ಐಶ್ವರ್ಯ ಗೌಡ ವಂಚನೆ ಪ್ರಕರಣ; ಹಣಕಾಸಿನ ವಹಿವಾಟು ಬಗ್ಗೆ ಡಿ ಕೆ ಸುರೇಶ್ ಹೇಳಿದ್ದೇನು?
ಬೆಂಗಳೂರು, ಜೂನ್23: ಐಶ್ವರ್ಯ ಗೌಡ ವಂಚನೆ ಪ್ರಕರಣದ ಕುರಿತು ಇಡಿಯವರು ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ ಎಂದು ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಸದಾಶಿವನಗರ ನಿವಾಸದ ಬಳಿ ಪ್ರತಿಕ್ರಿಯಿಸಿದ್ದಾರೆ.
ಇಡಿ ನೋಟಿಸ್ ರಾಜಕೀಯ ಷಡ್ಯಂತ್ರವೆಂದು ನಿಮಗೆ ಅನಿಸುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತ ರಿಸಿದ ಅವರು, ವಿಚಾರಣೆಗೆ ಹೋದಾಗ ಇದರ ಬಗ್ಗೆ ತಿಳಿಯುತ್ತದೆ. ಅವರ ಪ್ರಶ್ನೆಗಳು ಯಾವ ಹಾದಿಯಲ್ಲಿವೆ, ವಿಚಾರಣೆಗೂ ಪ್ರಕರಣಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಜೊತೆಯಲ್ಲಿ ವಕೀಲರು ಇರುತ್ತಾರೆ. ನಂತರ ಯಾವುದಕ್ಕೆ ಸಂಬಂಧವಿದೆ, ಅಸಂಬದ್ಧವಾಗಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಇಡಿ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಅನೇಕ ಬಾರಿ ಹೇಳಿವೆ. ಆದಾಗ್ಯೂ ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದರ್ಥ. ಅವರ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದು ನೋಡಿದರೆ ಸರ್ಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ. ಏನು ಮಾಡುತ್ತಾರೆ ಎಂದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಐಶ್ವರ್ಯ ಗೌಡ ನಿಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ನಿಮ್ಮ ಅವರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ. ಅವರು ಮೂರ್ನಾಲ್ಕು ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರ ಆಯೋಜನೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುತ್ತೇನೆ ಎಂದು ಸ್ಪಷ್ಟವಾಗಿ ನುಡಿದರು.
ನಟರೊಬ್ಬರು ನಿಮ್ಮ ಧ್ವನಿ ಅನುಕರಣೆ ಮಾಡಿ ವಂಚನೆ ಎಸಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ್ದು, ಈ ಬಗ್ಗೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈ ತನಿಖೆಯ ಬೆಳವಣಿಗೆ ಏನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.












Click it and Unblock the Notifications