ಡಾ. ಮಂಜುನಾಥ್ ನಿವೃತ್ತಿ; ಜಯದೇವಕ್ಕೆ ಪ್ರಭಾರಿ ನಿರ್ದೇಶಕರ ನೇಮಕ
ಬೆಂಗಳೂರು, ಫೆಬ್ರವರಿ 01: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ನಿವೃತ್ತರಾದರು. ಕರ್ನಾಟಕ ಸರ್ಕಾರ ಹೊಸ ನಿರ್ದೇಶಕರನ್ನು ಇನ್ನೂ ನೇಮಕ ಮಾಡಿಲ್ಲ. ಆದರೆ ಪ್ರಭಾರಿ ನಿರ್ದೇಶಕರ ನೇಮಕ ಮಾಡಿ ಆದೇಶ ಹೊಡಿಸಿದ್ದಾರೆ.
ಜನವರಿ 31ರ ಬುಧವಾರ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗಳು ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಿದರು. ಸರ್ಕಾರ ಫೆಬ್ರವರಿ 2ನೇ ವಾರದಲ್ಲಿ ಸಭೆ ನಡೆಸಿ ಆಸ್ಪತ್ರೆಗೆ ಹೊಸ ನಿರ್ದೇಶಕರನ್ನು ನೇಮಕ ಮಾಡಲಿದೆ.

2007ರಿಂದ ಡಾ. ಸಿ. ಎನ್. ಮಂಜುನಾಥ್ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2023ರ ಜುಲೈನಲ್ಲಿಯೇ ಅವರ ಸೇವಾವಧಿ ಮುಕ್ತಾಯಗೊಂಡಿತ್ತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಲವಾರು ಗಣ್ಯರ ಒತ್ತಾಯದ ಹಿನ್ನಲೆಯಲ್ಲಿ ಸೇವೆಯನ್ನು ಜನವರಿ 31ರ ತನಕ ವಿಸ್ತರಣೆ ಮಾಡಲಾಗಿತ್ತು.
ಪ್ರಭಾರಿ ನಿರ್ದೇಶಕರ ನೇಮಕ; ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೊಸ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರ ಬುಧವಾರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಪ್ರಭಾರಿ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್. ಮಂಜುನಾಥ, ಸರ್ಕಾರದ ಅಧೀನ ಕಾರ್ಯದರ್ಶಿ-3, ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ, ಎಂಇಡಿ 296 ಎಂಎಸ್ಎಫ್ 2023 ದಿನಾಂಕ 27/7/2023ರಲ್ಲಿ ಡಾ. ಸಿ. ಎನ್. ಮಂಜುನಾಥ್ ಇವರನ್ನು ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಹುದ್ದೆಗೆ ದಿನಾಂಕ 20/07/2023ರಿಂದ 31/01/2024ರವರೆಗೆ ಮುಂದುವರೆಸಲಾದ ಅವಧಿಯು ಮುಕ್ತಾಯಗೊಳ್ಳಲಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಡಾ. ಕೆ. ಎಸ್. ರವೀಂದ್ರನಾಥ್ ನಿವೃತ್ತ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಪ್ರಾಧ್ಯಾಪಕರು, ಹೃದ್ರೋಗ ವಿಭಾಗ/ ಹಿರಿಯ ಸಮಾಲೋಚಕರು (ಗುತ್ತಿಗೆ), ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇಲ್ಲಿನ ಪ್ರಭಾರಿ ನಿರ್ದೇಶಕರಾಗಿ ನೇಮಿಸಿ ಆದೇಶಿಸಿದೆ ಎಂದು ತಿಳಿಸಿದೆ.
ಡಾ. ಸಿ. ಎನ್. ಮಂಜುನಾಥ್ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು 35 ವರ್ಷಗಳ ಕಾಲ ಸಲ್ಲಿಸಿದ್ದಾರೆ. ಇದರಲ್ಲಿ 16 ವರ್ಷ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮಾಹಿತಿಗಳ ಪ್ರಕಾರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಹುದ್ದೆಗೆ 15ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸರ್ಕಾರ ಯಾರನ್ನು ನಿರ್ದೇಶಕರಾಗಿ ನೇಮಕ ಮಾಡಬೇಕು ಎಂದು ತೀರ್ಮಾನವನ್ನು ಕೈಗೊಳ್ಳಲಿದೆ.












Click it and Unblock the Notifications