ಕರ್ನಾಟಕದಲ್ಲಿ ಚುನಾವಣೆ ವರ್ಷ: ಮತ್ತೆ ಬರಲಿದ್ದಾರೆಯೇ 3 ಜನ ಉಪಮುಖ್ಯಮಂತ್ರಿಗಳು?

ಬೆಂಗಳೂರು, ಮಾ.21: ಯುಗಾದಿಯ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬುದು ಬಹುವಾಗಿ ಚರ್ಚಿತವಾಗುತ್ತಿದೆ. ಆದರೆ, ಚುನಾವಣೆ ವರ್ಷದ ಸಂದರ್ಭದಲ್ಲಿ ಕೇವಲ ಸಚಿವ ಸಂಪುಟದಲ್ಲಿ ಬದಲಾವಣೆ ಅಷ್ಟೇ ಅಲ್ಲ, ಎರಡರಿಂದ ಮೂವರು ಉಪಮುಖ್ಯಮಂತ್ರಿಗಳನ್ನೂ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗುತ್ತದೆ. ಕೆಲವು ಹಿರಿಯ ಸಚಿವರನ್ನು ಕೈ ಬಿಟ್ಟು, ಅವರನ್ನು ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ನಿಯೋಜಿಸಲಾಗುತ್ತದೆ. ಕೆಲವು ಯುವ ಉತ್ಸಾಹಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಮುಂದಿನ ಚುನಾವಣಾ ದೃಷ್ಟಿಯಿಂದ ಅವರನ್ನು ಸಜ್ಜುಗೊಳಿಸಲಾಗುತ್ತದೆ ಎಂಬುದು ಬಹುದಿನಗಳಿಂದ ಚರ್ಚೆ ನಡೆಯುತ್ತಿದೆ.

ಬಿಜೆಪಿ ಕೇಂದ್ರ ನಾಯಕರು ಇದುವರೆಗೂ ಐದು ರಾಜ್ಯಗಳ ಚುನಾವಣಾ ಕಣದಲ್ಲಿ ತೊಡಗಿಸಿಕೊಂಡಿದ್ದರು. ಈಗ ಚುನಾವಣೆ ಮುಗಿದಿದ್ದು, ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಗಳು ನಡೆಯುತ್ತಿವೆ. ಕೆಲವು ದಿನಗಳಲ್ಲಿಯೇ ಸಚಿವ ಸಂಪುಟದ ವಿಸ್ತರಣೆಯೂ ಪೂರ್ಣಗೊಳ್ಳುತ್ತದೆ. ಯುಗಾದಿ ಕಳೆದ ನಂತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. 2023ರಲ್ಲಿ ಎದುರಾಗುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಸರ್ಕಾರದಲ್ಲಿ ಭಾರೀ ಬದಲಾವಣೆ ತರಲಾಗುತ್ತದೆ ಎಂದು ಬಿಜೆಪಿಯಲ್ಲಿ ಗುಸುಗುಸು ಎದ್ದಿದೆ.

Election Year in Karnataka: Three Deputy Chief Ministers Again?

ಕೇಂದ್ರ ಸಚಿವ ಅಮಿತ್ ಷಾ ಅವರು ಏಪ್ರಿಲ್ 1ರಂದು ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಹೊಸದಾಗಿ ಮೂವರು ಉಪಮುಖ್ಯಮಂತ್ರಿಗಳ ನೇಮಕ ಹಾಗೂ ಸಂಪುಟ ಪುನಾರಚನೆ, ವಿಸ್ತರಣೆ ಬಗ್ಗೆ ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.

ಈಗಾಗಲೇ ಮೂರು ಮುಖ್ಯಮಂತ್ರಿಗಳಿದ್ದರು:

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2019ರ ಆಗಸ್ಟ್‌ನಲ್ಲಿ ಮೂರು ಉಪಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿ ಮಾಡಿ ಪರಿಶಿಷ್ಟ ಜಾತಿ ಕೋಟಾದಡಿ ಗೋವಿಂದ ಎಂ. ಕಾರಜೋಳ, ಲಿಂಗಾಯತ ಕೋಟಾದಡಿ ಲಕ್ಷ್ಮಣ ಸವದಿ ಮತ್ತು ಒಕ್ಕಲಿಗ ಕೋಟಾದಡಿ ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿತ್ತು. ಈಗ ಅದೇ ಮಾದರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಕ್ಕಲಿಗ ಕೋಟಾದಡಿ ಮೂರು ಉಪಮುಖ್ಯಮಂತ್ರಿಗಳನ್ನು ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.

