ಅದೃಷ್ಟದ ಬೆನ್ನೇರಿದ ಡಿಕೆಶಿ, ಕೈ ಚಿಹ್ನೆಯ ಹಸ್ತದ ರೇಖೆ ಬದಲು: ಖುಲಾಯಿಸಲಿದೆಯೇ 'ಅಧ್ಯಕ್ಷರ' ನಸೀಬ್?
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗದೇ ಇರುವುದೂ ಕಾಂಗ್ರೆಸ್ಸಿಗೆ ಇರುವ ತಲೆನೋವು. ಹಾಗಾಗಿ, ಕೆಪಿಸಿಸಿ ಅಧ್ಯಕ್ಷರು ಅದೃಷ್ಟದ ಮೊರೆ ಹೋಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೆಪಿಸಿಸಿಯಿಂದ ಸ್ಪಷ್ಟನೆಯಿನ್ನೂ ಬರಬೇಕಿದೆ.
ಕಾಂಗ್ರೆಸ್ ಆಪ್ತಮೂಲದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಮೂರು ವಿವಿಧ ಖಾಸಗಿ ಸಂಸ್ಥೆಗಳಿಂದ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ದಡವನ್ನು ಸೇರಲಿದೆ. ಸಮೀಕ್ಷೆಯ ಫಲಿತಾಂಶದ ಪ್ರಕಾರ ಗೆಲ್ಲಬಹುದಾದ ಸೀಟಿನ ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಕಾಂಗ್ರೆಸ್ಸಿಗೆ ಗೆಲುವು ಖಚಿತ ಎನ್ನುವುದು.
ಆದರೂ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ಮತ್ತು ಚುನಾವಣೆ ಎದುರಿಸುವಲ್ಲಿ ನಿಸ್ಸೀಮರಾಗಿರುವ ಅಮಿತ್ ಶಾ ಅವರ ರಣತಂತ್ರದ ಬಗ್ಗೆ ಕಾಂಗ್ರೆಸ್ಸಿಗೆ ಅಳುಕು ಇದ್ದೇ ಇದೆ.
ಬಿಜೆಪಿ ತನ್ನ ಕರ್ನಾಟಕ ಚುನಾವಣಾ ಉಸ್ತುವಾರಿಯನ್ನು ಪ್ರಕಟಿಸಿದ ಎರಡು ದಿನಗಳಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯ ಹೆಸರನ್ನು ಘೋಷಿಸಿದೆ. ನಿರೀಕ್ಷೆಯಂತೆ ಅದರಲ್ಲಿ ಡಿಕೆಶಿ, ಸಿದ್ದರಾಮಯ್ಯ, ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಮುಂತಾದವರಿದ್ದಾರೆ.
ಸಮೀಕ್ಷೆಯ ಫಲಿತಾಂಶ ಏನೇ ಇರಬಹುದು, ಚುನಾವಣೆಗೆ ಇನ್ನೂ ಕೆಲವು ತಿಂಗಳುಗಳು ಇರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಬಯಸದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದೃಷ್ಟದ ಮೊರೆ ಹೋದರೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಇಲ್ಲದಿಲ್ಲ..

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗದೇ ಇರುವುದು
ಬಿಜೆಪಿ ವಿರುದ್ದ ಆಡಳಿತ ವಿರೋಧಿ ಅಲೆ ಇದೆ ಎನ್ನುವುದನ್ನೇ ಬಲವಾಗಿ ನಂಬಿಕೊಂಡಿರುವ ಕಾಂಗ್ರೆಸ್ಸಿಗೆ, ಮತದಾನಕ್ಕೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ವರಿಷ್ಠರ ಕಾರ್ಯತಂತ್ರ ಯಾವರೀತಿ ಇರಲಿದೆ ಎನ್ನುವ ಬಲವಾದ ಚಿಂತೆ ಕಾಡುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಗುಜರಾತ್ ನಲ್ಲಿ ನಡೆದ ವಿಧಾನಸಭಾ ಚುನಾವಣೆ. ಇಲ್ಲಿ ಬಿಜೆಪಿ ವರಿಷ್ಠರ ಅಗ್ರೆಸ್ಸೀವ್ ರಣತಂತ್ರ ವರ್ಕೌಟ್ ಆಗಿತ್ತು. ಇದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗದೇ ಇರುವುದೂ ಕಾಂಗ್ರೆಸ್ಸಿಗೆ ಇರುವ ಇನ್ನೊಂದು ತಲೆನೋವು. ಹಾಗಾಗಿ, ಕೆಪಿಸಿಸಿ ಅಧ್ಯಕ್ಷರು ಅದೃಷ್ಟದ ಮೊರೆ ಹೋಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹಸ್ತದ ಗುರುತು ಕಾಂಗ್ರೆಸ್ ಪಕ್ಷದ ಸದ್ಯದ ಚಿಹ್ನೆ
ಹಸ್ತದ ಗುರುತು ಕಾಂಗ್ರೆಸ್ ಪಕ್ಷದ ಸದ್ಯದ ಚಿಹ್ನೆ, ಅದರಲ್ಲಿ ಮೂರು ಗೆರೆಗಳಿವೆ. ಸಂಖ್ಯಾಶಾಸ್ತ್ರಜ್ಞರ ಸಲಹೆಯ ಮೇರೆಗೆ ಮೂರು ರೇಖೆಗೆ ಇನ್ನೊಂದು ರೇಖೆಯನ್ನು ಎಳೆದು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸದ್ಯ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ನಾಲ್ಕು ರೇಖೆಗಳ ಹಸ್ತದ ಗುರುತನ್ನೇ ಬಳಸಿಕೊಳ್ಳುತ್ತಿರುವುದು ಹರಿದಾಡುತ್ತಿರುವ ಸುದ್ದಿಗೆ ಪುಷ್ಠಿ ನೀಡುವಂತಿದೆ.

