ಮುಂದಿನ ವಿಧಾನಸಭಾ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು, ಜೂ.3: ಬಿಜೆಪಿ ಆಡಳಿತದಲ್ಲಿ ರಾಜ್ಯದ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ಆಗುತ್ತಿದೆ. ಹೀಗಾಗಿ ಎಲ್ಲ ವರ್ಗದವರಿಗೂ ರಕ್ಷಣೆ ನೀಡಲು ನಾವು ತೀರ್ಮಾನಿಸಿದ್ದೇವೆ. ರಾಜ್ಯದ ಸಂಸ್ಕೃತಿ, ಇತಿಹಾಸ, ಪರಂಪರೆಗೆ ಧಕ್ಕೆ ಆಗುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಿಂದ ಭ್ರಷ್ಟಾಚಾರದವರೆಗೂ, ಕೋಮು ಗಲಭೆಯಿಂದ ಸಮಾಜದ ಧ್ರುವೀಕರಣದವರೆಗೂ ಈ ಎಲ್ಲಾ ವಿಚಾರಗಳಿಂದ ರಾಜ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದ್ದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಇದೆಲ್ಲದರ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೇವೆ.
ಬೆಂಗಳೂರಿನಲ್ಲಿ ಎರಡು ದಿನಗಳಿಂದ ರಾಜ್ಯ ಕಾಂಗ್ರೆಸ್ ನವ ಸಂಕಲ್ಪ ಚಿಂತನ ಶಿಬಿರವನ್ನು ನಡೆಸಲಾಯಿತು. ಸಭೆಯಲ್ಲಿ ಎಂ. ಬಿ ಪಾಟೀಲ್ ನೇತೃತ್ವದ ಕೃಷಿ ಹಾಗೂ ರೈತರ ಸಮಿತಿ, ವೀರಪ್ಪ ಮೊಯ್ಲಿ ನೇತೃತ್ವದ ಆರ್ಥಿಕತೆ ಮತ್ತು ಬೆಲೆ ಏರಿಕೆ ಸಮಿತಿ, ರೆಹಮಾನ್ ಖಾನ್ ಅವರ ನೇತತ್ವದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಮಿತಿ, ಕೃಷ್ಣ ಭೈರೇಗೌಡ ಅವರ ನೇತತ್ವದ ಯುವಕರು- ಮಹಿಳೆ- ಶಿಕ್ಷಣ- ಉದ್ಯೋಗ ಸಮಿತಿ, ಬಿ.ಕೆ. ಹರಿಪ್ರಸಾದ್ ನೇತೃತ್ವದ ಪಕ್ಷ ಸಂಘಟನೆ ಸಮಿತಿ, ಪರಮೇಶ್ವರ್ ಅವರ ನೇತೃತ್ವದ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿ ಚರ್ಚೆ ಮಾಡಲಾಯಿತು. ಶಾಸಕರು, ಸಂಸದರು, ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು ಸೇರಿ 600ಕ್ಕೂ ಹೆಚ್ಚು ಆಹ್ವಾನಿತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪ್ರತಿ ಸಮಿತಿಯು 12 ತಾಸಿಗೂ ಹೆಚ್ಚು ಕಾಲ ಚರ್ಚೆ ಮಾಡಿದೆ. ಪಕ್ಷ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಜತೆಗೆ ಚುನಾವಣೆಯ ಪ್ರಣಾಳಿಕೆಗಳಿಗೂ ಸಲಹೆ ನೀಡಿದೆ. ಈ ಎಲ್ಲಾ ವಿಚಾರಗಳ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದು ಡಿಕೆಶಿ ತಿಳಿಸಿದರು.

ರಾಜ್ಯ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದಿಲ್ಲ ಹೋರಾಟ ನಿಶ್ಚಿತ
ಬಿಜೆಪಿ ಸರ್ಕಾರ ಬಂದ ನಂತರ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದ್ದು, ಅದರ ರಕ್ಷಣೆಗೂ ಬದ್ಧವಾಗಿದ್ದೇವೆ. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರ ಮೇಲಿನ ದೌರ್ಜನ್ಯ ಹಾಗೂ ಸುಳ್ಳು ಮೊಕದ್ದಮೆ ದಾಖಲು ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಈ ಸಮುದಾಯಗಳ ರಕ್ಷಣೆಗೆ ಬದ್ಧವಾಗಿರಲು ನಿರ್ಧರಿಸಿದ್ದೇವೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃಷಿ ಕರಾಳ ಕಾಯ್ದೆ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ತೀವ್ರ ವಿರೋಧಕ್ಕೆ ಮಣಿದು ಕೇಂದ್ರ ಸರ್ಕಾರ ಈ ಕಾಯ್ದೆ ಹಿಂಪಡೆದರು, ರಾಜ್ಯ ಸರ್ಕಾರ ಈ ಕಾಯ್ದೆ ಹಿಂಪಡೆದಿಲ್ಲ. ಈ ಕುರಿತು ಹೋರಾಟ ಮಾಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕಾಯ್ದೆಗಳನ್ನು ಹಿಂಪಡೆಯುತ್ತೇವೆ ಎಂದು ತಿಳಿಸಿದರು.

