ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ದುಗುಡ-ದುಮ್ಮಾನ ತೆರೆದಿಡುವ ಪೇದೆಯ ಪತ್ರ

|
Google Oneindia Kannada News

ದೊಡ್ಡಬಳ್ಳಾಪುರ ಪಿಎಸ್ ಐ ಜಗದೀಶ್ ಹತ್ಯೆಯ ನಂತರ ಪೊಲೀಸ್ ಇಲಾಖೆಯ ಒಳಗಿನ ಅನೇಕ ಸಮಸ್ಯೆಗಳು ಒಂದೊಂದಾಗಿ ತೆರೆದುಕೊಳ್ಳಲು ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ. ವಾಟ್ಸಪ್ ನಲ್ಲಿ ಬಂದ ಒಂದು ಪತ್ರ ಎಲ್ಲ ಕತೆಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತದೆ. ಕರ್ತವ್ಯದಲ್ಲಿರುವ ಪೊಲೀಸ್ ಗೆಳೆಯನ ಮನದೊಳಗಿನ ಅಳಲನ್ನು ತಥಾವತ್ತಾಗಿ ಇಲ್ಲಿ ನೀಡಿದ್ದೇವೆ....

ಪೊಲೀಸರ ಬದುಕು ಹಸನಾಗಲಿ ಕಾನೂನು ಸವಾಲುಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ಪೊಲೀಸ್ ಕಾಯ್ದೆಯನ್ನು ತಿದ್ದಿ ಪರಿಷ್ಕರಿಸುವ ಅಗತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರವೇ ಸರಿ. ಇಡೀ ಪೊಲೀಸ್ ವ್ಯವಸ್ಥೆಯಲ್ಲೇ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ. ಪೊಲೀಸರೊಳಗೆ ನೈತಿಕ ಶಕ್ತಿಯನ್ನು ತುಂಬುವ ಕೆಲಸ ನಡೆಯಬೇಕಾಗಿದೆ.[ದೊಡ್ಡಬಳ್ಳಾಪುರ ಎಸ್ ಐ ಜಗದೀಶ್ ಹತ್ಯೆಯಾಗಿದ್ದು ಹೇಗೆ?]

police

ಸಮಾಜ ಮತ್ತು ಪೊಲೀಸರು ಜೊತೆ ಜೊತೆಯಾಗಿ ಕೆಲಸ ಮಾಡುವ, ಪೊಲೀಸರು ಸ್ವಸ್ಥ ಸಮಾಜ ನಿರ್ಮಾಣದ ಒಂದು ಭಾಗ ಎನ್ನುವುದನ್ನು ನಾಗರಿಕರು ಒಪ್ಪುವಂತಹ ಸನ್ನಿವೇಶ ಸೃಷ್ಟಿಯಾಗುವುದು ಸದ್ಯ ಅತ್ಯಗತ್ಯ.

ಇದಕ್ಕಾಗಿ ಮೊದಲು ಇಲಾಖೆಯೊಳಗಿನ ವ್ಯವಸ್ಥೆಯನ್ನು ಮೊದಲು ಸರಿಪಡಿಸಬೇಕಾಗಿದೆ .ಹೊರಗಡೆಯಿಂದ ನಾವು ಏನನ್ನು ನೋಡುತ್ತೇವೆಯೋ ಅದು ಪೊಲೀಸ್ ಇಲಾಖೆ ಅಲ್ಲ. ಪೊಲೀಸ್ ಇಲಾಖೆಯೊಳಗೆ ಮನುಷ್ಯರಿದ್ದಾರೆ ಎಂದು ನಾವು ನಂಬಿದುದು ಬಹಳ ಕಡಿಮೆ. ಇದಕ್ಕೆ ಪೊಲೀಸ್ ಇಲಾಖೆ ಎಷ್ಟು ಕಾರಣವೋ, ನಮ್ಮ ಸರ್ಕಾರವೂ ಅಷ್ಟೇ ಕಾರಣ.