Election Year in Karnataka: Three Deputy Chief Ministers Again?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಹಿಂದೊಮ್ಮೆ ಹೇಳಿಕೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚುನಾವಣೆ ಎದುರಿಸಬೇಕಾದರೆ ಮುಖ್ಯಮಂತ್ರಿಯ ಜೊತೆಗೆ ಇನ್ನೂ ಮೂವರು ಉಪಮುಖ್ಯಮಂತ್ರಿಗಳು ಇದ್ದರೆ ಅದು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಅಲ್ಲದೆ, ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರ ಮಾಡಲಾಗುತ್ತದೆ.

ಯಾರು ಯಾರಿಗೆ ಉಪಮುಖ್ಯಮಂತ್ರಿ ಹುದ್ದೆ?

ಸದ್ಯ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಜೊತೆಗೆ ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರನ್ನು ಉಪಮುಖ್ಯಮಂತ್ರಿ ಮಾಡಬೇಕು. ಆಗ ಎಲ್ಲ ಸಮುದಾಯಗಳಿಗೂ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯವಿದೆ.

Election Year in Karnataka: Three Deputy Chief Ministers Again?

ಒಂದು ವೇಳೆ ರಾಜ್ಯದಲ್ಲಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಜನೆಯಾದಲ್ಲಿ ಯಾರು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಒಕ್ಕಲಿಗ ಸಮುದಾಯದಿಂದ ಸಚಿವರಾದ ಆರ್. ಅಶೋಕ್ ಮತ್ತು ಡಾ.ಸಿ.ಎನ್. ಅಶ್ವತ್ಥ ನಾರಾಯಣ ರೇಸ್‌ನಲ್ಲಿದ್ದಾರೆ. ಸಚಿವ ಆರ್. ಅಶೋಕ್ ಅವರು ಬೆಂಗಳೂರಿನಲ್ಲಿ ಪ್ರಭಾವಿ ಆಗಿದ್ದಾರೆ. ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಅಶೋಕ್ ಅವರನ್ನು ಉಪ ಮುಖ್ಯಮಂತ್ರಿ ಮಾಡಬಹುದು ಎಂಬ ಲೆಕ್ಕಾಚಾರ ಇದೆ. ಹಿಂದುಳಿದ ವರ್ಗ ಕೋಟಾದಿಂದ ಸಚಿವ ಕೆ.ಎಸ್.ಈಶ್ವರಪ್ಪ ಹೆಸರು ಮುಂಚೂಣಿಯಲ್ಲಿದೆ. ಆದರೆ, ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆಗೆ ನಿಯೋಜಿಸಲಾಗುತ್ತದೆ ಎಂಬ ಚರ್ಚೆಯೂ ಇದೆ. ಒಂದು ವೇಳೆ ಈಶ್ವರಪ್ಪ ಸಚಿವ ಸ್ಥಾನದಲ್ಲಿ ಮುಂದುವರಿದರೆ, ಉಪ ಮುಖ್ಯಮಂತ್ರಿ ಸ್ಥಾನ ಒಲಿಯಬಹುದು. ಇನ್ನು ಪರಿಶಿಷ್ಟ ಪಂಗಡ ಸಮುದಾಯದಿಂದ ಬಿ. ಶ್ರೀರಾಮುಲು ಹೆಸರು ಪ್ರಭಲವಾಗಿದೆ. ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಶ್ರೀರಾಮುಲು ಈ ಹಿಂದೆಯೇ ಒಂದೆರಡು ಬಾರಿ ದೆಹಲಿ ನಾಯಕರನ್ನು ಭೇಟಿ ಮಾಡಿದ್ದರು.

Election Year in Karnataka: Three Deputy Chief Ministers Again?