ಮಹಿಳೆಯರಿಗೆ 33% ಯುವಕರಿಗೆ 50% ಮೀಸಲು
ಪಕ್ಷ ಸಂಘಟನೆಯಲ್ಲಿ ಬೂತ್ ಮಟ್ಟದಿಂದ, ರಾಜ್ಯ ಮಟ್ಟದವರೆಗೆ ಖಾಲಿ ಇರುವ ಪದಾಧಿಕಾರಿಗಳ ಹುದ್ದೆಗಳನ್ನೂ ಆದಷ್ಟು ಬೇಗ ಭರ್ತಿ ಮಾಡಲಾಗವುದು. ಜೂ.25ರ ಒಳಗೆ ಸ್ಥಳೀಯ ಮಟ್ಟದ ಸಮಿತಿಗಳ ಚುನಾವಣೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಮಹಿಳೆಯರಿಗೆ 33%ರಷ್ಟು ಅವಕಾಶ ನೀಡಲಾಗುವುದು. ಪಕ್ಷದ ಹುದ್ದೆಯಲ್ಲಿ ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಿ, ಪಂಚಾಯ್ತಿ ಹಾಗೂ ವಾರ್ಡ್ ಅನ್ನು ಒಂದು ಯೂನಿಟ್ ಆಗಿ ಪರಿಗಣಿಸಿ ಸಮಿತಿ ರಚನೆ ಮಾಡಲು ತೀರ್ಮಾನ ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಮೀಸಲಾತಿ ನೀಡುತ್ತೇವೆ. ರಾಜ್ಯ ಮಟ್ಟದಲ್ಲೂ ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ.ಪಕ್ಷದ ಹುದ್ದೆಗಳಲ್ಲಿ, ಸಮಿತಿಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 50ವರ್ಷದೊಳಗಿನ ಯುವಕರಿಗೆ 50%ರಷ್ಟು ಸ್ಥಾನಗಳನ್ನು ಮೀಸಲಿಡಲಾಗುವುದು ಎಂದು ಡಿಕೆಶಿ ಹೇಳಿದರು.

ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ
"ನಶೆ ಬೇಡ ನೌಕರಿ ಬೇಕು' ಎಂಬ ಕಾರ್ಯಕ್ರಮದ ಮೂಲಕ ಯುವಕರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಪಕ್ಷ ಯೋಜನೆ ರೂಪಿಸಲಿದೆ. ಮಾದಕದ್ರವ್ಯ ಮಾತ್ರವಲ್ಲದೆ ಕೋಮು, ಜಾತಿ, ಧರ್ಮ ದ್ವೇಷ, ಗಲಭೆ, ಭಾವನಾತ್ಮಕ ವಿಚಾರಗಳ ನಶೆ ಬೇಡ ಎಂದು ಹೋರಾಟ ಮಾಡುತ್ತೇವೆ.
ನಗರ ಹಾಗೂ ಗ್ರಾಮೀಣ ಯುವಕರಿಗೆ ಉದ್ಯೋಗ ಕಾರ್ಯಕ್ರಮ ರೂಪಿಸಲಾಗುವುದು. ರಾಷ್ಟ್ರ ಮಟ್ಟದ ನರೇಗಾ ಯೋಜನೆ ಮಾದರಿಯಲ್ಲಿ ನಗರ ವ್ಯಾಪ್ತಿಯಲ್ಲೂ ಯುವಕರಿಗೆ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗುವುದು.ಬಿಜೆಪಿ ಬಂದ ನಂತರ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಯುವಕರಿಗೆ ಆಗುತ್ತಿರುವ ಅನ್ಯಾಯ ತಡೆಗೆ ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಕಾರ್ಯಕ್ರಮ. ನೇಮಕಾತಿ ಲಂಚ ಮಟ್ಟಹಾಕಲು ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ. ಎಲ್ಲಾ ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.ನಾಡಿನ ಅಸ್ಮಿತೆ ಕಾಪಾಡಲು ನಾಡು, ನುಡಿ, ಪರಂಪರೆ, ಸಂಸ್ಕೃತಿ ರಕ್ಷಣೆಗೆ ಆರ್ಥಿಕ ಸ್ವಾವಲಂಬನೆ ಉಳಿಸಿಕೊಳ್ಳಲು ಹೋರಾಟ.ಸಮಗ್ರ ಯುವಕ ಸಂಸ್ಕೃತಿ ನೀತಿ, ಕಲೆ ಹಾಗೂ ಕ್ರೀಡೆ ನೀತಿ ಜಾರಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಬೆಂಗಳೂರು, ಕರಾವಳಿ, ಕಲ್ಯಾಣ ಕರ್ನಾಟಕ್ಕೆ ಪ್ರತ್ಯೇಕ ಪ್ರಣಾಳಿಕೆ
ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ನೀರಾವರಿಗೆ 2 ಲಕ್ಷ ಕೋಟಿ ಅನುದಾನ ಮೀಸಲಿಟ್ಟು, ಕೃಷ್ಣ ಮೇಲ್ದಂಡೆ ಮೂರನೇ ಹಂತ, ಭದ್ರ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆ ಸೇರಿದಂತೆ ಎಲ್ಲ ಬಾಕಿ ಯೋಜನೆಗಳ ಪೂರ್ಣಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿ ವರ್ಷ 40 ಸಾವಿರ ಕೋಟಿಯಂತೆ 5 ವರ್ಷಕ್ಕೆ 2 ಲಕ್ಷ ಕೋಟಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ.ಒಣಭೂಮಿ ಇರುವವರಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು.ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಬಯಲು ಸೀಮೆ ಕರ್ನಾಟಕ, ಮಲೆನಾಡು ಕರ್ನಾಟಕ ಹಾಗೂ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ರೂಪಿಸಲಾಗುವುದು. ಕರಾವಳಿ ಭಾಗದ ಯುವಕರು ಉದ್ಯೋಗಕ್ಕೆ ಗೋವಾ, ಮುಂಬೈ, ಅರಬ್ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದು, ಇಲ್ಲೇ ಉದ್ಯೋಗ ಸೃಷ್ಟಿಸಲು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಸ್ಥಳೀಯರಿಗೆ ಅವಕಾಶ ನೀಡಲು ಕಾರ್ಯಕ್ರಮ ರೂಪಿಸಲಾಗುವುದು.