ಅದರೊಳಗಿರುವವರು ನಮ್ಮಂತೆಯೇ ಸಾಮಾನ್ಯ ಮನುಷ್ಯರು. ಅವರಿಗೆ ಮನೆ, ಕುಟುಂಬ,ಮಕ್ಕಳು, ಜವಾಬ್ದಾರಿ, ಮದುವೆ, ಸಂಬಂಧ ಇತ್ಯಾದಿಗಳೆಲ್ಲ ಇವೆ ಎನ್ನುವುದನ್ನು ಮರೆತು ನಾವು ಇಡೀ ವ್ಯವಸ್ಥೆಯನ್ನು ಒಂದು ಯಂತ್ರದಂತೆ ನೋಡುತ್ತಾ ಬಂದಿದ್ದೇವೆ.ಅಲ್ಲಿರುವ ಸಾಮಾನ್ಯ ಪೊಲೀಸರಿಗೂ ಭಾವನೆಗಳಿವೆ, ಸುಖ, ದುಃಖಗಳಿವೆ ಎಂಬುದನ್ನು ಸಮಾಜ ಮರೆತಿದೆ. ಆದುದರಿಂದಲೇ ಪೊಲೀಸರು ಯಾವುದೇ ವ್ಯವಸ್ಥೆಗಿಂತ ಹೆಚ್ಚು ತೀಕ್ಷ್ಣ ಟೀಕೆಗೆ ಗುರಿಯಾಗುತ್ತಾರೆ. [ಕಳ್ಳರಿಂದ ಹತ್ಯೆಯಾದ ಎಸ್ ಐ ಜಗದೀಶ್ ಪರಿಚಯ]

ಪೊಲೀಸ್ ವ್ಯವಸ್ಥೆಯಲ್ಲೂ ವರ್ಣಾಶ್ರಮ, ವರ್ಗಾಶ್ರಮಗಳಿವೆ. ಇಲ್ಲಿರುವ ಉನ್ನತ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು, ಪೊಲೀಸ್ ವ್ಯವಸ್ಥೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಂಡಿರುವ ತಳಮಟ್ಟದ ಕಾನ್ಸ್ಟೇಬಲ್ ಗಳು, ಪೇದೆಗಳ ಕುರಿತಂತೆ ನಾವು ಒಂದು ಕ್ಷಣ ಯೋಚಿಸೋಣ.

ಇಂದು ಈ ದೇಶದಲ್ಲಿ ಪೊಲೀಸ್ ವ್ಯವಸ್ಥೆ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದ್ದರೆ, ಕಾನೂನು ವ್ಯವಸ್ಥೆ ಒಂದಿಷ್ಟಾದರೂ ಸುಗಮವಾಗಿ ನಡೆಯುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಈ ಪೊಲೀಸ್ ಪೇದೆಗಳ ಅವಿರತ ದುಡಿಮೆ. ಹಗಲು ರಾತ್ರಿ ತಮ್ಮ ಪ್ರಾಯವನ್ನು, ಆರೋಗ್ಯವನ್ನು ಸವೆಸುತ್ತಾ ಈ ಕಾನೂನು ವ್ಯವಸ್ಥೆಯನ್ನು ಕಾಪಾಡುತ್ತಿದ್ದಾರೆ.

ಇವರ ಶ್ರಮದ ಫಲದ ಅಧಿಕೃತ ವಾರಸುದಾರರು ಮಾತ್ರ ಇಲ್ಲಿನ ಉನ್ನತ ಅಧಿಕಾರಿಗಳು. ಒಂದು ರೀತಿಯಲ್ಲಿ, ಪೊಲೀಸ್ ಕಾನ್ಸ್ಟೇಬಲ್ಗಳು, ತಳಮಟ್ಟದ ಅಧಿಕಾರಿಗಳು ಇಲ್ಲಿ ಜೀತದಂತೆಯೇ ದುಡಿಯುತ್ತಾರೆ. ಕೊನೆಗೆ ಈ ದುಡಿಮೆಯಲ್ಲೇ ಮುಗಿದು ಹೋಗುತ್ತಾರೆ. ಆದರೆ ಇವರ ಕುರಿತಂತೆ ಸರಕಾರವಾಗಲಿ, ವ್ಯವಸ್ಥೆಯಾಗಲಿ ಅನುಕಂಪ ಸೂಚಿಸಿದುದು, ಕಾಳಜಿ ವ್ಯಕ್ತಪಡಿಸಿದುದು ತೀರಾ ಕಡಿಮೆ. ಇಡೀ ವರ್ಷದ ಪ್ರಾಮಾಣಿಕ ದುಡಿಮೆ, ಒಂದೇ ಒಂದು ತಪ್ಪಿನಿಂದ ನೀರ ಮೇಲಿನ ಹೋಮವಾಗಬಹುದು. ಸಣ್ಣ ತಪ್ಪು ಮಾಡಿದಾಕ್ಷಣ ಅಮಾನತು ಆದೇಶ ಅವರ ಮುಂದಿರುತ್ತದೆ. ಆದರೆ, ಅವರ ಸಾಧನೆಗಳಿಗೆ ಮಾನ್ಯತೆ ಸಿಗುವುದು ಅಷ್ಟು ಸುಲಭವಲ್ಲ.

