ಡಿಕೆ ಶಿವಕುಮಾರ್ ಅವರ ಕೈಯಲ್ಲಿರುವ ವಾಚ್ ಬೆಲೆ ಎಷ್ಟು ಗೊತ್ತಾ? ಅಚ್ಚರಿ ಮಾಹಿತಿ ಇಲ್ಲಿದೆ!
ಬೆಂಗಳೂರು, ಡಿಸೆಂಬರ್ 03: ಕರ್ನಾಟಕ ರಾಜಕೀಯದಲ್ಲಿ ಕುರ್ಚಿ ಗುದ್ದಾಟಕ್ಕೆ ಒಂದು ಹಂತದ ಬ್ರೇಕ್ ಬಿದ್ದರೂ ತೆರೆ ಮರೆ ಕಸರತ್ತು ನಡೆಯುತ್ತಿದೆ. ಒಂದೆಡೆ ಹೈಕಮಾಂಡ್ ಸೂಚನೆ ಮೇರೆಗೆ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ನಡೆಸಿದ್ದು, ಈ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈಯಲ್ಲಿ ಇರುವ ಒಂದೇ ಬ್ರಾಂಡ್ ವಾಚ್ ಎಲ್ಲರ ಗಮನ ಸೆಳೆದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದುಬಾರಿ ವಾಚ್ ಬಗ್ಗೆ ಬಿಜೆಪಿ ಟೀಕೆ ಮಾಡಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, 24 ಲಕ್ಷ ರೂಪಾಯಿ ಕೊಟ್ಟು ಈ ಗಡಿಯಾರ ನಾನೇ ಖರೀದಿ ಮಾಡಿದ್ದೇನೆ ನನ್ನದೇ ಕ್ರೆಡಿಟ್ ಕಾರ್ಡ್ ಕೊಟ್ಟು ಖರೀದಿಸಿದ್ದೇನೆ ಚೆಕ್ ಮಾಡಬಹುದು ಎಲೆಕ್ಷನ್ ಅಫೀಡಿವೇಟ್ ನಲ್ಲೂ ಕೂಡ ತೋರಿಸಿದ್ದೇನೆ ಎಂದರು.

ಈ ನನ್ನ ವಾಚ್ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದೆ. ನಾನು ಇದನ್ನು ನನ್ನ ಕ್ರೆಟಿಡ್ ಕಾರ್ಡ್ ಮೂಲಕ 24 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು ನನ್ನ ಚುನಾವಣಾ ಅಫಿಡವಿಟ್ ನಲ್ಲೂ ಘೋಷಿಸಿಕೊಂಡಿದ್ದೇನೆ. ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಬಗ್ಗೆ ನನಗೆ ಗೊತ್ತಿಲ್ಲ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿ ಮಾಡಿರಬಹುದು. ನಮ್ಮ ತಂದೆಗೆ ವಾಚ್ ಗಳೆಂದರೆ ಬಹಳ ಇಷ್ಟ. ಅವರ ಬಳಿ ಏಳು ವಾಚ್ ಗಳಿದ್ದವು. ಅವರು ಸತ್ತ ನಂತರ ಅದನ್ನು ಯಾರು ಧರಿಸಬೇಕು..? ನಾನು ಧರಿಸಬೇಕು, ಇಲ್ಲವೇ ನನ್ನ ತಮ್ಮ ಧರಿಸಬೇಕುಎಂದು ತಿಳಿಸಿದರು.
30 ತಿಂಗಳ ನಂತರ ಬೇಕಾದರೂ ಸಿಎಂ ಬದಲಾಗಬಹುದು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಪಕ್ಷ ಹಾಗೂ ನನಗೆ ಮಾತ್ರ ವಕ್ತಾರ. ಬೇರೆ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ತಿಳಿಸಿದರು. ಡಿ.8 ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಸರ್ವಪಕ್ಷ ಸಭೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡುವ ಸಾಧ್ಯತೆಗಳಿವೆ. ನಾವು ಈ ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿ, ವಿರೋಧ ಪಕ್ಷದವರಿಗೆ ಅವರಿಗೆ ಸರಿಹೋಗುವ ದಿನಾಂಕ ನಿಗದಿ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ನಿಮ್ಮ ಅಭಿಮಾನಿಗಳು ಡಿ.ಕೆ, ಡಿ.ಕೆ.. ಎಂದು ಕೂಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಪೂರ್ಣಾವಧಿ ಸಿಎಂ ಎಂದು ಕೂಗಿದ್ದಾರೆ ಬಗ್ಗೆ ಮಾತನಾಡಿ, ಅಭಿಮಾನಿಗಳು ಈ ರೀತಿ ಕೂಗುವುದು ಸಹಜ. ಜನ ಕಳೆದ ಹತ್ತು ವರ್ಷಗಳಿಂದ ಡಿಕೆ, ಡಿಕೆ.. ಎಂದು ಕೂಗುತ್ತಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ. ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ.. ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.., ರಾಹುಲ್... ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು, ಸಿದ್ದು... ಎಂದು ಕೂಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಅಭಿಮಾನದ ಮಾತುಗಳು ಸಹಜ ಎಂದು ತಿಳಿಸಿದರು.












Click it and Unblock the Notifications