ಡಾ.ಕೆ.ಸುಧಾಕರ್ ಕಾಂಗ್ರೆಸ್ ಬಿಡುವುದಿಲ್ಲ : ಸಿದ್ದರಾಮಯ್ಯ
ಬೆಂಗಳೂರು, ಜುಲೈ 10 : 'ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್ ಪಕ್ಷದಲ್ಲಿಯೇ ಮುಂದುವರೆಯಲಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಸಂಜೆ ವಿಧಾನಸೌಧದಲ್ಲಿ ಡಾ.ಸುಧಾಕರ್ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, 'ಸುಧಾಕರ್ ಅವರನ್ನು ರಕ್ಷಣೆ ಮಾಡಲು ಬಿಜೆಪಿಯವರು ಯಾರು?, ಸುಧಾಕರ್‌ಗೂ ಬಿಜೆಪಿ ಅವರಿಗೂ ಏನು ಸಂಬಂಧ?' ಎಂದು ಪ್ರಶ್ನೆ ಮಾಡಿದರು.

'ಸುಧಾಕರ್ ಜೊತೆ ನಾನೇ ಮಾತನಾಡಿದ್ದೇನೆ. ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಆ ಮೇಲೆ ಬಂದು ನನ್ನ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ' ಎಂದು ಸಿದ್ದರಾಮಯ್ಯ ತಿಳಿಸಿದರು.
'ಬಿಜೆಪಿಯವರು ಲಜ್ಜೆಗೆಟ್ಟಿದ್ದಾರೆ, ನಾವು ರೌಡಿಸಂ ಮಾಡುತ್ತೇವೆ ಎಂದು ಅವರು ಹೇಳುವುದಾದರೆ ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಮಾಡಿದ್ದೇನು?. ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅವರಿಗೆ ಗೌರವವಿಲ್ಲ' ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೆ.ಜೆ.ಜಾರ್ಜ್ ಕೊಠಡಿಯಲ್ಲಿದ್ದ ಡಾ.ಕೆ.ಸುಧಾಕರ್ ಅವರು ಪೊಲೀಸ್ ಭದ್ರತೆಯಲ್ಲಿ ವಿಧಾನಸೌಧದಿಂದ ಹೊರಬಂದರು. ನಂತರ ಅವರು ರಾಜ್ಯಪಾಲರನ್ನು ಭೇಟಿ ಮಾಡಲು ತೆರಳಿದರು.
ಬುಧವಾರ ಸಂಜೆ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಸುಧಾಕರ್ ಅವರನ್ನು ಕೆ.ಜೆ.ಜಾರ್ಜ್ ಕೊಠಡಿಯಲ್ಲಿ ಕೂಡಿಹಾಕಿದ್ದರು.












Click it and Unblock the Notifications