ಮೇಕೆದಾಟು, ಎತ್ತಿನಹೊಳೆ ಯೋಜನೆ ಬಗ್ಗೆ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಹಾಸನ, ಡಿಸೆಂಬರ್ 06: ಎತ್ತಿನಹೊಳೆ ನೀರನ್ನು ನಾವು ಆಚೆ ತಂದಿದ್ದೇವೆ. ಈ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಕೆಲವು ತೊಡಕು ಎದುರಾಗಿದೆ. ಈ ಅಡಚಣೆ ಬಗೆಹರಿದ ಮೂರ್ನಾಲ್ಕು ತಿಂಗಳಲ್ಲಿ ತುಮಕೂರಿನವರೆಗೂ ಈ ನೀರನ್ನು ಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಹಾಸನದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೇಮಾವತಿ ನೀರು ಕೂಡ ಇದೆ. ನಾವೆಲ್ಲರೂ ಸೇರಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಎಂದು ಹೆಜ್ಜೆ ಹಾಕಿದೆವು. ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಮಾರ್ಗದರ್ಶನ ಹಾಗೂ ದಿಟ್ಟ ನಿರ್ಧಾರದಿಂದ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಟ್ಟಿದೆ.

ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ತೀರ್ಮಾನವಾಗುವುದಿಲ್ಲ, ಇದರ ತಾಂತ್ರಿಕ ಅಂಶ ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ತೀರ್ಮಾನವಾಗಬೇಕು. ಹೀಗಾಗಿ ನ್ಯಾಯಾಲಯಕ್ಕೆ ಅಲೆಯಬೇಡಿ ಎಂದು ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ ಆದೇಶ ನೀಡಿದೆ. ನಿಮ್ಮೆಲ್ಲರ ಪರವಾಗಿ ನಾನು ಇಲ್ಲಿಂದಲೇ ಸುಪ್ರೀಂ ಕೋರ್ಟಿಗೆ ನಮಿಸುತ್ತೇನೆ. ಮೇಕೆದಾಟು ಯೋಜನೆ ಆದರೆ ಹಾಸನ, ಮಂಡ್ಯ, ಮೈಸೂರು ಚಾಮರಾಜನಗರ ಸೇರಿದಂತೆ ಈ ಜಲಾನಯನ ಪ್ರದೇಶಕ್ಕೆ ಕುಡಿಯಲು ನೀರು ಸಿಗುತ್ತದೆ. ಕಷ್ಟಕಾಲದಲ್ಲಿ 64 ಟಿಎಂಸಿ ನೀರನ್ನು ಮೇಕೆದಾಟಿನಲ್ಲಿ ಶೇಖರಿಸಿ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ಈ ವಿಚಾರವಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿದ್ದು, ಇದರ ಕಾರ್ಯರೂಪಕ್ಕೆ ಮುಂದಾಗಿದ್ದೇವೆ ಎಂದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾವು ನಂಬಿದ್ದೇವೆ. ಏನೇ ಸಮಸ್ಯೆ ಇದ್ದರೂ ಹಾಸನಕ್ಕೆ ಹೊಸ ರೂಪ ನೀಡಲು ನಾವು ಬದ್ಧವಾಗಿದ್ದೇವೆ. ಈ ಹಿಂದೆ ಇದ್ದ ಆಡಳಿತ ಮಾದರಿಗೆ ಕೊನೆ ಹಾಡಿದ್ದೇವೆ. ಇದು ನಿಮ್ಮ ಹಾಗೂ ಜನರ ಸರ್ಕಾರ. ಲೋಕಸಭೆ ಚುನಾವಣೆಯಲ್ಲಿ ನೀವು ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ ಶಕ್ತಿ ತುಂಬಿದ್ದೀರಿ, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸಂಸದ ನಿಮ್ಮ ಗೌರವಕ್ಕೆ ಎಂದೂ ಧಕ್ಕೆ ತರುವುದಿಲ್ಲ. ನಿಮ್ಮ ಸ್ವಾಭಿಮಾನದ ಬದುಕಿಗೆ ಶಕ್ತಿ ತುಂಬುವ ಕುಟುಂಬದವರಾಗಿದ್ದಾರೆ. ನೀರಾವರಿ ಇಲಾಖೆ ಮಾತ್ರವಲ್ಲ, ಎಲ್ಲಾ ಇಲಾಖೆಯ ಸಚಿವರು ಇಲ್ಲಿಗೆ ಬಂದಿರುವುದು ನಿಮ್ಮ ಕೈ ಬಲಪಡಿಸಲು. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ ವಿಶ್ವಾಸ ತುಂಬಿದರು.
ಇಂದು ನನ್ನ ಭೂಮಿ ಹೆಸರಿನಲ್ಲಿ ದರ್ಖಾಸ್ತು, ಪೋಡಿ ದಾಖಲೆ ನೀಡಲಾಗುತ್ತಿದೆ. ಇದು ಸಾಮಾನ್ಯವಾದ ಕೆಲಸವಲ್ಲ. ಈ ಹಿಂದೆ ಒಂದು ಪೋಡಿ ಮಾಡಿಸಲು ಎಷ್ಟು ಲಂಚ ಕೊಡಬೇಕಿತ್ತು ಎಂದು ರೈತರಿಗೆ ಮಾತ್ರ ಗೊತ್ತು. ಈ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿಕೊಂಡು ಬರುತ್ತಿದೆ. ನಿಮ್ಮ ವಿಶ್ವಾಸ ಸದಾ ನಮ್ಮ ಮೇಲಿರಲಿ ಎಂದು ತಿಳಿಸಿದರು.
ನಮ್ಮ ಸರ್ಕಾರ ಗ್ಯಾರಂಟಿ ರೂಪದಲ್ಲಿ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕಿದೆ. ರೈತರ ಪಂಪ್ ಸೆಟ್ ಗೆ ನೀಡಲಾಗುವ ಉಚಿತ ವಿದ್ಯುತ್ ಗೆ ಸರ್ಕಾರ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಿಂಚಣಿ ಯೋಜನೆ, ಉಳುವವನಿಗೆ ಭೂಮಿ, ಅರಣ್ಯ ಭೂಮಿ ಸಕ್ರಮ ಸೇರಿದಂತೆ ಅನೇಕ ಯೋಜನೆ ನೀಡಿದೆವು. ಸಿಎಂ ಹಾಗೂ ನನ್ನ ಪಕ್ಷ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಿದೆ. ಈ ಹಿಂದೆ ಹಾಸದ ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಈ ಇಬ್ಬರೂ ಹೆಣ್ಣುಮಕ್ಕಳಿಗೆ ನಾನು ಅಭಿನಂದನೆ ಸಲ್ಲಿಸಲೇ ಬೇಕು. ಇಂದು ಎತ್ತಿನಹೊಳೆ ನೀರು ಆಚೆ ಬರಲು ಈ ಇಬ್ಬರು ಅಧಿಕಾರಿಗಳು ಕೊಟ್ಟ ಸಹಕಾರ ಕಾರಣ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದರು.












Click it and Unblock the Notifications