮಾದರಿಯನ್ನು ನಾವು ಕರ್ನಾಟಕದಲ್ಲಿ ಪ್ರಯೋಗ ಮಾಡುವುದು ಬೇಡ ಎಂದು ಗೋಪಿನಾಥ್ ಅವರು ಹೇಳಿದ್ದಾರೆ. ಗೋಪಿನಾಥ್ ಅವರು ಹೇಳಿರುವ ವಿಷಯಗಳು ಕನ್ನಡಿಗರು ಮತ್ತೊಮ್ಮೆ ವಿಚಾರ ಮಾಡುವಂತಿವೆ.
ಸರ್ಕಾರ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು
ರಾಜ್ಯ ಕಾಂಗ್ರೆಸ್ ಸರ್ಕಾರವು ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಎನ್ನುವ ಮಸೂದೆಯನ್ನು ಏಕಾಏಕಿ ಮಂಡನೆ ಮಾಡಲು ಮುಂದಾಗಿತ್ತು. ಈ ಸಂಬಂಧ ಉದ್ಯಮಿಗಳೊಂದಿಗೆ ಚರ್ಚೆ ಮಾಡಬೇಕಿತ್ತು. ಸಾಧಕ - ಬಾಧಕಗಳನ್ನು ಪರಿಶೀಲನೆ ಮಾಡಿ, ಮಸೂದೆನೆಯನ್ನು ಮಂಡಿಸಿದ್ದರೆ ಮತ್ತಷ್ಟು ಉತ್ತಮವಾಗಿತ್ತು ಎನ್ನುವ ಅಭಿಪ್ರಾಯವೂ ಸಹ ಕೇಳಿಬಂದಿದೆ.

ಕರ್ನಾಟಕಕ್ಕೆ ಬರುವವರು ಕನ್ನಡ ಕಲಿಯಲಿ
ಕರ್ನಾಟಕಕ್ಕೆ ಬರುವವರು ಕನ್ನಡ ಕಲಿಯಲಿ ಎನ್ನುವ ಅಭಿಪ್ರಾಯವೂ ಸಹ ಕೇಳಿಬಂದಿದೆ. ಭಾಷಾವರು ರಾಜ್ಯಗಳ ರಚನೆಯಾದ ಮೇಲೆ ಭಾಷಾವಾರು ಪ್ರಾತಿನಿಧ್ಯವನ್ನು ನಿರೀಕ್ಷೆ ಮಾಡುವುದು ತಪ್ಪಲ್ಲ. ಈಗಾಗಲೇ ಕೆಲವು ದೇಶಗಳಲ್ಲಿ ಉದ್ಯೋಗ ಮಾಡಬೇಕಾದರೆ, ಆಯಾ ದೇಶದ ಭಾಷೆಗಳನ್ನು ಕಲಿತುಕೊಂಡು ಹೋಗಬೇಕು. ಅದೇ ರೀತಿ ಕನ್ನಡವನ್ನು ಕಲಿಯಬೇಕು. ಕರ್ನಾಟಕಕ್ಕೆ ಬಂದು ಇಲ್ಲಿ ಉದ್ಯೋಗ ಮಾಡುತ್ತೇನೆ ಎನ್ನುವವರು ಇದಕ್ಕೆ ಬದ್ಧರಾಗಿರಬೇಕು ಎಂದು ಗಿರೀಶ್ ಕಾರ್ಗದ್ದೆ ಅವರು ಅಭಿಪ್ರಾಯಪಟ್ಟರು.
ಕನ್ನಡಿಗರ ಬಗ್ಗೆ ತಪ್ಪು ಸಂದೇಶ ಯಾಕೆ ?
ಗೋಪಿನಾಥ್ ಅವರು ಹೇಳಿರುವ ಮಾತುಗಳು ಕನ್ನಡಿಗರನ್ನು ಮರುಚಿಂತನೆಗೆ ದೂಡಿರುವುದೇನೋ ನಿಜ. ಆದರೆ, ಇದೇ ಸಂದರ್ಭದಲ್ಲಿ ಒಂದು ವರ್ಗ ಕನ್ನಡಿಗರನ್ನು ದೋಷಿಸುವುದು ಹಾಗೂ ಕನ್ನಡಿಗರ ಭಾಷಾಭಿಮಾನದ ಬಗ್ಗೆ ಕೊಂಕು ನುಡಿಯುವುದನ್ನು ಮುಂದುವರಿಸಿಕೊಂಡು ಬಂದಿದೆ. ಕನ್ನಡಿಗರು ಸಹಭಾಳ್ವೆ ಹಾಗೂ ಸೌಹಾರ್ದತೆಯನ್ನು ಬಯಸುವವರು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಪರಭಾಷಿಕರು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಸಾಹಸವನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಅದಕ್ಕೆ ತಾಳ್ಮೆಯಿಂದಲೇ ಬುದ್ಧಿಕಲಿಸಬೇಕಿದೆ. ಭಾಷಾಭಿಮಾನ ಅಂಧಾಭಿಮಾನವಾದರೆ, ಭಾಷೆಗೆ ಅಗೌರವದ ಚುಕ್ಕಿ ಮೂಡಲಿದೆ.












Click it and Unblock the Notifications