ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ
ಬೆಂಗಳೂರು, ಮೇ 12 : ಭೀಕರ ಬರದ ಹಿನ್ನಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಲು ಕಾಲ್ ಸೆಂಟರ್ ಆರಂಭಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಲು ಕಾಲ್ ಸೆಂಟರ್ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಸಹಾಯವಾಣಿಗೆ ಬಂದ ಕರೆಗಳನ್ನು ಸ್ವೀಕರಿಸಿ, ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರು ಸಹಾಯವಾಣಿಗೆ ಕರೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಬಹುದು ಎಂದು ಸಚಿವರು ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲಾ ಜಿಲ್ಲೆಗಳ ಕಾಲ್ ಸೆಂಟರ್ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಕಾಲ್ ಸೆಂಟರ್‌ಗೆ ಬರುವ ಕರೆಯನ್ನು ಆದ್ಯತೆಯ ಮೇಲೆ ಸ್ವೀಕರಿಸಿ, ಸಮಸ್ಯೆ ಪರಿಸಹರಿಸಲು ಅಧಿಕಾರಿಗಳು ಸಿದ್ದವಾಗಿದ್ದಾರೆ.
ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರಾಜ್ಯದ 1,112 ಗ್ರಾಮಗಳಲ್ಲಿ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಈ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಟ್ಯಾಂಕರ್ ಆಧಾರವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಮಾತ್ರವಲ್ಲ, ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ.
ಜನರು ಅಂತರ್ಜಲದ ಮೇಲೆ ವಿಪರೀತ ಅಂದರೆ ಶೇ 86ರಷ್ಟು ಅವಲಂಬನೆಯಾಗಿದ್ದಾರೆ. ಆದರೆ, ಈಗ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಕೊರತೆ ಉಂಟಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ.











Click it and Unblock the Notifications