ಸ್ವಾತಂತ್ರ್ಯಾನಂತರ ಮೂರು ಬಾರಿ ಕಾಂಗ್ರೆಸ್ ತನ್ನ ಚಿಹ್ನೆಯನ್ನು ಬದಲಾಯಿಸಿಕೊಂಡಿದೆ
ಸ್ವಾತಂತ್ರ್ಯಾನಂತರ ಮೂರು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress) ತನ್ನ ಚಿಹ್ನೆಯನ್ನು ಬದಲಾಯಿಸಿಕೊಂಡಿದೆ. 1952-1969ರ ಅವಧಿಯಲ್ಲಿ ಜೋಡೆತ್ತು, ಇದಾದ ನಂತರ 1971-1977 ಹಸು, ಕರು ಹಾಲು ಕುಡಿಯುತ್ತಿರುವ ಚಿಹ್ನೆ ಮತ್ತು 1977ರಿಂದ ಹಸ್ತದ ಗುರುತನ್ನು ತನ್ನ ಅಧಿಕೃತ ಚಿಹ್ನೆಯಾಗಿ ಬಳಸಿಕೊಳ್ಳಲಾರಂಭಿಸಿತು. ಇದರಲ್ಲಿ ಮೂರು ಗೆರೆಗಳಿದ್ದವು, ಈಗ ಅದೃಷ್ಟದ ಬೆನ್ನೇರಿ ನಾಲ್ಕನೇ ಗೆರೆಯನ್ನು ಎಳೆದ ಚಿಹ್ನೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಜಾತಕ, ಜ್ಯೋತಿಷ್ಯ, ದೇವರು ದಿಂಡ್ರು ಎಂದು ಬಲವಾಗಿ ನಂಬಿಕೆ ಇಟ್ಟಿರುವ ಕೆಪಿಸಿಸಿ ಅಧ್ಯಕ್ಷರು
ಹಸ್ತದ ಗುರುತಿನಲ್ಲಿ ಮೂರು ಗೆರೆಗಳಿದ್ದಾವೆ, ಸಂಖ್ಯಾ ಶಾಸ್ತ್ರದ ಪ್ರಕಾರ ಮೂರು ಗೆರೆಗಳು ಸರಿಯಲ್ಲ, ಸಮಸಂಖ್ಯೆಯ ಗೆರೆಗಳನ್ನು ಬಳಕೆ ಮಾಡಿಕೊಳ್ಳಿ ಎನ್ನುವ ಸಲಹೆ ಶಾಸ್ತ್ರಜ್ಙರ ಸಲಹೆಯ ಮೇರೆಗೆ,
ಮೂರು ಗೆರೆಗಳ ಮಧ್ಯೆ ಅಡ್ಡ ಗೆರೆ ಎಳೆದ ಚಿಹ್ನೆಯನ್ನು ಪ್ರಜಾಧ್ವನಿ ಯಾತ್ರೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಸುದ್ದಿಯನ್ನು ಹಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಜಾತಕ, ಜ್ಯೋತಿಷ್ಯ, ದೇವರು ದಿಂಡ್ರು ಎಂದು ಬಲವಾಗಿ ನಂಬಿಕೆ ಇಟ್ಟಿರುವ ಕೆಪಿಸಿಸಿ ಅಧ್ಯಕ್ಷರ ನಡೆಯಲ್ಲಿ ಆಶ್ಚರ್ಯ ಪಡುವಂತದ್ದು ಇಲ್ಲ ಎನ್ನುವ ಸುದ್ದಿಗಳು ಚಾಲ್ತಿಯಲ್ಲಿವೆ.












Click it and Unblock the Notifications