ಇತ್ತೀಚೆಗೆ ಅಲ್ಲಲ್ಲಿ ಪೊಲೀಸ್ ಪೇದೆಗಳು ಮತ್ತು ಅಧಿಕಾರಿಗಳ ನಡುವೆ ತಿಕ್ಕಾಟ ನಡೆಯುವುದನ್ನು ನಾವು ವರದಿಯಲ್ಲಿ ಓದುತ್ತೇವೆ. ರಜಾ ನೀಡಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ, ಗುಂಡು ಹಾರಿಸಿದ ಪ್ರಕರಣಗಳನ್ನೂ ಕಾಣುತ್ತಿದ್ದೇವೆ. ಈ ಎಲ್ಲ ಪ್ರಕರಣಗಳ ಹಿಂದೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಹೃದಯವಿದ್ರಾವಕ ಕತೆಯಿದೆ. ಪೊಲೀಸ್ ಪೇದೆಗಳ ಈ ಕತೆಯನ್ನು ಆಲಿಸುವ, ನೋಡುವ ಜನರು ಮಾತ್ರ ಇಲ್ಲವಾಗಿದ್ದಾರೆ.

ಸಾಧಾರಣವಾಗಿ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಇಂತಿಷ್ಟು ಅವಧಿ ಕೆಲಸವೆಂಬ ನಿಯಮವಿರುತ್ತದೆ. ಆದರೆ, ಪೊಲೀಸ್ ಸಿಬ್ಬಂದಿಗೆ ಆ ನಿಯಮ ಅನ್ವಯವಾಗುವುದು ತೀರಾ ಕಡಿಮೆ. ಬಹುತೇಕ ಕಡೆ ಪೊಲೀಸರು 12ರಿಂದ 14ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಾರೆ. ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಪೊಲೀಸರಿಗೆ ಉತ್ತಮ ವೇತನ ಸೌಕರ್ಯ ದೊರೆಯುತ್ತಿದ್ದು, ಅಲ್ಲಿನ ಪೊಲೀಸರ ವೇತನಕ್ಕೂ ಕರ್ನಾಟಕ ಪೊಲೀಸರ ವೇತನಕ್ಕೂ ಬಹಳ ವ್ಯತ್ಯಾಸವಿದೆ. ಪಕ್ಕದ ರಾಜ್ಯಗಳಲ್ಲಿ ಒಬ್ಬ ಡಿ ಗ್ರೋಪ್‌ ನೌಕರ ಪಡೆಯುವ ವೇತನಕ್ಕೂ ನಮ್ಮ ಪೊಲೀಸರ ವೇತನ ಸಮವಾಗುವುದಿಲ್ಲ.

ಪೊಲೀಸ್ ಪೇದೆಗಳ ಕೆಲಸವಂತೂ ಸಣ್ಣದಲ್ಲ. ಇದೊಂದು ರೀತಿಯಲ್ಲಿ ಹೆಣ ಕಾಯುವ ಕೆಲಸ. ಕೆಲವೆಡೆ ಹೆಣಗಳನ್ನೂ ಕಾಯುತ್ತಿರಬೇಕು. ರಾತ್ರಿ ಸುರಿಯುವ ಮಳೆಯಲ್ಲಿ, ಚಳಿಯಲ್ಲಿ ಕೈಯಲ್ಲಿ ಬರಿದೇ ಲಾಠಿಯನ್ನು ಹಿಡಿದುಕೊಂಡು, ವಾಹನಗಳ ತಪಾಸಣೆ ಮಾಡಬೇಕು. ಎದೆಯೊಳಗೆ ಭಯವಿದ್ದರೂ ಅದನ್ನು ತೋರಿಸದೆ, ಮಹಾ ಧೈರ್ಯವಂತರಂತೆ ನಟಿಸಿ, ಅಪರಿಚಿತರ ಕಾರುಗಳನ್ನು ತಪಾಸಣೆ ಮಾಡುವುದು ಸಣ್ಣ ವಿಷಯವೇನೂ ಅಲ್ಲ. ಬಿಸಿಲಲ್ಲಿ ಉರಿಯುತ್ತಾ, ಚಳಿಯಲ್ಲಿ ನಡುಗುತ್ತಾ, ಹಗಲು ರಾತ್ರಿ ಕಳ್ಳಕಾಕರ ಜೊತೆಗೆ ಬದುಕು ಸವೆಸುವ ಪೊಲೀಸರು ನಿವೃತ್ತರಾದಾಗ ಸಂಪೂರ್ಣ ಹಣ್ಣಾಗಿ ಬಿಟ್ಟಿರುತ್ತಾರೆ.[ದೊಡ್ಡಬಳ್ಳಾಪುರ ಠಾಣೆ ಜಗದೀಶ್ ಹತ್ಯೆ]

