Channapatna Congress Candidate: ಚನ್ನಪಟ್ಟಣದಿಂದ ನಟ ದರ್ಶನ್ ಕಣಕ್ಕೆ? : ಡಿ ಕೆ ಸುರೇಶ್ ಏನಂದ್ರು?
ಬೆಂಗಳೂರು, ಜೂನ್ 29: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳ ಚುನಾವಣೆ ಕುರಿತು ಚರ್ಚೆಯಾಗುತ್ತಿದ್ದು, ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಹೆಚ್ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪಚುನಾವಣೆ ಈ ಬಾರೀ ಸಾಕಷ್ಟು ಮಹತ್ವವನ್ನ ಪಡೆದುಕೊಂಡಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ಸೋಲು ಅನುಭವಿಸಿದ್ದು, ಕಮಲ-ದಳ ನಾಯಕರಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಡಿ ಕೆ ಬ್ರದರ್ಸ್ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಚನ್ನಪಟ್ಟಣ ಕ್ಷೇತ್ರದಿಂದ ಈ ಬಾರಿ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎನ್ನುವ ಕುರಿತು ಡಿ ಕೆ ಬ್ರದರ್ಸ್ ಅಚ್ಚರಿ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇತ್ತ ಡಿ ಕೆ ಶಿವಕುಮಾರ್ ಅಥವಾ ಡಿ ಕೆ ಸುರೇಶ್ ಚನ್ನಟ್ಟದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಕೈ ಪಾಳಯದಲ್ಲಿ ಚರ್ಚೆಯಾಗಿದ್ದು, ಈ ಬಗ್ಗೆ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇತ್ತ ಚನ್ನಪಟ್ಟಣ ಕ್ಷೇತ್ರ ಡಿ ಕೆ ಬ್ರದರ್ಸ್ ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ಶತಾಯಗತಾಯ ಈ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಡಿ ಕೆ ಶಿವಕುಮಾರ್ ಬಣದವರು ಬಿಗ್ ಪ್ಲಾನ್ ಮಾಡಿದ್ದಾರೆ. ಈ ಹಿಂದೆಯೇ ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಚನ್ನಪಟ್ಟಣ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ಅಚ್ಚರಿ ಹೇಳಿಕೆಯನ್ನ ನೀಡಿದ್ರು. ಆ ಅಚ್ಚರಿ ಅಭ್ಯರ್ಥಿ ಯಾರು ಎಂಬುದು ಸಹ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಸ್ಟಾರ್ ನಟರೊಬ್ಬರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿತ್ರನಟ ದರ್ಶನ್ ಅವರನ್ನು ಕಣಕ್ಕಿಳಿಸುವ ಯೋಚನೆ ಇತ್ತೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಮಾತನಾಡಿ, ಕುಚೇಷ್ಟೆಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಚನ್ನಪಟ್ಟಣ ವಿಧಾನಸಭಾ ಉಪ ಚುನಾವನೆಯಲ್ಲಿ ನಿಮ್ಮ ಕುಟುಂಬದಿಂದ ಯಾರಾದರೂ ಸ್ಪರ್ಧಿಸುತ್ತಿರಾ ಅಂತ ಕೇಳಿದ ಪ್ರಶ್ನೆಗೆ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಮತ್ತು ಮಾಧ್ಯಮದವರು ನನ್ನ ಆಚಾರ ವಿಚಾರಗಳನ್ನು ತಿರಸ್ಕಾರ ಮಾಡಿದ್ದಾರೆ, ಹಾಗಾಗಿ ಇನ್ನು ಮುಂದೆ ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿಯವರು ತಾನೇ ಚನ್ನಪಟ್ಟಣಕ್ಕೆ ಮೊದಲು ಬಂದಿದ್ದು ಹೇಳಿರುವುದಕ್ಕೆ ಉತ್ತರಿಸಿದ ಸುರೇಶ್, ಯಾರು ಮೊದಲು ಬಂದಿದ್ದರು ಯಾರು ನಂತರ ಬಂದರು ಅನ್ನೋದನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ, ರಾಮನಗರ ಒಂದು ಕಣ್ಣು ಹೋಯಿತು, ಚನ್ನಪಟ್ಟಣದಲ್ಲಿ ಮತ್ತೊಂದು ಕಣ್ಣೂ ಹೋಯಿತು ಅಂತ ಸೂಚ್ಯವಾಗಿ ಹೇಳಿ ಮಾಧ್ಯಮದವರಿಗೆ ನೈತಿಕತೆ ಇದ್ದರೆ ಕುಮಾರಸ್ವಾಮಿಯವರು ಹಿಂದೆ ನೀಡಿದ ಹೇಳಿಕೆಗಳನ್ನು ಜನರ ಮುಂದೆ ಇಡಲಿ ಎಂದು ಹೇಳಿದ್ದರು.












Click it and Unblock the Notifications