ಜಿಲ್ಲೆಗಳಲ್ಲಿ ಆ.9ರಿಂದ 15ರ ವರೆಗೆ 75 ಕೀ.ಮೀ ಪಾದಯಾತ್ರೆ
ಡಬಲ್ ಇಂಜಿನ್ ಸರ್ಕಾರ ಇದ್ದರೂ ಈಗ ವಸತಿ ಕ್ಷೇತ್ರಕ್ಕೆ ಬಿಜೆಪಿ ಆದ್ಯತೆ ನೀಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಳ್ಳಿ ಹಾಗೂ ನಗರಗಳಲ್ಲಿ ಸಿಂಗಲ್ ಬೆಡ್ ರೂಮ್ ಮನೆ ಬದಲು ಎರಡೂ ಬೆಡ್ ರೂಮ್ ಮನೆ ನೀಡಲು ಯೋಜನೆ ರೂಪಿಸಲಾಗುವುದು. ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯಲು ಹಾಗೂ ಪಶ್ಚಿಮ ಘಟ್ಟದ ಭಾಗದ ರೈತರನ್ನು ಒಕ್ಕಲೆಬ್ಬಿಸದಂತೆ ಹೋರಾಟ ರೂಪಿಸಲಾಗುವುದು. ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು, 25 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಎಲ್ಲಾ ವರ್ಗದ ರೈತರಿಗೆ ಹಕ್ಕುಪತ್ರ ನೀಡಲು ಸರ್ಕಾರಕ್ಕೆ ಆಗ್ರಹ ಮಾಡಲಾಗುವುದು. ನಮ್ಮ ಸರ್ಕಾರ ಬಂದಾಗ ಇದನ್ನು ಜಾರಿ ಮಾಡಲಾಗುವುದು.ಪಕ್ಷ ಸಂಘಟನೆಗೆ ಇದೇ ತಿಂಗಳು ಜಿಲ್ಲಾ ಮಟ್ಟದಲ್ಲಿ ಚಿಂತನಾ ಶಿಬಿರ ಆಯೋಜನೆಗೆ ತೀರ್ಮಾನ. ಅಲ್ಲಿ ಸ್ಥಳೀಯ ಸಮಸ್ಯೆ ಚರ್ಚಿಸಲು ನಮ್ಮ ಮುಖಂಡರಿಗೆ ಸೂಚನೆ ನೀಡಲಾಗುವುದು.75 ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆ.9ರಿಂದ 15ರ ವರೆಗೆ 75 ಕೀ.ಮೀ ಪಾದಯಾತ್ರೆ ಮಾಡಲಾಗುವುದು. ಬೆಂಗಳೂರಿನಲ್ಲಿ ಆ.15ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ತಿಳಿಸಿದರು.

