ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ಜುಲೈ 08 : ಮಂಗಳೂರು ಐಜಿ ಕಚೇರಿಯ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ವಿರುದ್ಧ ಪ್ರತಿಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಜೊತೆ ಸಭೆ ನಡೆಸಿದದರು. ನಂತರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ ಎಂದು ಹೇಳಿದರು. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಎಂ.ಕೆ.ಗಣಪತಿ ಅವರು ಸುದ್ದಿ ವಾಹಿನಿಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. [ಎಂ.ಕೆ.ಗಣಪತಿ ಸಂಕ್ಷಿಪ್ತ ಪರಿಚಯ]

'ಎಂ.ಕೆ. ಗಣಪತಿ ಅವರಿಗೆ ಸರಿಯಾದ ಹುದ್ದೆ ನೀಡಿಲ್ಲ ಎಂಬ ಆರೋಪಗಳಲ್ಲಿ ಹುರುಳಿಲ್ಲ. ನಾನು ಗೃಹ ಸಚಿವನಾಗಿದ್ದಾಗ ಅವರು ಇನ್ಸ್‌ಪೆಕ್ಟರ್ ಆಗಿದ್ದರು. ಪ್ರತಿಪಕ್ಷಗಳು ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಅವರು ಹೇಳಿದ ತಕ್ಷಣ ರಾಜೀನಾಮೆ ಕೊಡಲು ಆಗುವುದಿಲ್ಲ' ಎಂದು ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾರು, ಏನು ಹೇಳಿದರು ನೋಡೋಣ ಬನ್ನಿ.......

'ಸಿಬಿಐ ತನಿಖೆ ಅಗತ್ಯವಿಲ್ಲ'

'ಸಿಬಿಐ ತನಿಖೆ ಅಗತ್ಯವಿಲ್ಲ'

'ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಆತ್ಮಹತ್ಯೆ ಮಾಡಿಕೊಂಡಿರುವುದು ದುರಾದೃಷ್ಟಕರ. ಕಾರಣ ಏನು? ಎಂಬುದನ್ನು ತಿಳಿಯಲು ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಸಿಬಿಐ ತನಿಖೆ ಅಗತ್ಯವಿಲ್ಲ. ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸಚಿವ ಜಾರ್ಜ್ ಅವರು ರಾಜೀನಾಮೆ ನೀಡುವ ಅಗತ್ಯವೂ ಇಲ್ಲ' ಎಂದು ಸ್ಪಷ್ಟಪಡಿಸಿದರು.

'ಆತ್ಮಹತ್ಯೆ ದಾರಿ ತುಳಿಯಬೇಡಿ'

'ಆತ್ಮಹತ್ಯೆ ದಾರಿ ತುಳಿಯಬೇಡಿ'

'ಇಲಾಖೆಯ ಅಧಿಕಾರಿಗಳು ಆತ್ಮಹತ್ಯೆ ದಾರಿ ತುಳಿಯಬಾರದು. ನಿಮ್ಮ ಜೊತೆ ನಾನಿದ್ದೇನೆ. ಏನೇ ಇದ್ದರೂ ನನಗೆ ತಿಳಿಸಿ, ಅದಕ್ಕೆ ಸ್ಪಂದಿಸುತ್ತೇನೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, 'ಗಣಪತಿ ಅವರು ಕೆಲವರ ಹೆಸರನ್ನು ಉಲ್ಲೇಖಿಸಿದ್ದು, ಈ ಬಗ್ಗೆ ತನಿಖೆ ಬಳಿಕ ಸತ್ಯಾಂಶ ತಿಳಿದುಬರಲಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ' ಎಂದು ಹೇಳಿದರು.

'ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವೆ'

'ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವೆ'

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ವಿದೇಶ ಪ್ರವಾಸ ಮುಗಿಸಿ ಶುಕ್ರವಾರ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.'ಈ ಹಿಂದೆ ಇಂತಹ ಕೆಟ್ಟ ಸರ್ಕಾರವನ್ನು ರಾಜ್ಯದ ಜನರು ನೋಡಿರಲಿಲ್ಲ. ಸಚಿವ ಕೆ.ಜೆ.ಜಾರ್ಜ್ ಅವರು ಹಿರಿಯ ಅಧಿಕಾರಿಗಳು ಗಣಪತಿ ಅವರಿಗೆ ಕಿರುಕುಳ ಕೊಟ್ಟಿದ್ದಾರೆ ಎಂಬುದು ಸತ್ಯವಾಗಿದ್ದರೆ ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು. ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದರು. 'ಈ ಪ್ರಕರಣದ ಬಗ್ಗೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತದೆ' ಎಂದು ಹೇಳಿದರು.

