Karnataka By Election: ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಈಶ್ವರ ಖಂಡ್ರೆ ಹೇಳಿದ್ದೇನು?
ಬಸವಕಲ್ಯಾಣ, ನವೆಂಬರ್ 23: ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಈ ಮೂರೂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನತೆ ಪ್ರತಿಪಕ್ಷಗಳ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವ್ಯಾಖ್ಯಾನಿಸಿದ್ದಾರೆ.
ಬಸವಕಲ್ಯಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗ ಮಾತನಾಡಿದ ಅವರು, ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ನಡೆದ ಈ ಉಪ ಚುನಾವಣೆಯಲ್ಲಿ ಅಭಿವೃದ್ಧಿಗೆ ಒಲವು, ಗ್ಯಾರಂಟಿಗಳಿಗೆ ಗೆಲುವು ನೀಡಿರುವ ಮತದಾರರಿಗೆ ಧನ್ಯವಾದ ಅರ್ಪಿಸಿದರು.

ಶಿಗ್ಗಾವಿಯಲ್ಲಿ ವಚನಭ್ರಷ್ಟರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಆ ಕ್ಷೇತ್ರದ ಉಸ್ತುವಾರಿಯಾಗಿದ್ದ ತಾವು ಮತದಾರರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸುವುದಾಗಿ ಈಶ್ವರ ಖಂಡ್ರೆ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಮೂರೂ ಉಪ ಚುನಾವಣೆಗಳ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಎಲ್ಲರ ಸಂಘಟಿತ ಪ್ರಯತ್ನಕ್ಕೆ ಈ ಗೆಲುವಿನ ಹಾರ ಸಂದಿದೆ. ಉತ್ತಮ ನಾಯಕತ್ವ ನೀಡಿ ಮಾರ್ಗದರ್ಶನ ಮಾಡಿದ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲ ಕಾಂಗ್ರೆಸ್ ಸಚಿವರು, ಶಾಸಕರಿಗೆ ಈ ಗೆಲುವಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು,
ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತಕ್ಕೆ ಸಂದ ಜಯವಾಗಿದೆ. ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ, ನಮ್ಮ ಜನಪರ ಕಾರ್ಯಕ್ರಮ ಮುಂದಿಟ್ಟು ಚುನಾವಣೆಗೆ ಹೋದೆವು, ಜನ ಬೆಂಬಲ ನೀಡಿದ್ದಾರೆ. ಈಗಲಾದರೂ ಪ್ರತಿಪಕ್ಷಗಳು ಎಚ್ಚೆತ್ತು, ರಾಜಕೀಯ ಮತ್ತು ಅಪಪ್ರಚಾರ ಬಿಟ್ಟು, ರಾಜ್ಯದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಬೇಕು.
ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಲ್ಲಿನ ಮತದಾರರು ಒಲವು ತೋರಿದ್ದಾರೆ. ಆದರೆ ಮಹಾರಾಷ್ಟ್ರದ ಫಲಿತಾಂಶ ಅನಿರೀಕ್ಷಿತ ಮತ್ತು ಆಘಾತಕಾರಿಯಾಗಿದೆ. ಬಿಜೆಪಿ ಮತ್ತು ಮಹಾಯುತಿ ಹಣದ ಹೊಳೆಯನ್ನೇ ಹರಿಸಿತು, ಅಧಿಕಾರದ ದುರ್ಬಳಕೆ ಮಾಡಿಕೊಂಡು ಈ ಚುನಾವಣೆ ಗೆದ್ದಿದೆ ಎಂದೂ ಈಶ್ವರ ಖಂಡ್ರೆ ಹೇಳಿದರು.
