ಬಿಜೆಪಿಯಿಂದ ಸ್ಪರ್ಧೆ ಬಯಸಿರುವ ಡಾಕ್ಟರ್ ಗಳ ಪಟ್ಟಿ
ಬಳ್ಳಾರಿ, ಮಾಚ್. 03: ಕರ್ನಾಟಕ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದಿಂದ ವೈದ್ಯಕೀಯ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ 16 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪಕ್ಷದ ಹೈಕಮಾಂಡ್‍ಗೆ ಸಲ್ಲಿಸಿದೆ.
ಈ ಪಟ್ಟಿಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಡಾ. ಬಿ.ಕೆ. ಸುಂದರ್ ಮತ್ತು ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಡಾ. ಶ್ರೀನಿವಾಸ್ ಅವರ ಹೆಸರುಗಳು ಶಿಫಾರಸ್ಸುಗೊಂಡಿವೆ. ಈ ಎರಡೂ ಹೆಸರುಗಳನ್ನು ಪಕ್ಷ ಅಂತಿಮಗೊಳಿಸುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಪಟ್ಟಂತೆ ಡಾ. ಬಿ.ಕೆ. ಸುಂದರ್ ಅವರು ಸುಷ್ಮಾ ಸ್ವರಾಜ್ ಅವರ ಬೆಂಬಲ ಪಡೆದಿದ್ದಾರೆ.
ಡಾ. ಶ್ರೀನಿವಾಸ್ ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್‍ನ ಬೆಂಬಲ ಪಡೆದಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಮಾಜಿ ಕಾರ್ಪೊರೇಟರ್ ದಿವಾಕರ್ ಅವರ ಬದಲಾಗಿ ಡಾ. ಶ್ರೀನಿವಾಸ್‍ರತ್ತ ಪಕ್ಷ ಹೆಚ್ಚಿನ ಒಲವು ತೋರಿದೆ ಎನ್ನಲಾಗಿದೆ.
ದಿನೇ ದಿನೇ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್‍ಗಾಗಿ ಜಿ. ಸೋಮಶೇಖರರೆಡ್ಡಿ ಮತ್ತು ಡಾ. ಬಿ.ಕೆ. ಸುಂದರ್ ಮಧ್ಯೆ ತೀವ್ರವಾದ ಪೈಪೋಟಿ ನಡೆದಿದೆ.

ಜಿ. ಸೋಮಶೇಖರರೆಡ್ಡಿ ವಿರುದ್ಧ ಟಪಾಲ್ ಗಣೇಶ್ ತೊಡೆತಟ್ಟಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಆದರೂ, ಜಿ. ಸೋಮಶೇಖರರೆಡ್ಡಿ ಅವರು ಚುನಾವಣಾ ಪ್ರಚಾರ ಪ್ರಾರಂಭಿಸಿ, ಮತ ಬೇಟೆ ನಡೆಸಿದ್ದಾರೆ.
ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ಪತ್ರ ಜಿ. ಸೋಮಶೇಖರರೆಡ್ಡಿ ಅವರ ಅದಮ್ಯ ಉತ್ಸಾಹಕ್ಕೆ ಅಡ್ಡಗಾಲು ಹಾಕಲಿದೆ ಎಂದೇ ಅವರ ಆಪ್ತವಲಯ ವಿಶ್ಲೇಷಿಸಿದೆ.












Click it and Unblock the Notifications