ವಿದ್ಯುತ್ ಅಪಘಾತ; ತನಿಖಾ ಸಮಿತಿ ರಚನೆ, ಜವಾಬ್ದಾರಿಗಳು
ಬೆಂಗಳೂರು, ಡಿಸೆಂಬರ್ 04; ಕರ್ನಾಟಕ ಸರ್ಕಾರ ವಿದ್ಯುತ್ ಅಪಘಾತದ ತನಿಖಾ ಸಮಿತಿ ರಚಿಸುವ ಕುರಿತು ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ, ಮಗು ಬಲಿಯಾದ ಘಟನೆ ಬಳಿಕ ಸರ್ಕಾರ ನಾಲ್ವರು ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.
ಇಂಧನ ಸಚಿವರ ಅಧ್ಯಕ್ಷತೆಯಲ್ಲಿ 21/11/2023ರಂದು ನಡೆದ ಸಭೆಯ ನಿರ್ಣಯದಂತೆ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ವಿನೋದ್ ಕುಮಾರ್ ಡಿ. ಎಂ. ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ ಆದೇಶ ಹೊರಡಿಸಿದ್ದಾರೆ.

ರಾಜ್ಯಪತ್ರದಲ್ಲಿ ಸಮಿತಿ ರಚನೆ ಬಗ್ಗೆ ಆದೇಶ ಪ್ರಕಟಿಸಲಾಗಿದೆ. ದಿನಾಂಕ 19/11/2023ರಂದು ಕಾಡುಗೋಡಿ 66/11 ಕೆವಿ ಉಪಕೇಂದ್ರದ F9 Feeder ವಿದ್ಯುತ್ ವಾಹಕ ಹರಿದು ಬಿದ್ದ ಕಾರಣ ಅದನ್ನು ತುಳಿದ ಪಾದಚಾರಿ ಮಹಿಳೆ ಮತ್ತು ಮಗು ವಿದ್ಯುತ್ ಅಪಘಾತಕ್ಕೊಳಗಾಗಿ ಮೃತರಾದ ಬಗ್ಗೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿರುತ್ತಾರೆ.
ಈ ಘಟನೆಯು ಅತ್ಯಂತ ದುರದೃಷ್ಟಕರವಾಗಿದ್ದು, ಇಂತಹ ಅಪಘಾತಗಳಲ್ಲಿ ಜೀವಹಾನಿ ಆಗುತ್ತಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ವಿದ್ಯುತ್ ಪ್ರಸರಣ ನಿಗಮಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಈ ಘಟನಯ ಸವಿಸ್ತಾರ ತನಿಖೆಯನ್ನು ನಿರ್ವಹಿಸಲು ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತ ತೆಗೆದುಕೊಳ್ಳಬೇಕಾದ ಕ್ರಮ ಸೂಚಿಸಲು ಉನ್ನತ ಸಮಿತಿಯನ್ನು (Expert Committee) ರಚಿಸಲು ಸರ್ಕಾರದಲ್ಲಿ ತೀರ್ಮಾನಿಸಿ ಈ ಆದೇಶ ಹೊರಡಿಸಲಾಗಿದೆ.
ಸಮಿತಿಯ ಜವಾಬ್ದಾರಿಗಳು; ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ 19/11/2023ರಂದು ಕಾಡುಗೋಡಿ 66/11 ಕೆವಿ ಉಪಕೇಂದ್ರದ F9 Feeder ವಿದ್ಯುತ್ ವಾಹಕ ಅಪಘಾತಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು(Expert Committee) ರಚಿಸಿ ಆದೇಶಿಸಲಾಗಿದೆ.
ಸಮಿತಿಯ ಪ್ರತಿನಿಧಿಗಳು. ಎಸ್. ಸುಮಂತ್, ನಿವೃತ್ತ ನಿರ್ದೇಶಕರು (ಪ್ರಸರಣ), ಕ.ವಿ.ಪು.ನಿ.ನಿ.
ಬಿ. ವಿ. ಗಿರೀಶ್, ಮುಖ್ಯ ಇಂಜಿನಿಯರ್ (ವಿ), ಆರ್‌ಟಿ & ಆರ್‌ಡಿ. ಪ್ರಭಾಕರ್, ಜಂಟಿ ನಿರ್ದೇಶಕರು, ಸಿಪಿಆರ್‌ಐ. ಜಿ. ರವಿಕುಮಾರ್, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ಪೂರ್ವ.
* ಈ ವಿದ್ಯುತ್ ಅಪಘಾತದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಘಟನೆಗೆ ಕಾರಣಗಳನ್ನು ನಿಖರವಾಗಿ ಕಂಡುಹಿಡಿಯುವುದು.
* ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ತೆಗೆದುಕೊಳ್ಳಬಹುದಾದ ಎಲ್ಲಾ ತಾಂತ್ರಿಕ ಸಾಧ್ಯಾ ಸಾಧ್ಯತೆಗಳ ಬಗ್ಗೆ ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ಕ.ವಿ.ಪ.ನಿ. ನಿಯಮಿತವು ಕೂಡಲೇ ಅನುಸರಿಸಬೇಕಾದ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ವಿವರವಾಗಿ ವರದಿಯಲ್ಲಿ ನಮೂದಿಸುವುದು.
* ಸದರಿ ವರದಿಯನ್ನು ಈ ಆದೇಶದ ದಿನಾಂಕದಿಂದ ಎರಡು ವಾರದೊಳಗಾಗಿ ಸರ್ಕಾರಕ್ಕೆ ಸಲ್ಲಿಸುವುದು.












Click it and Unblock the Notifications