ಒಂದು ಸಮೀಕ್ಷೆಯ ಪ್ರಕಾರ ನಿವೃತ್ತರಾದ ಪೊಲೀಸರು 5 ವರ್ಷಕ್ಕಿಂತ ಹೆಚ್ಚು ಬದುಕುವುದೇ ವಿಶೇಷವಂತೆ. ಯಾಕೆಂದರೆ ನಿವೃತ್ತಿಯ ಹೊತ್ತಿನಲ್ಲಿ ಹೆಚ್ಚಿನ ಪೊಲೀಸ್ ಪೇದೆಗಳು ವಿವಿಧ ಕಾಯಿಲೆಗಳಿಗೆ ಈಡಾಗಿರುತ್ತಾರೆ. ಮಾನಸಿಕ ವಾಗಿ ಸಂಪೂರ್ಣ ಜರ್ಝರಿತರಾಗಿರುತ್ತಾರೆ. ಸಮಾಜವೂ ಅವರನ್ನು ನೋಡುವ ದೃಷ್ಟಿ ಬೇರೆ ಯಾಗಿರುತ್ತದೆ.

ಸರಿ. ಇವರ ಉಳಿತಾಯ ನೋಡಿದರೆ ಅದರಲ್ಲೂ ಶೂನ್ಯ. ಹೆಚ್ಚಿನ ಪೊಲೀಸರು ತಮ್ಮ ನಿವೃತ್ತಿಯ ಕಾಲದಲ್ಲಿ ಸಾಲಗಾರರಾಗಿರುತ್ತಾರೆ. ತಮ್ಮ ಮಕ್ಕಳ ಶಿಕ್ಷಣದ ಖರ್ಚು, ಕುಟುಂಬ ವೆಚ್ಚ, ಅನಾರೋಗ್ಯ, ಹೆಣ್ಣು ಮಕ್ಕಳ ಮದುವೆ ಇತ್ಯಾದಿ ಇತ್ಯಾದಿಗಳನ್ನು ಅವರ ಸಂಬಳದಿಂದ ನಿಭಾಯಿಸುವುದು ತೀರಾ ಕಷ್ಟ ಸಾಧ್ಯ. ಸಾಲಗಾರರಾಗಿ ಯಾರ್ಯಾರದೋ ಋಣದಲ್ಲಿ ತಮ್ಮ ನಿವೃತ್ತ ಬದುಕನ್ನು ಸವೆಸುವ ಸನ್ನಿವೇಶ ಅವರನ್ನು ಒತ್ತಡಕ್ಕೆ ಸಿಲುಕಿಸುತ್ತದೆ.

