Ekagrid: ಕರ್ನಾಟಕದಲ್ಲಿ ಎಕಾಗ್ರಿಡ್ ವಿವಿ ತೆರೆಯಲು 200 ಎಕರೆ ಭೂಮಿ ಶೋಧ: ವಿವರ
ಸ್ಯಾನ್ ಫ್ರಾನ್ಸಿಸ್ಕೊ, ಅಕ್ಟೋಬರ್ 05: ಸಂಶೋಧನಾ ಆಧಾರಿತವಾಗಿರುವ ಎಕಾಗ್ರಿಡ್ ವಿಶ್ವವಿದ್ಯಾಲಯವು ಬೆಂಗಳೂರು ಅಥವಾ ಮೈಸೂರಿನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಆಸಕ್ತಿ ತೋರಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಅಗತ್ಯವಾದ 200 ಎಕರೆ ಜಮೀನು ಕೇಳಿದೆ ಎಂದು ರಾಜ್ಯ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಸಂಬಂಧ ವಿಶ್ವವಿದ್ಯಾಲಯದ ಪ್ರತಿನಿಧಿಗಳಾದ ಪ್ರೊ.ಕೃಷ್ಣ ಸಾರಸ್ವತ್ ಮತ್ತು ಸಿಒಒ ಶೈಲೇಂದ್ರ ಕುಮಾರ್ ಅವರೊಂದಿಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಗಿದೆ ಎಂದು ಅವರು ತಿಳಿಸಿದರು.

2018ರಲ್ಲಿ ಭಾರತದಲ್ಲೇ ಕಾರ್ಯಾರಂಭ ಮಾಡಿರುವ ಎಕಾಗ್ರಿಡ್ ವಿಶ್ವವಿದ್ಯಾಲಯವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಗುರಿ ಹೊಂದಿದೆ. ಮುಂಬರುವ ದಿನಗಳಲ್ಲಿ ಈ ವಿಶ್ವವಿದ್ಯಾಲಯವು ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಿದೆ.
ಅಷ್ಟೇ ಅಲ್ಲದೇ ದೇಶದಲ್ಲಿ ಅಗ್ರ ಶ್ರೇಣಿಯ ಮೊದಲ 25 ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದೆ. ಕರ್ನಾಟಕದಲ್ಲಿ ಇರುವ ಉನ್ನತ ಶಿಕ್ಷಣ ಕಾರ್ಯ ಪರಿಸರದಲ್ಲಿರುವ ಅತ್ಯುತ್ತಮ ನೀತಿಗಳನ್ನು ಅವರ ಗಮನಕ್ಕೆ ತರಲಾಗಿದ್ದು, ರಾಜ್ಯದಲ್ಲಿ ಕ್ಯಾಂಪಸ್ ತೆರೆಯಲು ಅವರು ಮನಸ್ಸು ಮಾಡಿದ್ದಾರೆ ಎಂದರು.
ಕೈಗಾರಿಕೆಗಳ ಬೆಳವಣಿಗೆಗೆ ಫಿಕ್ಟೀವ್ ಜತೆ ಚರ್ಚೆ
ಮೆಕ್ಯಾನಿಕಲ್ ಬಿಡಿಭಾಗಗಳ ಉತ್ಪಾದನೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಫಿಕ್ಟೀವ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಕೂಡ ಇದೇ ಸಂದರ್ಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಗ್ರ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಭಾರತದ ಪ್ರಧಾನ ಕಚೇರಿಯನ್ನು ತೆರೆದಿದೆ. ಕರ್ನಾಟಕದಲ್ಲಿ ಮೆಕ್ಯಾನಿಕಲ್ ಬಿಡಿಭಾಗಗಳ ಉತ್ಪಾದನೆಯನ್ನು ಬೆಂಬಲಿಸುವಂತಹ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಮಶೀನ್ ಲರ್ನಿಂಗ್ ಮೂಲಕ ತಂತ್ರಜ್ಞಾನದ ಬಲ ನೀಡುವ ಕುರಿತು ವಿಚಾರ ವಿನಿಮಯ ನಡೆಸಲಾಯಿತು.
ಈ ಭೇಟಿಯಲ್ಲಿ ವೈಮಾಂತರಿಕ್ಷ, ಮಶೀನ್ ಟೂಲ್ಸ್, ಆಟೋ/ಇವಿ, ಮತ್ತು ಕೈಗಾರಿಕಾ ಕ್ರಾಂತಿ 4.0 ಕ್ಷೇತ್ರಗಳಲ್ಲಿ ಇಡಬಹುದಾದ ಹೆಜ್ಜೆಗಳನ್ನು ಕುರಿತು ಪರಸ್ಪರ ಆಸಕ್ತಿಗಳನ್ನು ಹಂಚಿಕೊಳ್ಳಲಾಗಿದೆ ಎಂದರು.
ಮಾತುಕತೆಯಲ್ಲಿ ಕಂಪನಿಯ ಪರವಾಗಿ ಸಿಎಫ್ಒ ಎಡ್ಡೀ ಚೆನ್, ನಿರ್ದೇಶಕ ಆ್ಯಡಂ ರೋಡ್ಸ್ ಉಪಸ್ಥಿತರಿದ್ದರು. ರಾಜ್ಯ ಸರಕಾರದ ನಿಯೋಗದಲ್ಲಿ ಸಚಿವರ ಜತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.












Click it and Unblock the Notifications