ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ED ದಾಳಿ: ಯಾಕೆ?
ಬೆಂಗಳೂರು, ಏಪ್ರಿಲ್ 25: ಈವರೆಗೂ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಹೆಸರು ತುಳುಕು ಹಾಕಿಕೊಂಡು ಸಂಕಷ್ಟ ಎದುರಿಸುತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಮಾಜಿ ಸಚಿವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ರಾತ್ರಿಯಿಡೀ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ವಿನಯ್ ಕುಲಕರ್ಣಿ ನಿವಾಸದ ಮೇಲೆ ಏಪ್ರಿಲ್ 23 ಬುಧವಾರ ರಾತ್ರಿ ಏಕಾಏಕಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಂಪೂರ್ಣ ೨೮ ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದಲ್ಲಿ ಚಿನ್ನ ಅವ್ಯವಹಾರ ಪ್ರಕರಣ ಬಹಳಷ್ಟು ಸದ್ದು ಮಾಡಿದ್ದು, ಐಶ್ವರ್ಯಾ ಗೌಡ ಹಾಗೂ ಶಿಲ್ಪಾ ಗೌಡ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಬೇನಾಮಿ ವ್ಯವಹಾರ ನಡೆಸಿದ್ದಾರೆ ಎಂದು ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಆಧರಿಸಿ ಇಸಿಐಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವಾರು ಉದ್ಯಮಿಗಳ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಸ್ವತಃ ವಿನಯ್ ಕುಲಕರ್ಣಿ ಮಾಧ್ಯಮಗಳ ಜೊತೆ ಮಾತನಾಡಿದ್ದು, 'ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರೆ. ಈ ಪ್ರಕರಣದ ಹಿಂದಿನ ಕೈಗಳೇ ಬೇರೆ. ನನ್ನ ಮೇಲೆ ಯಾವ್ಯಾವ ಕೇಸ್ ಹಾಕಬೇಕು ಅದನೆಲ್ಲಾ ಈಗಾಗಲೇ ಹಾಕಿದ್ದಾರೆ. ಇದೆಲ್ಲಾ ರಾಜಕೀಯ ಷಡ್ಯಂತ್ರ. ನನ್ನ ಮನೆಯಲ್ಲಿ ಏನೂ ಸಿಕ್ಕಿಲ್ಲ. ನಾನು ಯಾವುದೇ ವ್ಯವಹಾರ ಮಾಡುವುದಿಲ್ಲ. ನಾವು ರೈತರು. ಅದನ್ನು ಬಿಟ್ಟು ಬೇರೆ ಉದ್ಯೋಗ ನನಗೆ ಗೊತ್ತಿಲ್ಲ' ಎಂದರು.

'ಅವರಿಗೆ ಏನು ಬೇಕಾಗಿತ್ತು ಅದೆಲ್ಲಾ ಹುಡುಕಿದ್ದಾರೆ. ಆದರೆ ನನ್ನ ಹತ್ತಿರ ಏನೂ ಸಿಕ್ಕಿಲ್ಲ. ನಿರಂತರವಾಗಿ ಒಂದು ತಿಂಗಳಿನಿಂದ ನನ್ನ ಮೇಲೆ ಈ ರೀತಿಯ ಕಿರುಕುಳ ನಡೆಯುತ್ತಿದೆ. ರಾಜಕೀಯವಾಗಿ ನಾನು ಯಾರನ್ನೂ ಭೇಟಿಯಾಗಲು ಆಗುತ್ತಿಲ್ಲ. ನಾನು ಶಾಸಕನಾದರೂ ಕೂಡ ನನ್ನ ಕ್ಷೇತ್ರಕ್ಕೆ ಹೋಗಲು ಆಗುವುತ್ತಿಲ್ಲ. ಪಕ್ಷ ಯಾವುದೇ ಆದರೂ ಕೂಡ ಒಬ್ಬ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೆ ಒಂದು ಮಿತಿ ಇರಬೇಕು. ತುಂಬಾ ನೋವಾಗುತ್ತದೆ' ಎಂದು ಭಾವುಕರಾಗಿದ್ದಾರೆ.












Click it and Unblock the Notifications