ಸಂಪುಟದಲ್ಲಿ ಏನೇ ಬದಲಾವಣೆ ಮಾಡಿದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮರೆಯುವಂತಿಲ್ಲ. ಹೀಗಾಗಿ ಯಡಿಯೂರಪ್ಪ ಅವರೂ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿ.ವೈ. ವಿಜಯೇಂದ್ರ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಸಿದ್ಧತೆ ನಡೆದಿದೆ. ಒಂದು ಹಂತದಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ವಿಜಯೇಂದ್ರ ಸಂಪುಟಕ್ಕೆ ಬಂದರೆ ಕೇವಲ ಮಂತ್ರಿಯಾಗಿರುತ್ತಾರಾ? ಅಥವಾ ಅವರನ್ನೂ ಸಹ ಉಪಮುಖ್ಯಮಂತ್ರಿ ಮಾಡಲಾಗುತ್ತದೆಯೇ? ಎಂಬ ಚರ್ಚೆಯೂ ಇದೆ. ಹೀಗೆ ಮೂರು ಉಪಮುಖ್ಯಮಂತ್ರಿ ಖಚಿತ, ನಾಲ್ಕು ಆದರೂ ಅಚ್ಚರಿಯಿಲ್ಲ ಎಂಬುದು ಬಿಜೆಪಿ ಕಚೇರಿಯೊಳಗಿನ ಗುಸುಗುಸು.

ಸಂಪುಟಕ್ಕೆ ಯಾರು ಇನ್? ಯಾರು ಔಟ್?

ರಾಜ್ಯದಲ್ಲಿ ಯುಗಾದಿ ನಂತರ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಯಲಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಖಚಿತಪಡಿಸಿದ್ದಾರೆ. ಕೇವಲ ವಿಸ್ತರಣೆ ಅಷ್ಟೆ ಅಲ್ಲ, ಕೆಲ ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ. ಚುನಾವಣೆ ದೃಷ್ಟಿಯಿಂದ ಹೊಸ ಸಚಿವರ ರಾಜ್ಯದಾದ್ಯಂತ ಉತ್ಸಾಹದಿಂದ ಓಡಾಡಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ. ಈ ಬಾರಿ ಆರ್‌ಎಸ್‌ಎಸ್‌ ಹಿನ್ನೆಲೆ ಹೊಂದಿರುವವರು ಮತ್ತು ಪಕ್ಷಕ್ಕೆ ನಿಷ್ಟರಾಗಿರುವವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.

ಹಿರಿಯ ಸಚಿವರಾದ ಕೆ.ಎಸ್. ಈಶ್ವರಪ್ಪ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಪ್ರಭು ಚಾವ್ಹಾಣ್, ವಿ. ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ. ಇವರನ್ನು ಚುನಾವಣಾ ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತದೆ ಎಂಬ ಮಾತಿದೆ.

ಸದ್ಯ ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಅಲ್ಲದೆ, ಏಳರಿಂದ ಎಂಟು ಮಂದಿ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ. ಹೀಗೆ ಒಟ್ಟಾರೆ 12-13 ಸ್ಥಾನಗಳಿಗೆ ಹೊಸ ಸಚಿವರ ನೇಮಕ ಆಗುತ್ತದೆ. ಅದರಲ್ಲಿ ಬಸವರಾಜ ಪಾಟೀಲ್ ಯತ್ನಾಳ, ಎಂ.ಪಿ. ರೇಣುಕಾಚಾರ್ಯ, ರಾಜುಗೌಡ, ಜಿ.ಎಚ್. ತಿಪ್ಪಾರಡ್ಡಿ, ಎಸ್.ಎ. ರಾಮದಾಸ್, ಎನ್. ಮಹೇಶ್, ಪೂರ್ಣಿಮಾ ಶ್ರೀನಿವಾಸ್, ಅರವಿಂದ ಬೆಲ್ಲದ, ಪಿ. ರಾಜೀವ್ ಹೀಗೆ ಹಲವು ಹೆಸರುಗಳು ಕೇಳಿಬರುತ್ತಿವೆ. ಆದರೆ, ಯುಗಾದಿ ಕಳೆದ ನಂತರ ಎಲ್ಲದಕ್ಕೂ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+