ಕುಡಿಯುವ ನೀರಿನ ಸಮಸ್ಯೆ: ಜಿಲ್ಲಾಧಿಕಾರಿಗಳ ಜೊತೆ ಸಿದ್ದರಾಮಯ್ಯ ಸಭೆ
ಬೆಂಗಳೂರು, ಮೇ 06: ಬೇಸಿಗೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಯಿತು. "ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು" ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.
ಸಭೆಯಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಎಂ. ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ವಿವಿಧ ಅಧಿಕಾರುಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ, "ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ" ಎಂದು ಸಭೆಯಲ್ಲಿ ಹೇಳಿದರು.
ಡಿಸಿಗಳ ಜೊತೆ ಸಿಎಂ ಸಭೆ, ಸೂಚನೆಗಳು
* ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ.
* ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್ ಫೋರ್ಸ್‌ನಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು.
* ಪ್ರತಿ ವರ್ಷ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಯೋಜನೆ ರೂಪಿಸಬೇಕು.
* ಅಗತ್ಯಬಿದ್ದರೆ ಮಾತ್ರ ಬೋರ್‌ವೆಲ್‌ಗಳನ್ನು ಕೊರೆಯಬೇಕು. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಬೋರ್‌ವೆಲ್ ಕೊರೆದು ವೆಚ್ಚ ಮಾಡಬಾರದು.
* ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ವಾಡಿಕೆಗಿಂತ ಶೇಕಡಾ 55ರಷ್ಟು ಮುಂಗಾರು ಪೂರ್ವ ಮಳೆ ಹೆಚ್ಚಾಗಿದೆ. ವಾಡಿಕೆಗಿಂತ ಯಾವುದೇ ಜಿಲ್ಲೆಯಲ್ಲಿ ಕಡಿಮೆ ಮಳೆ ದಾಖಲಾಗಿಲ್ಲ.
* 27 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಎಲ್ಲಾ ಜಲಾಶಯಗಳಲ್ಲಿ ಶೇ.50ರಿಂದ ಶೇ.60 ರಷ್ಟು ಹೆಚ್ಚಿನ ನೀರಿನ ಸಂಗ್ರಹವಿದೆ.
* ಈ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ.
* ಪ್ರಸ್ತುತ 551 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 123 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ನೀರು ಪಡೆಯಲು ಈಗಾಗಲೇ 3ಸಾವಿರ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, 480 ಬೋರ್‌ವೆಲ್‌ಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ.
* ರಾಜ್ಯದ ಯಾವುದೇ ಒಂದು ಹಳ್ಳಿಯಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆಯನ್ನು ಈಗಲೇ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.
ಕರ್ನಾಟಕದಲ್ಲಿ 2024ರಲ್ಲಿ ಮುಂಗಾರು ಮಳೆ ಅಧಿಕವಾಗಿ ಸುರಿದ ಕಾರಣ ಎಲ್ಲಾ ಡ್ಯಾಂಗಳು ಭರ್ತಿಯಾಗಿವೆ. ಅಲ್ಲದೇ ಈ ವರ್ಷ ಪೂರ್ವ ಮುಂಗಾರು ಮಳೆ ಆಗಾಗ ವಿವಿಧ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದು, ಕುಡಿಯುವ ನೀರಿಗೆ ಅಷ್ಟು ಸಮಸ್ಯೆ ಉಂಟಾಗಿಲ್ಲ. ಆದರೆ ಕೆಲವು ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಮಾತ್ರ ಸಮಸ್ಯೆ ಕಾಣಿಸುತ್ತಿದೆ.












Click it and Unblock the Notifications