ದೇಶಕ್ಕೆ ತಾತ್ಕಾಲಿಕವಲ್ಲ, ಶಾಶ್ವತ ಗ್ಯಾರಂಟಿ ಬೇಕು: ಡಾ. ಕೆ. ಸುಧಾಕರ್
ಯಲಹಂಕ: ಡಾ. ಕೆ. ಸುಧಾಕರ್ ಅವರು ತಮ್ಮ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರ ಎದುರು ಪ್ರಸ್ತಾಪ ಕೂಡ ಮಾಡಿದ್ದಾರೆ.
ದೇಶಕ್ಕೆ ತಾತ್ಕಾಲಿಕ ಗ್ಯಾರಂಟಿಗಳು ಬೇಕಾಗಿಲ್ಲ, ಶಾಶ್ವತವಾದ ಹಾಗೂ ಬದುಕು ಕಟ್ಟಿ ಕೊಡುವ ಗ್ಯಾರಂಟಿಗಳು ಬೇಕಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಪ್ರತಿಪಾದನೆ ಮಾಡಿದರು. ಯಲಹಂಕದಲ್ಲಿ ನಡೆದ, ಬಿಜೆಪಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಜೊತೆ ಪಾಲ್ಗೊಂಡು ಅವರು ಮಾತನಾಡಿದರು. ಹಾಗೇ ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೂಡ, ತೀವ್ರ ವಾಗ್ದಾಳಿ ನಡೆಸಿದರಲ್ಲದೆ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ ಎಂದರು.

ರಾಜ್ಯ ಕಾಂಗ್ರೆಸ್ ವಿರುದ್ಧ ಆರೋಪ
ಕಾಂಗ್ರೆಸ್ ಸರ್ಕಾರದಲ್ಲೇ ಈಗ 40% ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಜನರಿಗೂ ಮನವರಿಕೆ ಮಾಡಬೇಕಿದೆ. ಮೋದಿ ಸರ್ಕಾರ ಯೋಜನೆ ನೀಡುತ್ತಿದ್ದರೆ ಕಾಂಗ್ರೆಸ್ ಅದನ್ನ ಕಿತ್ತುಕೊಳ್ಳುತ್ತಿದೆ. ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಹಾಲು ಪ್ರೋತ್ಸಾಹ ಧನ ಎಲ್ಲವನ್ನು ಕಿತ್ತುಕೊಳ್ಳಲಾಗಿದೆ. ಆಯುಷ್ಮಾನ್ ಭಾರತ್, ಆವಾಸ್ ಮೊದಲಾದ ಗ್ಯಾರಂಟಿಗಳ ಮೋದಿ ನೀಡಿದ್ದಾರೆ. ಈ ದೇಶದ ಜನಕ್ಕೆ ಬೇಕಿರುವುದು ಬದುಕು ಕಟ್ಟಿಕೊಡುವ ಗ್ಯಾರಂಟಿ ಆಗಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿದ್ದಾರೆ ಎಂದು ಡಾ. ಕೆ. ಸುಧಾಕರ್ ಹೇಳಿದರು.
'ಯಲಹಂಕಗೂ ನನಗೂ ಆತ್ಮೀಯ ನಂಟು'
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪೈಕಿ ಯಲಹಂಕ ವಿಧಾನಸಭೆ ಕ್ಷೇತ್ರದಲ್ಲಿಯೆ ಮತದಾರರ ಸಂಖ್ಯೆ ದೊಡ್ಡದಾಗಿದೆ. ಯಲಹಂಕ ನನ್ನ ತಾಯಿಯ ಜನ್ಮಸ್ಥಳವಾಗಿದ್ದು ಯಲಹಂಕದ ಜೊತೆ ನನಗೆ ಭಾವನಾತ್ಮಕ ಸಂಬಂಧ ಇದೆ ಎಂದು ಡಾ. ಸುಧಾಕರ್ ತಿಳಿಸಿದರು. ಹಾಗೆ ಈ ಚುನಾವಣೆ 140 ಕೋಟಿ ಭಾರತೀಯರನ್ನು ರಕ್ಷಣೆ ಮಾಡುವ ಚುನಾವಣೆ. ಬೆಂಗಳೂರಲ್ಲಿ ಸ್ಫೋಟವಾಗಿದೆ, ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೇಳಿ ಬಂದಿದೆ. ಇವರ ಕುರಿತಾಗಿ, ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ತಾಳಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬೇಕಿದೆ ಎಂದರು.

400ರ ಗುರಿಯನ್ನು ಮುಟ್ಟಲು..
ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಸೇನಾಧಿಪತಿಗಳಾಗಿದ್ದಾರೆ. 400 ರ ಗುರಿಯನ್ನು ಮುಟ್ಟಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಆ 400 ರಲ್ಲಿ ನಾನೂ ಒಬ್ಬನಾಗಿದ್ದೇನೆ. ಈ 400 ರಲ್ಲಿ, ನಮ್ಮ ರಾಜ್ಯದ ಸಂಸದರು ಇರಬೇಕು ಎಂಬುದನ್ನು ಜನರಿಗೆ ತಿಳಿಸಬೇಕು ಎಂದರು. ಬೆಂಗಳೂರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕುಡಿಯುವ ನೀರನ್ನು ಅವರ ಇಂಡಿ ಕೂಟದ ಪಾಲುದಾರ ತಮಿಳುನಾಡು ಸರ್ಕಾರಕ್ಕೆ ಬಿಟ್ಟಿದ್ದಾರೆ. ಇನ್ನು ಕೋವಿಡ್ ಸಮಯದಲ್ಲಿ ಮೇಕೆದಾಟು ಪಾದಯಾತ್ರೆ ಮಾಡಿ ಈಗ ಆ ಯೋಜನೆ ಕುರಿತಾಗಿ ಮಾತಾಡುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಡಾ. ಕೆ. ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications