ಆ ಮೆಂಟಲ್ ಕೇಸ್ ಬಗ್ಗೆ ನನ್ನನ್ನು ಕೇಳಬೇಡಿ ಎಂದ ಡಿ.ಕೆ ಶಿವಕುಮಾರ್! ಡಿಕೆಶಿ ಹೇಳಿದ್ದು ಯಾರಿಗೆ?
ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಜಟಾಪಟಿ ಏರ್ಪಟ್ಟಿದೆ.
ಬೆಳಗಾವಿ,ಮಾರ್ಚ್ 6: ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ಹಿಂದೆ ಸಿಡಿ ವಿಚಾರವಾಗಿ ಈ ಇಬ್ಬರು ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಏರ್ಪಟ್ಟಿದ್ದು, ಇದೀಗ ಮತ್ತೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದ ವಿಚಾರಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದರು. ಈ ಬಗ್ಗೆ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಆ ಮೆಂಟಲ್ ಕೇಸ್ ಬಗ್ಗೆ ನನ್ನ ಕೇಳಬೇಡಿ ಎಂದು ಟಾಂಗ್ ನೀಡಿದ್ದಾರೆ.

ಭ್ರಷ್ಟ ಬಿಜೆಪಿ ಸರಕಾರದ ಧೋರಣೆಯನ್ನು ಜನರ ಮುಂದೆ ಇಡುವ ಉದ್ದೇಶದಿಂದ ಮಾರ್ಚ್ 9 ರಂದು ರಾಜ್ಯಾದ್ಯಂತ ಎರಡೂ ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ ಜನ ನಮಗೆ ನೆಮ್ಮದಿ ಸಿಗಬೇಕೆಂದು ಕಾಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ, ಲೋಕೋಪಯೋಗಿ ಮಧ್ಯಂತರ ಟೆಂಡರ್ ಕೊಡುತ್ತಿದ್ದಾರೆ. ಅಷ್ಟೆ ಅಲ್ಲ ಕೆಲಸದ ಸೂಚನೆಯನ್ನು ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಮಾಡಲು ಇದೊಂದು ತಂತ್ರ. ಮೊದಲೇ ಕಾಮಗಾರಿಯ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ನಾವು ಪ್ರತಿಯೊಂದ ಇಲಾಖೆಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದರು.
ಇಂಧನ ಇಲಾಖೆಯಲ್ಲಿ ಟೆಂಡರ್ ಕರೆಯದೆ ಕೆಲಸ ಕೊಡುತ್ತಿದ್ದಾರೆ. ಬಿಜೆಪಿ ಅವರಿಗೆ ಇನ್ನೊಂದು ಇಪ್ಪತ್ತು ದಿನದಲ್ಲಿ ನೀತಿ ಸಂಹಿತೆ ಬಂದು ಮೇಲೆ ಹಣ ಮಾಡಲು ಆಗುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರದ ಸಚಿವರ ಬಳಿ ಹಣ ಇಲ್ಲ. ಅಧಿಕಾರಿಗಳ ಬಳಿ ಸಾಕಷ್ಟು ಹಣ ಇಟ್ಟಿದ್ದಾರೆ. ಅದು ನಮ್ಮ ಬಳಿ ಮಾಹಿತಿ ಇದೆ. ಆದರೆ, ಕಳಂಕಿತ ಸರಕಾರವನ್ನು ಜನರೇ ಕಿತ್ತು ಹಾಕಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರ ಬದುಕು ಬದಲಾವಣೆಯಾಗಬೇಕು. ಪ್ರತಿಯೊಂದು ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಉದಾರಣೆ ಬೆಳಗಾವಿಯಲ್ಲಿ ನೀರಾವರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಹಣ ಕೊಡಲು ಯೋಜನೆ ರೂಪಿಸುತ್ತಿದ್ದಾರೆ. ಅದನ್ನೆ ಕಾಯುತ್ತಿದ್ದೇವೆ ಕೊಡಲಿ ನೋಡೋಣ ಎಂದರು.

ನಾನು ಕೇವಲ ಬೆಳಗಾವಿಗಷ್ಟೆ ಅಲ್ಲ ಇಡೀ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಇಡೀ ರಾಜ್ಯದಲ್ಲಿ ನಾವು ಪರಿಶುದ್ಧವಾದ ರಾಜಕಾರಣ ಮಾಡಬೇಕು. ಯಾವುದೇ ಮೆಂಟಲ್ ಕೇಸ್ ಗಳಿಗೆ ಉತ್ತರ ಕೊಡಲು ಆಗಲ್ಲ. ಹತಾಶೇಯಿಂದ ಇರುವವರಿಗೆ ನಾನು ಉತ್ತರ ಕೊಡಲು ಆಗಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಕಿಡಿಕಾರಿದರು.












Click it and Unblock the Notifications