ಇಡೀ ಪಕ್ಷ NSUI ಸಂಘಟನೆ ಪರ ನಿಲ್ಲಲಿದೆ
NSUI ಸಂಘಟನೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಬಂಧನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಹೋರಾಟ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಕ್ಕೆ ಇಲ್ಲಸಲ್ಲದ ಸೆಕ್ಷನ್ ಬಳಸಿ ಪ್ರಕರಣ ದಾಖಲಿಸಿದ್ದಾರೆ. ಅವರಿಗೆ ಜಾಮೀನು ಸಿಗಬಾರದು ಎಂಬ ಕಾರಣಕ್ಕೆ ಅನಗತ್ಯ ಸೆಕ್ಷನ್ ಸೇರಿಸಿ ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಮಾತನಾಡಿದವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಶಾಸಕರು, ಮಂತ್ರಿಗಳು ಸಾಕಷ್ಟು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಪ್ರಮೋದ್ ಮುತಾಲಿಕ್, ಈಶ್ವರಪ್ಪನವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಕೀರ್ತಿ ಗಣೇಶ್ ನಮ್ಮ ಹುಡುಗ. ನಮ್ಮ ವಿದ್ಯಾರ್ಥಿ ಸಂಘದ ಅಧ್ಯಕ್ಷ. ಪಠ್ಯ ಪುಸ್ತಕ ವಿಚಾರದಲ್ಲಿ ಅಂಬೇಡ್ಕರ್, ಬಸವಣ್ಣ, ಕುವೆಂಪು, ನಾರಾಯಣ ಗುರುಗಳು, ಭಗತ್ ಸಿಂಗ್ ಅವರ ವಿಚಾರಗಳನ್ನು ಬಿಟ್ಟಿದ್ದು, ಅವರಿಗೆ ಅಪಮಾನ ಮಾಡಿದ್ದಾರೆ. ಅವರೆಲ್ಲರೂ ಈ ದೇಶದ ಆಸ್ತಿ. ಇದರ ವಿರುದ್ಧ ಧ್ವನಿ ಎತ್ತಿದವರ ಮೇಲೆ ಈ ರೀತಿ ಕ್ರಮ ಸರಿಯಲ್ಲ. ಇಡೀ ಪಕ್ಷ ಅವರ ಪರ ನಿಲ್ಲಲಿದೆ' ಎಂದು ಉತ್ತರಿಸಿದರು.

ಕೋಮುವಾದವನ್ನು ಖಂಡಿಸುತ್ತೇವೆ
ಮಳಲಿ ಮಸೀದಿ ತಾಂಬೂಲ ಪ್ರಶ್ನೆ ಮಾಡಿದಾಗ ಕಾಂಗ್ರೆಸ್ ಧ್ವನಿ ಎತ್ತಲಿಲ್ಲ ಎಂದು ಕೇಳಿದ ಪ್ರಶ್ನೆಗೆ ' ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಇದು ಮುಗಿದ ಅಧ್ಯಾಯ. ಈಗ ಅವರು ಕೇವಲ ಪ್ರಚಾರಕ್ಕೆ ಈ ವಿಷಯ ಬಳಸಿಕೊಳ್ಳುತ್ತಿದ್ದಾರೆ. ಮುಸಲ್ಮಾನರು ಹಾಗೂ ಕ್ರೈಸ್ತ ಸಮುದಾಯದವರ ಮೇಲೆ ದೌರ್ಜನ್ಯ ವಿರುದ್ಧ ಹೋರಾಡಿ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ' ಎಂದು ಉತ್ತರಿಸಿದರು. ಅಲ್ಪಸಂಖ್ಯಾತರ ಕೋಮುವಾದ ವಿಚಾರವಾಗಿ ಪಕ್ಷದ ನಿಲುವೇನು ಎಂದು ಕೇಳಿದ ಪ್ರಶ್ನೆಗೆ, ' ಯಾರೇ ಆದರೂ ಕೋಮುವಾದವನ್ನು ನಾವು ಖಂಡಿಸುತ್ತೇವೆ ' ಎಂದು ಹೇಳಿದರು.ಪಕ್ಷದ ಸಂಘಟನೆ ಹಾಗೂ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ' ಪಕ್ಷದ ಎಲ್ಲ ನಾಯಕರು ಸೇರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರ ಬರುತ್ತದೆ. ಈ ಎಲ್ಲಾ ಕಾರ್ಯಕ್ರಮ ಜಾರಿಗೆ ತರುತ್ತೇವೆ ' ಎಂದರು.












Click it and Unblock the Notifications