ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ!
ರಾಜ್ಯದ ವಿದ್ಯಾರ್ಥಿಗಳಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯದ 42 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ 51 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ವಿಭಾಗ ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿತ್ತು. ಈಗ ಮತ್ತೆ 42 ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕ್‌ಚಂದ್ರ ಅನುಮತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹಲವು ವರ್ಷಗಳ ಹಿಂದೆಯೇ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದೆ. ಇನ್ನು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ಆರಂಭಿಸಲು ಸಹ ಅನುಮತಿ ನೀಡಲಾಗಿತ್ತು. ಈಗಿರುವ 286 ಪಬ್ಲಿಕ್ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವಂತಹ 51 ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಅನ್ನು ಹೆಚ್ಚುವರಿಯಾಗಿ ಆರಂಭಿಸಲಾಗುತ್ತಿದೆ ಎಂದು ವರದಿಯಾಗಿದೆ.

ಇನ್ನು ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಹಾಗೂ ಒಂದನೇ ತರಗತಿಯಿಂದ ಕನ್ನಡ ಮಾಧ್ಯಮದ ಜತೆ ಇಂಗ್ಲಿಷ್ ಮೀಡಿಯಂಗೂ ಅವಕಾಶ ಕೋರುವಂತೆ ಹಾಗೂ ಹೆಚ್ಚುವರಿ ವಿಭಾಗದ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಈಚೆಗೆ ಸೂಚಿಸಿತ್ತು.
ಯೂಟರ್ನ್ ಹೊಡೆದ ಶಿಕ್ಷಣ ಸಚಿವ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕನ್ನಡ ಬರಲ್ಲ ಎನ್ನುವ ವಿಚಾರವಾಗಿ ಸಖತ್ ಟ್ರೋಲ್ ಆಗಿದ್ದರು. ಇನ್ನು ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಎದುರೇ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಹೇಳಿದ್ದ. ಇದಕ್ಕೆ ಸಚಿವರು ಫುಲ್ ಗರಂ ಆಗಿ ವಿದ್ಯಾರ್ಥಿ ಮೇಲೆ ಕ್ರಮಕ್ಕೂ ಸೂಚಿಸಿದ್ದು ವಿಡಿಯೋಗಳಲ್ಲಿ ಸೆರೆಯಾಗಿತ್ತು. ಈಗ ಈ ವಿಚಾರವಾಗಿ ಸಚಿವ ಯೂಟರ್ನ್ ಹೊಡೆದಿದ್ದಾರೆ.
ಮಧು ಬಂಗಾರಪ್ಪ ಅವರು ಟ್ರೋಲರ್‌ಗಳ ವಿರುದ್ಧ ಗರಂ ಆಗಿದ್ದು, ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎನ್ನುವ ವಿಚಾರವಾಗಿ ವಿವಿಧ ಟ್ರೋಲ್ ಪೇಜ್‌ಗಳು ಮಧು ಬಂಗಾರಪ್ಪ ಅವರ ಬಗ್ಗೆ ಟ್ರೋಲ್ ಮಾಡಿದ್ದವು. ಇದಕ್ಕೆ ಕೆಂಡಾಮಂಡಲವಾಗಿರುವ ಅವರು, ಟ್ರೋಲ್ ಮಾಡಿ ನನ್ನನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟ್ರೋಲ್‌ಗಳಿಗೆ ಹೆದರುವ ಮಧು ಬಂಗಾರಪ್ಪ ನಾನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕ್ರಮಕ್ಕೆ ಸೂಚನೆ ವಿಚಾರವಾಗಿ ಯೂಟರ್ನ್ ಹೊಡೆದಿರುವ ಅವರು ನಾನು ಹೇಳಿದ್ದು ವಿದ್ಯಾರ್ಥಿಗಲ್ಲ, ನಾನು ಸಂಬಂಧಪಟ್ಟ ಹೆಡ್ ಮಾಸ್ಟರ್ ಮತ್ತು ಬಿಇಓ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದು. ಇದನ್ನು ಮಾಧ್ಯಮಗಳು ತಪ್ಪಾಗಿ ತೋರಿಸಿವೆ ಎಂದೂ ಗರಂ ಆಗಿದ್ದಾರೆ. ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳಲು ನಮಗೆ ಯಾವುದೇ ಅಧಿಕಾರವಿಲ್ಲ. ಹಾಗಾಗಿ ನಿಮ್ಮ ಮಕ್ಕಳನ್ನು ಕಂಟ್ರೋಲ್‌ನಲ್ಲಿ ಇಡಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಮಾಧ್ಯಮಗಳು ಸುಮ್ಮನೆ ಇಲ್ಲದ್ದನ್ನು ತಂದಿದ್ದೀರಿ ಎಂದು ರೇಗಿದ್ದಾರೆ.
ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅನ್ನೋದನ್ನ ತೋರಿಸ್ತೀರಿ. ಸಾವಿರಾರು ಮಕ್ಕಳು ಇದ್ದಾಗ ಆ ರೀತಿ ಮಾತನಾಡುವುದು ಸರಿಯಲ್ಲ. ಟ್ರೋಲ್ ಮಾಡಿದ್ರೆ ನನಗೇನು ಆಗಬೇಕಿಲ್ಲ ಎಂದು ಟ್ರೋಲರ್‌ಗಳ ವಿರುದ್ಧವೂ ಗುಡುಗಿದ್ದಾರೆ. ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕಿವಿಮಾತು ಹೇಳಿದ್ದರು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದರು.












Click it and Unblock the Notifications