ತ್ರಿಪುರದಲ್ಲಿ ಬಿಜೆಪಿ ಹೂಡಿದ ತಂತ್ರ ಕರ್ನಾಟಕದಲ್ಲೂ ಫಲಿಸುವುದೇ?
ಬೆಂಗಳೂರು, ಏಪ್ರಿಲ್ 27: ಕಳೆದ 25 ವರ್ಷಗಳಿಂದ ಅಧಿಪತ್ಯ ನಡೆಸುತ್ತಿದ್ದ ಸಿಪಿಐ(ಎಂ) ಪಕ್ಷವನ್ನು ನಿರ್ನಾಮ ಮಾಡಿರುವ ಬಿಜೆಪಿ, ಪ್ರಪ್ರಥಮ ಬಾರಿಗೆ ಈಶಾನ್ಯ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಈಗ ಕರ್ನಾಟಕದಲ್ಲೂ ತ್ರಿಪುರ ತಂತ್ರ ಬಳಸಲು ಯತ್ನಿಸುತ್ತಿದೆ.
ತ್ರಿಪುರದಲ್ಲಿ ಶೇ.91ರಷ್ಟು ಮತ ಚಲಾವಣೆಯಾಗಿದ್ದು, ಇಲ್ಲಿನ ಫಲಿತಾಂಶವನ್ನು ಇಲ್ಲಿನ ಯುವಜನತೆ, ಗುಡ್ಡಗಾಡು ಮತದಾರರು ನಿರ್ಧರಿಸಿದ್ದರು. ತ್ರಿಪುರಾ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಜನರಲ್ಲಿ ಭರವಸೆ ಮೂಡಿಸುವುದು ಆದ್ಯ ಕರ್ತವ್ಯವಾಗಿತ್ತು.
ಬಿಜೆಪಿ ಗೆಲುವಿನಲ್ಲಿ ಯುವ ಜನತೆಯನ್ನು ಸೆಳೆಯುವಲ್ಲಿ ಬಿಜೆಪಿಯ ಸೋಷಿಯಲ್ ಮೀಡಿಯಾ ಕೂಡ ಸಾಕಷ್ಟು ಕೆಲಸ ಮಾಡಿತ್ತು. ಈಗ ಕರ್ನಾಟಕದಲ್ಲೂ ಇದೇ ರೀತಿ ಕಾರ್ಯತಂತ್ರ ಜಾರಿಯಲ್ಲಿದೆ.

ಜನ ನಾಯಕನಾಗಿ ಬಿ ಶ್ರೀರಾಮುಲು
ಲೋಕಸಭಾ ಸದಸ್ಯ ಬಿ ಶ್ರೀರಾಮುಲು ಅವರನ್ನು ಸ್ಟಾರ್ ಪ್ರಚಾರಕರಾಗಿ ಮಾತ್ರವಲ್ಲ. ಬುಡಕಟ್ಟು ಜನಾಂಗ, ಪರಿಶಿಷ್ಟ ಜಾತಿ, ಪಂಗಂಡದ ಮತಗಳನ್ನು ಸೆಳೆಯಲು ತ್ರಿಪುರ, ನಾಗಾಲ್ಯಾಂಡ್ ಮಾದರಿಯಲ್ಲಿ ತಂತ್ರವನ್ನು ಬಿಜೆಪಿ ಹೆಣೆದಿದೆ.
ಶ್ರೀರಾಮುಲು ಅವರನ್ನು ಜನನಾಯಕರನ್ನಾಗಿ ಬಿಂಬಿಸಲಾಗುತ್ತಿದ್ದು, ವಾಲ್ಮೀಕಿ ನಾಯಕ ಸಮುದಾಯ ಮತಗಳಷ್ಟೇ ಅಲ್ಲ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಹಳೆ ಊದಲು ಆರಂಭಿಸಿದೆ.
ಪ್ರಚಾರದ ವೇಳೆ ಆಪ್ತ ಗೆಳೆಯ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಳಸಿಕೊಳ್ಳುತ್ತಿರುವುದು ಲಾಭವೇ ಹೊರತೂ ನಷ್ಟವಲ್ಲ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ, ಮೊಳಕಾಲ್ಮೂರು ಅಲ್ಲದೆ, ಬಾದಾಮಿಯಿಂದ ಸ್ಪರ್ಧಿಸಿರುವ ಬಿ ಶ್ರೀರಾಮುಲು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಕಠಿಣ ಸ್ಪರ್ಧೆಯೊಡ್ಡಲಿದ್ದಾರೆ ಎಂಬ ಮಾಹಿತಿಯಿದೆ. ಒಟ್ಟಾರೆ, ಗಾಲಿ ರೆಡ್ಡಿ ಹಾಗೂ ಶ್ರೀರಾಮುಲು ಜೋಡಿಯ ಉಸ್ತುವಾರಿಯಲ್ಲಿರುವ ಐದಾರು ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದು, ಅಧಿಕಾರ ಚುಕ್ಕಾಣಿ ಹಿಡಿಯುವ ತಂತ್ರ ಫಲಿಸುವುದೇ ಕಾದು ನೋಡಬೇಕಿದೆ.












Click it and Unblock the Notifications