ಕಾಂಗ್ರೆಸ್ Vs ಬಿಜೆಪಿ : ಅಮಿತ್ ಶಾಗೆ ನೀತಿಪಾಠ ಬೋಧಿಸಿದ ಸಿದ್ದರಾಮಯ್ಯ
ಹೋದಬಾರಿ ಕರ್ನಾಟಕಕ್ಕೆ ಬಂದಾಗ ಮಾಡಿದ ಭಾಷಣವನ್ನೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತೆ ಮೊನ್ನೆ ಮೈಸೂರಿನಲ್ಲಿ ನಡೆದ ಪರಿವರ್ತನಾ ಸಮಾವೇಶದ ವೇಳೆ ಪುನರುಚ್ಚರಿಸಿದರೇ? ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ಶಾ ಭಾಷಣದಲ್ಲಿ ಹೊಸದೇನೂ ಇಲ್ಲ.
ಅಮಿತ್ ಶಾ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಶಾಗೆ ನೀತಿಪಾಠವನ್ನು ಬೋಧಿಸಿದ್ದಾರೆ. ಇದಕ್ಕೆ ಉತ್ತರವಾಗಿ ರಾಜ್ಯ ಬಿಜೆಪಿ ಮುಖಂಡರೂ, ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ಮಾಡಿದ್ದ ಟ್ವೀಟಿಗೆ, ಅದರಲ್ಲಿ ಇರುವುದೆಲ್ಲಾ ಬರೀ ಭ್ರಷ್ಟಾಚಾರದ ಪುಟಗಳೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೆಲವು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಎರಡು ಬಾರಿ ಬಂದು ಭಾಷಣ ಮಾಡಿ ಹೋದ ನಂತರ, ಹೊಸ ವೇಗ ಪಡೆದುಕೊಂಡಿರುವ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಟ್ವಿಟ್ಟರ್ ವಾರ್, ದಿನಕ್ಕೊಂದು ಮಜಲಿಗೆ ಹೋಗುತ್ತಿದ್ದು, ಇವರಿವರ ಫಾಲೋವರ್ಸ್ ಭರಪೂರ ಮನೋರಂಜನೆ ಪಡೆಯುತ್ತಿದ್ದಾರೆ.
ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ ಎಂದು ಬಿಜೆಪಿ ಪರಿವರ್ತನಾ ಸಮಾವೇಶದ ಸಮಾರೋಪ ರ‍್ಯಾಲಿಯಲ್ಲಿ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿಗಳು, ಜೈಲು ಹಕ್ಕಿಗಳಿಂದ ನನಗೆ ಪಾಠವೇ ಎಂದು ಲೇವಡಿ ಮಾಡಿದ್ದಾರೆ. ಮುಂದೆ ಓದಿ..

ಜೈಲು ಹಕ್ಕಿಗಳು ನನಗೆ ಪಾಠ ಮಾಡುವುದೇ.. ಶಿವನೇ! : ಸಿದ್ದರಾಮಯ್ಯ
ಮೈಸೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಮಾಡಿದ ಟೀಕಿಗೆ ಸಿದ್ದರಾಮಯ್ಯ ತಿರುಗೇಟು ನೀಡಿ, ಅಮಿತ್ ಶಾ ಅವರು ಮಹದಾಯಿ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಜೊತೆಗೆ, ಮಾಜಿ ಜೈಲು ಹಕ್ಕಿಯನ್ನು (ಯಡಿಯೂರಪ್ಪ) ತಮ್ಮ ಪಕ್ಷದ ಸಿಎಂ ಅಭ್ಯರ್ಥಿಯೆಂದು ಘೋಷಿಸಿಕೊಂಡಿರುವ ಮತ್ತೊಬ್ಬ ಜೈಲು ಹಕ್ಕಿ (ಅಮಿತ್ ಶಾ) ನನ್ನನ್ನು ಭ್ರಷ್ಟಾಚಾರಿಯೆಂದು ಹೇಳುವುದೇ, ಶಿವನೇ! ಬಿಜೆಪಿಯವರ ಸುಳ್ಳನ್ನು ಜನ ನಂಬುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

ಸದಾನಂದ ಗೌಡರ ಕಾಲೆಳೆದ ಸಿದ್ದರಾಮಯ್ಯ
ಅಮಿತ್ ಶಾ ಅವರ ಮಗನ ಆಸ್ತಿ ಮೂರು ವರ್ಷಗಳ ಅವಧಿಯಲ್ಲಿ 16000 ಪಟ್ಟು ಹೆಚ್ಚಾಗಿದ್ದು ಹೇಗೆ ಎನ್ನುವುದನ್ನು ಪಕ್ಷದ ಅಧ್ಯಕ್ಷರ ಸಮರ್ಥನೆಗೆ ಇಳಿದಿರುವ ಕೇಂದ್ರ ಅಂಕಿ ಅಂಶ (ಸಾಂಖ್ಯಿಕ) ಸಚಿವ ಸದಾನಂದ ಗೌಡರು ಉತ್ತರಿಸುವಿರಾ @DVSBJP. ರೈಲ್ವೆ ಖಾತೆಯಿಂದ, ಕಾನೂನು ಖಾತೆ, ಕಾನೂನು ಖಾತೆಯಿಂದ ಸಾಂಖ್ಯಿಕ ಖಾತೆ. ಇದು ನಿಮ್ಮ ಸಾಧನೆಗೆ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ನೀಡಿದ ಗೌರವ. ಅಮಿತ್ ಶಾ ಬೆಂಬಲಿಸದಿದ್ದರೆ ಮುಂದೇನೋ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ, ಸದಾನಂದ ಗೌಡರ ಕಾಲೆಳೆದಿದ್ದರು.

