ಕೋವಿಡ್ ಕಾಲದ ಒಂಟಿತನ, ಮೊಬೈಲ್ ಗೀಳಿನಿಂದ ಹೊರಬಾರದ ಶಾಲಾ ಮಕ್ಕಳು
ಬೆಂಗಳೂರು, ಮೇ31: ಕರ್ನಾಟಕದಲ್ಲಿ ಶಾಲೆಗಲು ಪ್ರಾರಂಭವಾಗಿ ಹದಿನೈದು ದಿನಗಳು ಕಳೆದಿವೆ. ಶಾಲೆಗಳಲ್ಲಿ ಕಲಿಕಾ ಚೇತರಿಕೆ ಮೂಲಕ ಮಕ್ಕಳನ್ನು ತಹಬದಿಗೆ ತರುವ ಯತ್ನವನ್ನು ಶಿಕ್ಷಣ ಇಲಾಖೆ ಮಾಡಿದೆ. ಇದರ ನಡುವೆ ಮಕ್ಕಳು ಸೈಕಾಲಜಿಕಲ್ ಸಮಸ್ಯೆಗಳನ್ನು ಎದುರಿಸುತ್ತಿರುವುದು ಶಿಕ್ಷಕರಿಗೆ ಬೋದನೆಗೆ ತೊಡಕು ಉಂಟು ಮಾಡುತ್ತಿದೆ. ಶಾಲೆಗಳಲ್ಲಿ ನಡವಳಿಕೆ, ಮಕ್ಕಳ ಚಟುವಟಿಕೆ ಸಹಜವಾಗಿಲ್ಲದಿರೋದು ಶಿಕ್ಷಕರನ್ನು ಚಿಂತನೆಗೀಡು ಮಾಡಿದೆ.
ಮಕ್ಕಳಿಗೆ ವಿದ್ಯೆಯನ್ನು ಕೊಡುವ ವಿದ್ಯಾಮಂದಿರ, ಅದು ಸರ್ಕಾರಿ ಶಾಲೆಯಾಗಲಿ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಯಾಗಲಿ ಮಕ್ಕಳ ಗುಣಸ್ವಭಾವ ಒಂದೇಯಾಗಿರುತ್ತದೆ. ಮಕ್ಕಳ ಕಲಿಕೆ, ಆಟದ ವಿಚಾರದಲ್ಲಿ ತುಡಿತವಿರುತ್ತದೆ. ಆದರೆ ಕೋವಿಡ್‌ನ ತೊಂದರೆಯಿಂದಾಗಿ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿರುವುದು ಮಾತ್ರವಲ್ಲದೇ ಮಕ್ಕಳ ಗುಣ ಸ್ವಭಾವದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಶಿಕ್ಷಕರು ಗುರುತಿಸುತ್ತಿದ್ದಾರೆ.
ಮಕ್ಕಳು ಆನ್‌ಲೈನ್ ಗುಂಗಿನಿಂದ ಹೊರಬಂದಿಲ್ಲ. ಕೋವಿಡ್ ಪೂರ್ವದಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಮಕ್ಕಳು ಹಾಳಾಗಿ ಹೋಗುತ್ತಾರೆ ಎಂದು ಹೇಳುತ್ತಿದ್ದ ಶಿಕ್ಷಕರು ಸ್ವತಃ ತಾವೇ ಶಿಫಾರಸ್ಸು ಮಾಡಿ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದರು. ಎರಡು ಗಂಟೆಯ ಪಾಠವನ್ನು ಮಕ್ಕಳು ಆನ್‌ಲೈನ್‌ನಲ್ಲಿ ಕೇಳಿದರೇ ಉಳಿದ ಅವಧಿಯನ್ನು ಮಕ್ಕಳು ಗೇಮ್ ಆಡಲು, ಕೆಲವು ಸಿನಿಮಾ ನೋಡಲು, ಸ್ನೇಹಿತರ ಜೊತೆ ಚಾಟ್ ಮಾಡಲು. ಮಾತನಾಡಲು, ಗ್ರೂಪ್ ಕ್ರಿಯೆಟ್ ಮಾಡಿಕೊಂಡು ಪರಸ್ಪರರು ತಮಾಷೆ ಮಾಡಲು ಬಳಸಿಕೊಳ್ಳುತ್ತಿದ್ದರು.

ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ
ಪಾಠಕ್ಕಿಂದ ಹೆಚ್ಚು ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿಬಿಟ್ಟಿದ್ದರು. ಶಾಲೆಗಳು ಪ್ರಾರಂಭವಾದ ಬಳಿಕ ಆಫ್‌ಲೈನ್ ತರಗತಿಗಳು ನಡೆಯುತ್ತಿವೆ. ಮಕ್ಕಳ ಕೈಗಿಟ್ಟಿದ್ದ ಮೊಬೈಲ್ ಮನೆಯಲ್ಲಿಯೇ ಬಿಟ್ಟು ತರಗತಿಗೆ ಹಾಜರಾಗಬೇಕಿದೆ. ಮೊಬೈಲ್ ಬಳಸಬೇಕಾದರು ಹೆತ್ತವರ ಪರ್ಮಿಷನ್ ತೆಗೆದುಕೊಳ್ಳಬೇಕು. ಇದರಿಂದ ಕೆಲವು ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದ್ದು ಶಿಕ್ಷಕರು ಮಕ್ಕಳನ್ನು ಸರಿದಾರಿಗೆ ತರಲು ಸಾಕಷ್ಟು ಶ್ರಮಹಾಕುತ್ತಿದ್ದಾರೆ.

ಮಕ್ಕಳು ಒಬ್ಬಂಟಿಗಳಾಗುತ್ತಿರುವುದು ಆತಂಕಕಾರಿ ವಿಷಯ
ಪ್ರಿಯ ಪೋಷಕರೇ ನೆನಪಿರಲಿ, ನೀವೆಲ್ಲಾ ಶಾಲೆಗೆ ಹೋಗುವ ಸಮಯದಲ್ಲಿ ಸ್ನೇಹಿತರೊಂದಿಗೆ ಎಂಥ ಅನ್ಯೋನ್ಯಸಂಬಂಧ ಇರುತ್ತಿತ್ತು ಎಂಬುದು. ಸ್ನೇಹಿತರು ನಮ್ಮ ಜೊತೆಯಲ್ಲಿಯೇ ಕುಳಿತುಕೊಳ್ಳಬೇಕು, ಸ್ನೇಹಿತರ ಜೊತೆಯಲ್ಲಿ ಲಂಚ್ ಬಾಕ್ಸ್ ಗಳನ್ನು ಶೇರ್ ಮಾಡಿಕೊಂಡು ತಿನ್ನಬೇಕು. ಮನೆಗೆ ಹೋಗುವಾಗ ಶಾಲೆಗೆ ಬರುವಾಗ ಮಾರ್ಗಮಧ್ಯೆ ಕಾಯುತ್ತ ಜೊತೆ ಜೊತೆಯಲ್ಲಿಯೇ ಹೋಗಬೇಕು ಎಂದುಕೊಳ್ಳುತ್ತಿದ್ದೆವು. ಆದರೆ ""ಮಕ್ಕಳಲ್ಲಿ ಈಗ ಆ ಅನ್ಯೋನ್ಯಭಾವವೇ ಕಾಣಿಸುತ್ತಿಲ್ಲ. ಮಕ್ಕಳು ತರಗತಿಯಲ್ಲಿಯು ಒಬ್ಬಂಟಿಗಳಾಗುತ್ತಿರುವುದು ಆತಂಕಕಾರಿ ವಿಷಯ'' ಎನ್ನುತ್ತಾರೆ ಸರ್ಕಾರಿ ಶಾಲೆಯೊಂದರ ಮುಖ್ಯೋಪಾದ್ಯಾಯರು.

