ಚನ್ನಪಟ್ಣಣ: ಟಿಕೆಟ್ ಸಿಗದಿದ್ದರೆ ಮೈತ್ರಿ ಮುರಿದು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಸ್ಪರ್ಧೆ?- ಡಿಕೆ ಶಿವಕುಮಾರ್
ರಾಮನಗರ, ಜುಲೈ 20: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ನಾಯಕ ಸಿ ಪಿಯೋಗೇಶ್ವರ್ ಅವರಿಗೆ ಟಿಕೆಟ್ ಸಿಗದಿದ್ದರೆ ಮೈತ್ರಿ ಮುರಿದು ಸ್ವತಂತ್ರ್ಯ ಸ್ಪರ್ಧೆ ಮಾಡಲಾಗುವುದು ಎಂಬ ಯೋಗೇಶ್ವರ್ ಅಭಿಮಾನಿಗಳ ಎಚ್ಚರಿಕೆಯನ್ನ ಬಿಜೆಪಿ ನಾಯಕರಿಗೆ ನೀಡಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಡಿ ಕೆ ಶಿವಕುಮಾರ್ ಮಾತನಾಡಿ, ಅವರ ಪಕ್ಷದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಯಾವತ್ತಾದರೂ ಒಂದು ದಿನ ಅವರ ಮಧ್ಯೇ ಇದು ಇತ್ಯರ್ಥವಾಗಬೇಕು. ಅವರೇ ಮಾಡಿಕೊಳ್ಳಲಿ. ಅವರು ಏನಾದರೂ ಮಾಡಲಿ. ಈ ಭಾಗದ ಜನರ ಬದುಕಲ್ಲಿ ಬದಲಾವಣೆ ತರಬೇಕು. ನಮಗೆ ಅಧಿಕಾರ ಇದ್ದ ಕಾರಣ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಬಡವರಿಗೆ ನಿವೇಶನ ಹಂಚಲು 50 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವಣ ತಿಕ್ಕಾಟದ ಕುರಿತು ಮಾತನಾಡಿ, ಅವರು ಈ ಹಿಂದೆಯೂ ಕಿತ್ತಾಡಿದ್ದರು. ಈಗ ಒಂದಾಗಿಲ್ಲವೇ? ಅವರು ಮತ್ತೆ ಒಂದಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ಹೀಗಾಗಿ ನಾವು ಅವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗ ನಾಲ್ಕು ಆಧಾರಸ್ತಂಭಗಳು. ಶಾಸಕಾಂಗ ಮಾಡಿದ ಕಾರ್ಯಕ್ರಮ ಜಾರಿಗೆ ತರುವುದು ಕಾರ್ಯಾಂಗವಾದ ನೀವುಗಳು. ನಾವಿಬ್ಬರು ತಪ್ಪು ಮಾಡಿದರೆ ಅದನ್ನು ತಿದ್ದುವುದು ನ್ಯಾಯಾಂಗ. ನಾವು ನೀವು ಮಾಡುತ್ತಿರುವುದು ಸರ್ಕಾರಿ ಕೆಲಸ. ಕೆಂಗಲ್ ಹನುಮಂತಯ್ಯ ಅವರು ನಮ್ಮ ಜಿಲ್ಲೆಯವರು. ಅವರು ವಿಧಾನಸೌಧ ಕಟ್ಟಿ ಅದರ ಪ್ರವೇಶ ದ್ವಾರದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ.
ಬಡವರು, ಜನರು ನಿಮ್ಮ ಬಳಿ ಬರುವುದು ಅವರ ಕಷ್ಟಕ್ಕೆ ಪರಿಹಾರ ಕೇಳಿಕೊಂಡು. ನಾವು ದಿನ ಬೆಳಗಾದರೆ ದೇವರ ಮುಂದೆ ನಿಂತು ಪ್ರಾರ್ಥನೆ ಮಾಡಿ ಕಷ್ಟಗಳನ್ನು ಹೇಳಿಕೊಳ್ಳುತ್ತೇವೆ. ಅರ್ಚಕನ ಪ್ರಭಾವದಿಂದ ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂದು ಶ್ಲೋಕ ಹೇಳುತ್ತದೆ. ಅದೇ ರೀತಿ ಜನ ತಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ನೀವು ಅವರ ಕಷ್ಟಕ್ಕೆ ಸ್ಪಂದಿಸಿದಾಗ ಜನ ನಿಮ್ಮನ್ನು ಸ್ಮರಿಸುತ್ತಾರೆ. ಅವರ ಹೃದಯದಲ್ಲಿ ನಿಮಗೆ ಗೌರವಯುತದ ಸ್ಥಾನ ನೀಡುತ್ತಾರೆ.
ಹಣ ಯಾವತ್ತು ಬೇಕಾದರೂ ಸಂಪಾದನೆ ಮಾಡಬಹುದು. ನೀವು ಎಷ್ಟೇ ಸಂಪಾದಿಸಿದರೂ ಎಲ್ಲರಷ್ಟೇ ತಿನ್ನಬಹುದು. ಹೆಚ್ಚು ತಿಂದರೆ ವಾಂತಿಯಾಗುತ್ತದೆ. ನೀವು ಅತ್ಯುತ್ತಮ ಬಟ್ಟೆ ಖರೀದಿ ಮಾಡಿದರೂ ಒಂದೆರಡು ದಿನ ಮಾತ್ರ ಧರಿಸಬಹುದು.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ಎಂಬ ಶ್ಲೋಕವಿದೆ. ಇದರ ಅರ್ಥ ಏನೆಂದರೆ, ಮರ ಹಣ್ಣು, ಸೌದೆ ಕೊಡುವುದು ತನಗಾಗಿ ಅಲ್ಲ, ಬೇರೆಯವರಿಗಾಗಿ. ಹರಿಯುವ ನದಿ ಕೂಡ ತನಗಾಗಿ ಅನುಕೂಲ ಮಾಡಿಕೊಳ್ಳುವುದಿಲ್ಲ. ಬೇರೆಯವರ ಅನುಕೂಲ ಮಾಡಿಕೊಡಲು ಹರಿಯುತ್ತದೆ. ಅದೇ ರೀತಿ ಹಸು ಕೂಡ ಬೇರೆಯವರಿಗೆ ಹಾಲು ಕೊಟ್ಟು ಪರೋಪಕಾರ ಮಾಡುತ್ತದೆ. ಮನುಷ್ಯ ಇರುವುದು ಕೂಡ ಬೇರೆಯವರಿಗಾಗಿ. ಹೀಗಾಗಿ ಅವಕಾಶ ಸಿಕ್ಕಾಗ ಬಹಳ ಪ್ರಮಾಣಿಕವಾಗಿ ಕೆಲಸ ಮಾಡಿ.












Click it and Unblock the Notifications