ವಾರ್ಷಿಕ ವಹಿವಾಟಿಗೂ ,ವಾರ್ಷಿಕ ನಿವ್ವಳ ಲಾಭಕ್ಕೂ ಇರುವ ವ್ಯತ್ಯಾಸ
ಅನೇಕ ಸಲ ರಾಜ್ಯದ ಆಯವ್ಯಯವನ್ನು ಮಂಡಿಸಿರುವ ನಿಮಗೆ ವಾರ್ಷಿಕ ವಹಿವಾಟಿಗೂ ,ವಾರ್ಷಿಕ ನಿವ್ವಳ ಲಾಭಕ್ಕೂ ಇರುವ ವ್ಯತ್ಯಾಸ ಗೊತ್ತಿದೆ ಅಂದುಕೊಂಡಿದ್ದೆ ನಿಮ್ಮ ಚೇಲಗಳೇ ನಿಮಗೆ ಇಂಟೆಲಿಜೆನ್ಸ್ ಬೇರೆ ಇಲಾಖೆಯಲ್ಲ. ಹಾಗಾಗಿ ನಿಮಗಿರುವ ಅಲ್ಪ ಮಾಹಿತಿಯಿಂದ ಈ ಹೇಳಿಕೆ @siddaramaiah. ಜೊತೆಗೆ, ನಿಮ್ಮ ಪಕ್ಷದ ಇಂದಿರಾ ಗಾಂಧಿ ಜೈಲಿಗೆ ಹೋಗಿದ್ದು, ರಾಜೀವ್ ಹತ್ಯೆಯಾಗದಿದ್ದರೆ, ಬೋಫೋರ್ಸ್ ಹಗರಣದಲ್ಲಿ ಅವರೂ ಜೈಲಿಗೆ ಹೋಗುತ್ತಿದ್ದರು. ಸಾಕಾ ಪಟ್ಟಿ.. ಇನ್ನೂ ಬೇಕಾ - ಸದಾನಂದ ಗೌಡ ಟ್ವೀಟ್.

ಬಿಜೆಪಿ ಮುಖಂಡ ಸಿ ಟಿ ರವಿ ಟ್ವೀಟ್
ಶ್ರೀ @AmitShah ಅವರ ಮಗನ ವ್ಯಾಪಾರಕ್ಕೂ ಆಸ್ತಿಗೂ ಸಂಬಂಧವೇ ತಿಳಿಯದ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿರುವುದು ನಮ್ಮ ದುರ್ದೈವ. ಆಡಳಿತದ ಕಡೆ ಗಮನ ನೀಡದೆ ರಾಜ್ಯದ ಸಂಪತ್ತನ್ನು ಸದಾ ಕೊಳ್ಳೆ ಹೊಡೆಯುವುದರಲ್ಲಿ ನಿರತರಾಗಿರುವ ದಂಧೆಕೋರರಿಗೆ ವಹಿವಾಟು ಮತ್ತು ಲಾಭಕ್ಕಿರುವ ಅಜಗಜಾಂತರ ವ್ಯತ್ಯಾಸ ಹೇಗೆ ತಿಳಿದೀತು - ಬಿಜೆಪಿ ಮುಖಂಡ ಸಿ ಟಿ ರವಿ ಟ್ವೀಟ್.

ಸರಕಾದ ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಣಿಯಬೇಡಿ, ಶೋಭಾ
ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನನ್ನ ಮನವಿ, ಈ ಸರಕಾರ ಶಾಸ್ವತವಲ್ಲ, ನೀವು ಶಾಸ್ವತ, ಈ ಸರಕಾದ ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಣಿಯಬೇಡಿ. ಹಿಂದೂಗಳ ಮೇಲಿನ ಕೇಸನ್ನು ಯಾಕೆ ಹಿಂದಕ್ಕೆ ತೆಗೆದುಕೊಳ್ಳುತ್ತಿಲ್ಲ? ಕೋಮು ಗಲಭೆ ಹರಡಿದ ಕ್ರಿಮಿನಲ್ ಗಳ ರಕ್ಷಣೆಗೆ ಸಿದ್ದರಾಮಯ್ಯ ಸರಕಾರ ಮುಂದಾಗಿದೆ ಎನ್ನುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್.












Click it and Unblock the Notifications