ಪ್ರೌಢಶಾಲೆಯ ಮಕ್ಕಳ ಚಂಚಲ ಮನೋಭಾವ ಅಡ್ಡಿ
ಪ್ರೌಢಶಾಲೆ ಮಕ್ಕಳ ಜೀವನಘಟ್ಟದಲ್ಲಿ ಅತ್ಯಂತ ಮಹತ್ವಪೂರ್ಣವಾಗಿರುವಂತದ್ದು. ಮಕ್ಕಳು ದೈಹಿಕವಾಗಿ ನಾನಾ ವೈರುಧ್ಯಗಳು ಕಂಡು ಬರುವ ವಯಸ್ಸು. ಮಕ್ಕಳು ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಸಾಕಷ್ಟು ಸಂಕುಚಿತ ಮನೋಭಾನೆ ಮನಸ್ಸಿನಲ್ಲಿ ತುಮುಲಗಳು ಉಂಟಾಗಿರುತ್ತವೆ. ಕೋವಿಡ್ ನಿಂದ ಮಕ್ಕಳು ಸರಿಯಾಗಿ ಬೆರೆಯದೇ ಇರೋದರಿಂದ ಪರಸ್ಪರರು ಏನನ್ನು ಹೇಳಿಕೊಳ್ಳಲು ಹೆದರುವ ಮತ್ತು ಹಂಚಿಕೊಳ್ಳಲು ಹಿಂಜರಿಕೆ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ಧೈರ್ಯತುಂಬುವ ಮತ್ತು ವೈಯಕ್ತಿಕವಾಗಿ ಮಾತನಾಡಿ ಸಮಸ್ಯೆ ಆಲಿಸಿ ಪರಿಹಾರವನ್ನು ಸೂಚಿಸಬೇಕಿದೆ.

ಮನೋತಜ್ಞರ ಕೌನ್ಸಿಲಿಂಗ್ ಅವಶ್ಯ
ಮಕ್ಕಳಲ್ಲಿನ ಕಲಿಕಾ ಹಿಂಜರಿಕೆಯನ್ನು ಶಿಕ್ಷಕರು ಹೋಗಲಾಡಿಸುವ ಕೆಲಸವನ್ನು ಮಾಡಬೇಕಿದೆ. ಮಕ್ಕಳಿಗೆ ವಿಭಿನ್ನವಾಗಿ ಹಾಡು , ಕತೆಗಳು, ಸ್ಫೂರ್ತಿ ತುಂಬುವ ಕತೆಗಳು ಸೇರಿದಂತೆ ಮಕ್ಕಳನ್ನು ಕ್ರಿಯಾಶೀಲರನ್ನಾಗಿಡಲು ಶಿಕ್ಷಕರ ಪಾತ್ರ ಬಲು ದೊಡ್ಡದು. ಇನ್ನು ಶಿಕ್ಷಕರು ಮಾತೃ ಸ್ವರೂಪಿಯಾಗಿಯೂ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಶಿಕ್ಷಕರು ತಮ್ಮ ಶಿಕ್ಷಕ ಪದವಿಯನ್ನು ಪೂರೈಸುವ ವೇಳೆಯಲ್ಲಿ ಮಕ್ಕಳ ಸೈಕಾಲಾಜಿ ವಿಷಯವನ್ನು ಓದಿರುವುದರ ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿಗೆ ತಮ್ಮ ಪರಿಚಯದ ಮನೋವೈದ್ಯರ ಮೂಲ ಕೌನ್ಸಿಲಿಂಗ್ ಕೊಡಿಸುವುದರಿಂದ ಮಕ್ಕಳು ಪುನಃ ಕ್ರಿಯಾಶೀಲರಾಗಿ ಕೋವಿಡ್ ಪೂರ್ವದಂತೆ ಪಾಠವನ್ನು ಕೇಳಲಿದ್ದಾರೆ ಮತ್ತು ಕಲಿಯಲಿದ್ದಾರೆ.












Click it and Unblock the Notifications