'ಮನಸ್ಥಿತಿ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ'

'ಮನಸ್ಥಿತಿ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ'

'ಗಣಪತಿ ಅವರ ಆತ್ಮಹತ್ಯೆಗೆ ಕಾರಣ ಏನೆಂದು? ತನಿಖೆ ಬಳಿಕ ತಿಳಿದುಬರದಲಿದೆ. ಅವರು ಕಳೆದ ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರಂತೆ ಅವರ ಮನಸ್ಥಿತಿ ಹೇಗಿತ್ತು? ಎಂದು ಈಗ ಚರ್ಚೆ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ತನಿಖೆ ಬಳಿಕ ಉತ್ತರ ಸಿಗಲಿದೆ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

'ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯ'

'ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯ'

'ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿಲ್ಲ. ಇದು ಗೃಹ ಖಾತೆ ಮತ್ತು ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯವನ್ನು ತೋರಿಸುತ್ತಿದೆ, ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಾರ್ಜ್ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

'ಆತ್ಮಹತ್ಯೆ ಪರಿಹಾರವಲ್ಲ'

'ಆತ್ಮಹತ್ಯೆ ಪರಿಹಾರವಲ್ಲ'

'ಸರ್ಕಾರದ ಅಥವ ಮೇಲಾಧಿಕಾರಿಗಳ ಒತ್ತಡಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಒತ್ತಡವಿದ್ದರೆ ರಾಜೀನಾಮೆ ನೀಡಬಹುದಿತ್ತು' ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು. 'ಒತ್ತಡಕ್ಕೆ ಆತ್ಮಹತ್ಯೆ ಪರಿಹಾರ ಅಲ್ಲ. ಅಷ್ಟು ಒತ್ತಡವಿದ್ದರೆ ರಾಜೀನಾಮೆ ಕೊಡಬಹುದಿತ್ತು. ದಯವಿಟ್ಟು ಯಾರು ಆತ್ಮಹತ್ಯೆಯ ಹಾದಿ ತುಳಿಯಬೇಡಿ' ಎಂದು ಸಚಿವರು ಮನವಿ ಮಾಡಿದರು.

'ಒಮ್ಮೆ ಮಾತ್ರ ಅವರು ನನ್ನನ್ನು ಭೇಟಿ ಮಾಡಿದ್ದರು'

'ಒಮ್ಮೆ ಮಾತ್ರ ಅವರು ನನ್ನನ್ನು ಭೇಟಿ ಮಾಡಿದ್ದರು'

'ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷಗಳು ನನ್ನನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿವೆ. ಅಧಿಕಾರಿಗೆ ಮಾನಸಿಕ ಕಿರುಕುಳ ನೀಡುವ ಪ್ರಶ್ನೆಯೇ ಇಲ್ಲ. ಒಮ್ಮೆ ಮಾತ್ರ ಗಣಪತಿ ಅವರು ನನ್ನನ್ನು ಭೇಟಿ ಮಾಡಿದ್ದರು. ಪ್ರತಿಪಕ್ಷಗಳು ಒತ್ತಾಯಿಸಿದ ತಕ್ಷಣ ರಾಜೀನಾಮೆ ಕೊಡಲು ಆಗುವುದಿಲ್ಲ. ಮಾಡಿರುವ ಆರೋಪಗಳಿಗೆ ಸರಿಯಾದ ದಾಖಲೆಗಳನ್ನು ಅವರು ಕೊಡಲಿ' ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಸಂಪುಟದಿಂದ ಜಾರ್ಜ್ ಅವರನ್ನು ಕೈ ಬಿಡಿ

ಸಂಪುಟದಿಂದ ಜಾರ್ಜ್ ಅವರನ್ನು ಕೈ ಬಿಡಿ

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದು, 'ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ. ಗಣಪತಿ ಅವರು ಆತ್ಮಹತ್ಯೆಗೆ ಮುನ್ನ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಆವರ ಹೆಸರು ಹೇಳಿದ್ದಾರೆ. ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರ್ಜ್‌ ಅವರನ್ನು ಸಂಪುಟದಿಂದ ಕೈಬಿಡಬೇಕು' ಎಂದು ಒತ್ತಾಯಿಸಿದ್ದಾರೆ.

'ಜಾರ್ಜ್‌ ಅವರನ್ನು ಬಂಧಿಸಬೇಕಿದೆ'

'ಜಾರ್ಜ್‌ ಅವರನ್ನು ಬಂಧಿಸಬೇಕಿದೆ'

ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, 'ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಕೊಲೆಗಡುಕ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕಾರಣವಾಗಿರುವ ಜಾರ್ಜ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಬೇಕಾಗಿದೆ' ಎಂದು ಹೇಳಿದ್ದಾರೆ.

'ಸಿಬಿಐ ತನಿಖೆಗೆ ಒಪ್ಪಿಸಿ'

'ಸಿಬಿಐ ತನಿಖೆಗೆ ಒಪ್ಪಿಸಿ'

'ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್, ಹಿರಿಯ ಅಧಿಕಾರಿಗಳ ಹೆಸರು ಕೇಳಿಬಂದಿದೆ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದರು. 'ಅಧಿಕಾರಿಗಳನ್ನು ಸರ್ಕಾರವೇ ಕೊಲೆ ಮಾಡುತ್ತಿದೆ. ಅಧಿಕಾರಿಗಳಿಗೆ ದಿನೇ-ದಿನೇ ಕಿರುಕುಳ ನೀಡಲಾಗುತ್ತಿದೆ. ಸಿಐಡಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಆದ್ದರಿಂದ ಸಿಬಿಐಗೆ ನೀಡಬೇಕು' ಎಂದು ಅವರು ಒತ್ತಾಯಿಸಿದರು.

English summary
Mangaluru Inspector General office (Western Range) DySP MK Ganapathi committed suicide On July 7, 2016. Who said, what about suicide case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X