ಹೆಚ್ಚಿನ ಪೊಲೀಸರು ಅಸ್ತಮಾ, ಟಿಬಿ ಮೊದಲಾದ ಕಾಯಿಲೆಗಳಿಗೆ ಈಡಾಗಿ ಬದುಕನ್ನೇ ಕಳೆದುಕೊಂಡಿರುತ್ತಾರೆ. ಉದ್ಯೋಗದಲ್ಲಿ ಇರುವಷ್ಟು ಸಮಯ ಒಂದು ರಜೆಗಾಗಿ ಮೇಲಧಿಕಾರಿಗಳ ಚೇಲಾಗಿರಿ ಮಾಡುತ್ತಲೇ ಇರಬೇಕಾಗುತ್ತದೆ. ಅವರ ಗುಲಾಮತನ ಮಾಡದೆ ಇದ್ದರೆ, ಸಿಗಬೇಕಾದ ರಜೆ ಸರಿಯಾದ ಸಂದರ್ಭದಲ್ಲಿ ಸಿಗುವುದಿಲ್ಲ. ಮೇಲಧಿಕಾರಿಗಳ ಕೃಪೆಗೆ ಪಾತ್ರರಾಗದೆ ಇದ್ದರೆ ಮಳೆ,ಚಳಿ, ಬಿಸಿಲಲ್ಲಿ ನರಳುವ ಕೆಲಸವನ್ನು ಶಿಕ್ಷೆಯಂತೆ ಸ್ವೀಕರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೇದೆ ಸಹನೆ ಕಳೆದು ಕೊಂಡರೆ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ ಅಥವಾ ಸಂಘರ್ಷದಲ್ಲಿ ಒಮ್ಮೊಮ್ಮೆ ನಡೆಯಬಾರದ ದುರಂತ ಘಟನೆಗಳು ನಡೆದುಬಿಡುತ್ತವೆ.

ಇಂತಹ ಒಂದು ವ್ಯವಸ್ಥಯಿಂದ ರೈತರ ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯಲ್ಲಿ ಪೊಲೀಸರು ಭವಿಷ್ಯದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಮೇಲಧಿಕಾರಿಯ ಮೇಲೆ ಗುಂಡು ಹಾರಿಸುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದೆಲ್ಲ ಇಂತಹ ಸಂದರ್ಭದಲ್ಲೇ. ಈ ಎಲ್ಲ ಕಾರಣದಿಂದ, ಕಾನೂನು ವ್ಯವಸ್ಥೆಯನ್ನು ಪುನರ್ನಕರಿಸುವ ಮೊದಲು ತಳಮಟ್ಟದ ಪೊಲೀಸ್ ಸಿಬ್ಬಂದಿಯ ಬದುಕಿನ ಕಡೆಗೆ ಸರಕಾರ ಕಣ್ಣು ಹಾಯಿಸಬೇಕಾಗಿದೆ. ನರಕಸದೃಶವಾಗಿರುವ ಅವರ ಬದುಕನ್ನು ಮೇಲೆತ್ತುವ ಹಾಗೆಯೇ ಘನತೆಯಿಂದ ಕೆಲಸ ಮಾಡುವ ವಾತಾವರಣ ಒದಗಿಸಿಕೊಡುವ ಕಾರ್ಯ ನಡೆಯಬೇಕಾಗಿದೆ.['ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಕೊಂದಿದ್ದು ಮುನ್ನಾ']

ತಮ್ಮ ಕೆಲಸವನ್ನು ಸಿಬ್ಬಂದಿ ಪ್ರೀತಿಸಲು ತೊಡಗಿದಾಗ ಮಾತ್ರ, ಅವರು ಅದರಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳಲು ಸಾಧ್ಯ. ಪಕ್ಕದ ಕೇರಳದಲ್ಲಿ ಪೊಲೀಸ್ ಸಿಬ್ಬಂದಿಯ ಸ್ಥಿತಿ ಹೀಗಿಲ್ಲ. ಅವರದೇಆದ ಸಂಘಟನೆಗಳು ಅಲ್ಲಿವೆ. 8 ಗಂಟೆಗಿಂತ ಜಾಸ್ತಿ ಅವರನ್ನು ದುಡಿಸಲಾಗುವುದಿಲ್ಲ.ಅದನ್ನೇ ಮಾದರಿಯಾಗಿ ಇರಿಸಿಕೊಂಡು,ಕರ್ನಾಟಕದ ಪೊಲೀಸರ ಸ್ಥಿತಿಗತಿಗಳು ಸುಧಾರಣೆಯಾಗಬೇಕು. ಆ ಬಳಿಕ ಒಟ್ಟು ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಸರಕಾರ ಮುಂದಡಿಯಿಡಬೇಕು......(ವಾಟ್ಸಪ್ ಕೃಪೆ )

ಕರ್ತವ್ಯದಲ್ಲಿರುವ ಪೊಲೀಸ್ ಗೆಳೆಯನ ಅಳಲು

English summary
Bengaluru: After the murder of Doddaballapur police station sub inspector Jagadeesh (33) people expressing their opinion about police department and Government. A Whatsapp letter tells all the story about a common constable facing every day problem. Just read this letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X