ಕರುನಾಡಿನ ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಕಾಣಸಿಗುವ ಬೃಹತ್ ಕೃಷ್ಣ ಸರ್ಪಕ್ಕೆ ಓಫಿಯೋಫೆಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಅಧಿಕೃತವಾಗಿ ಘೋಷಣೆ ಮಾಡಿದರು. ಕಲ್ಲು ನಾಗರ ಕಂಡರೆ ಹಾಲೆವರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನವಿದೆ. ಜನರಲ್ಲಿ ಹಾವುಗಳ ಬಗ್ಗೆ ಜನರಲ್ಲಿ ತುಂಬಾ ತಪ್ಪು ಕಲ್ಪನೆಗಳಿವೆ. ಯಾವ ಹಾವು ವಿಷಪೂರಿತ, ಯಾವ ಹಾವು ವಿಷ ರಹಿತ ಎಂಬುದು ತಿಳಿದಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಜನ ಭಯ ಪಡುವ ಹಾವುಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಸಂರಕ್ಷಣೆಗೆ ಶ್ರಮಿಸುವವರಿಗೆ ಅಭಿನಂದನೆ ಸಲ್ಲಲೇಬೇಕು. ಡಾ. ಗೌರಿಶಂಕರ್ ಮತ್ತು ತಂಡದವರು ಇಂದು ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಮತ್ತು ಮಲೆನಾಡಿನಲ್ಲಿರುವ ಅಪರೂಪದ ಅದರಲ್ಲೂ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸಿರುವದಷ್ಟೇ ಅಲ್ಲದೆ ಅದಕ್ಕೆ ಕನ್ನಡತನದ ವೈಜ್ಞಾನಿಕವಾದ ಹೆಸರು ಇಡುವ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಓಫಿಯೋಫೇಗಸ್ ಅಂದರೆ ಕಾಳಿಂಗ ಸರ್ಪಗಳೆಲ್ಲಾ ಒಂದೇ ಎಂದು ಬಹುತೇಕರು ಭಾವಿಸಿದ್ದರು. ಆದರೆ ಡಾ. ಗೌರಿಶಂಕರ್ ಮತ್ತು ತಂಡದವರು ಈ ಬಗ್ಗೆ ಅಧ್ಯಯನ ಮಾಡಿ ಕರ್ನಾಟಕದ ಕಾಳಿಂಗ ಸರ್ಪ ವಿಭಿನ್ನ ಪ್ರಭೇದಕ್ಕೆ ಸೇರಿದ್ದೆಂಬ ಅಂಶವನ್ನು ತಿಳಿಸಿರುತ್ತಾರೆ. ಇಂತಹ ಅಧ್ಯಯನಗಳು ರೋಚಕ ಮತ್ತು ವಿಸ್ಮಯಕಾರಿ ಹಾಗೂ ಅಷ್ಟೇ ಅಪಾಯಕಾರಿ ಎಂದು ಹೇಳಿದರು.
ಈಶ್ವರನ ಕೊರಳಲ್ಲಿ ಹಾವಿನ ಹೆಸರು ಕೂಡ ಕಾಳಿಂಗ. ಭಾಗವತದಲ್ಲಿ ಶ್ರೀಕೃಷ್ಣನ ಲೀಲೆಗಳ ವರ್ಣನೆಯಲ್ಲಿ, ಬಾಲಕೃಷ್ಣ ಕಾಳಿಂಗಸರ್ಪದ ಹೆಡೆಯ ಮೇಲೆ ನಿಂತು ನರ್ತಿಸಿದ ಎಂಬ ಕಥೆಯನ್ನು ನಾವು ಕೇಳಿದ್ದೇವೆ. ಈ ಕತೆ ಕಾಳಿಂಗಮರ್ಧನ ಎಂದೇ ಖ್ಯಾತವಾಗಿದೆ. ಅಂದರೆ ಕಾಳಿಂಗ ಎಂದರೆ ಕಪ್ಪು ನಾಗರ ಹಾವು, ಕೃಷ್ಣಸರ್ಪ ಎಂಬ ಕಲ್ಪನೆ ನಮ್ಮ ಕರುನಾಡಿನ ಪ್ರತಿಯೊಬ್ಬರಿಗೂ ತಿಳಿದಿದೆ. ಇದು ಅಚ್ಚ ಕನ್ನಡದ ಹೆಸರಾಗಿ ಜನಜನಿತವಾಗಿದೆ ಇದನ್ನೇ ಇಂದು ಅಧಿಕೃತವಾಗಿ ಕರೆಯುವುದು ಸಂತಸದ ವಿಷಯ ಎಂದರು.












Click it and Unblock the Notifications