DK Shivakumar: ಸಿದ್ದರಾಮಯ್ಯ ಪತ್ನಿ, ಆಪ್ತನಿಗೆ ಇಡಿ ನೋಟೀಸ್: ಡಿ ಕೆ ಶಿವಕುಮಾರ್ ಏನಂದ್ರು?
ಬೆಂಗಳೂರು, ಜನವರಿ 27: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂ ಮಂಜೂರಾತಿ ಪ್ರಕರಣದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ನೀಡಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಸದಾಶಿವನಗರ ನಿವಾಸದ ಬಳಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜಕೀಯ ಪಿತೂರಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ಸಂಸ್ಥೆ ನೋಟಿಸ್ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನನ್ನ ವಿರುದ್ಧದ ಪ್ರಕರಣದಲ್ಲೂ ಹೀಗೆ ಆಗಿತ್ತು. ಒಂದು ಪ್ರಕರಣವನ್ನು ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿಲ್ಲ. ಲೋಕಾಯುಕ್ತ ಸಂಸ್ಥೆ ಈಗಾಗಲೇ ತನಿಖೆ ಮಾಡುತ್ತಿದೆ. ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗ ಬೇರೆ ಸಂಸ್ಥೆಗಳು ತನಿಖೆ ನಡೆಸಲು ಆಗುವುದಿಲ್ಲ ಎಂದು ನ್ಯಾಯಾಲಯಗಳು ಅನೇಕ ತೀರ್ಪು ನೀಡಿವೆ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದ ನಂತರ ನಾನು ಮಾತನಾಡುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಮುಡಾ ಪ್ರಕರಣ ಸಿಬಿಐ ತನಿಖೆ ನೀಡಬೇಕು ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನನ್ನ ಪ್ರಕರಣದಲ್ಲೂ ಸಿಬಿಐ ಹಾಗೂ ಇಡಿ ಒಟ್ಟಿಗೆ ತನಿಖೆ ಮಾಡುತ್ತಿದ್ದವು. ಯಾವುದೇ ಸಂಸ್ಥೆಗಳಾಗಲಿ ಒಟ್ಟಿಗೆ ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ಮಾಡುವಂತಿಲ್ಲ. ಈ ಕುರಿತಾಗಿ ಬಂದಿರುವ ನ್ಯಾಯಾಲಯದ ತೀರ್ಪುಗಳನ್ನು ನನ್ನ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಪ್ರಸ್ತಾಪ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನೂ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸಚಿವರ ಹೇಳಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದು, ಆ ರೀತಿಯಾಗಿ ಯಾರೂ ಏನೂ ಮಾತನಾಡಿಲ್ಲ. ಸರ್ಕಾರ ಸುಭದ್ರವಾಗಿದೆ. ನಾವೆಲ್ಲರೂ ಸಿಎಂ ಅವರ ಕೆಳಗೆ ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5300 ಕೋಟಿ ಕೊಟ್ಟಿಲ್ಲ, ಆದರೆ ಈ ಯೋಜನೆಗಳಿಗೆ ಹಣ ನೀಡುತ್ತಾರಾ ಎಂದು ಕೇಳಿದಾಗ, "ನೋಡೋಣ, ರಾಜ್ಯದಿಂದ ಇಷ್ಟೊಂದು ಸಂಸದರು ಇದ್ದಾರೆ, ಕರ್ನಾಟಕ ರಾಜ್ಯಕ್ಕೆ ಮೋಸ ಮಾಡುವುದಿಲ್ಲ, ಅನುದಾನ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಕೇಳಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಒಂದೇ ದಿನದಲ್ಲಿ ಮೋದಿ ಅವರ ಕೈಯಿಂದ ಮೇಕೆದಾಟಿಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಅದಕ್ಕಾಗಿ ಕ್ಷಣಗಣನೆಗೆ ಕಾಯುತ್ತಿದ್ದೇನೆ.
ಪ್ರಹ್ಲಾದ್ ಜೋಷಿ ಹಾಗೂ ಜಗದೀಶ್ ಶೆಟ್ಟರ್ ಅವರು ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುತ್ತಾರೆ ಎಂದು ಕಾಯುತ್ತಿದ್ದೇನೆ. ನಾವು ಈ ವಿಚಾರವಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಸಂಸತ್ ಕಲಾಪದ ವೇಳೆಯೂ ಹೋಗಿ ಭೇಟಿ ಮಾಡುತ್ತೇನೆ. ನನ್ನ ಕರ್ತವ್ಯ ಮಾಡುತ್ತೇನೆ. ಫಲಾಫಲ ಭಗವಂತನಿಗೆ ಬಿಟ್ಟದ್ದು ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷರು ಯಾವ ಸೂಚನೆ ನೀಡಿದರು ಎಂದು ಕೇಳಿದಾಗ, ಈ ಕಚೇರಿ ಕಟ್ಟಿದ್ದು ಅವರೇ. ಅವರು ಇಲ್ಲಿ 2 ನಿಮಿಷ ನೆಮ್ಮದಿಯಾಗಿ ಕಾಫಿಯನ್ನು ಕುಡಿಯಬಾರದೆ? ನೀವು ನಿಮ್ಮ ಮನೆಯವರು ಚರ್ಚೆ ಮಾಡಿದನ್ನು ಸಾರ್ವಜನಿಕವಾಗಿ ಮಾತನಾಡುತ್ತೀರಾ" ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕುಟುಂಬ ಬೇರೆ ರಾಜಕೀಯ ಬೇರೆ ಎಂದು ಕೇಳಿದಾಗ, "ಕಾಂಗ್ರೆಸ್ ಪಕ್ಷವೇ ಒಂದು ಕುಟುಂಬ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮುಖ್ಯಮಂತ್ರಿಗಳು ವಾಣಿ ವಿಲಾಸ ಸಾಗರ ಆಣೆಕಟ್ಟು ಬಾಗಿನ ಅರ್ಪಣೆ ಕಾರ್ಯಕ್ರಮದ ವೇಳೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications