ಗ್ರೇಟರ್ ಬೆಂಗಳೂರು: ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 02: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಅಡಿಯಲ್ಲಿ ಹೊಸದಾಗಿ ರಚಿಸಲಾದ ಐದು ಮಹಾನಗರ ಪಾಲಿಕೆಗಳ ಡಿಲಿಮಿಟೇಶನ್ ಪ್ರಕ್ರಿಯೆಯನ್ನು 2025ರ ನ.1ರೊಳಗೆ ಪೂರ್ಣಗೊಳಿಸಲು ಮತ್ತು ನ.30ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೀಗ ಗ್ರೇಟರ್ ಬೆಂಗಳೂರು ಚುನಾವಣೆ ಕುರಿತು ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ನಾವು ಐದು ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದಿದ್ದು, 368 ವಾರ್ಡ್ ಮಾಡಲಾಗಿದ್ದು, ಇನ್ನೊಂದು ವಾರ್ಡ್ ಸೇರ್ಪಡೆಯಾಗಬಹುದು. ಈ ಮೂಲಕ ಹೆಚ್ಚಿನ ನಾಯಕರನ್ನು ಆಯ್ಕೆ ಮಾಡುವ ಶಕ್ತಿ ನೀಡಲಾಗಿದೆ. ಚುನಾವಣೆ ನಂತರ ಪಾಲಿಕೆ ಗಡಿ ಭಾಗದಲ್ಲಿರುವ ಪ್ರದೇಶಗಳನ್ನು ಸೇರಿಸಿಕೊಂಡು ಇನ್ನು 140-150 ವಾರ್ಡ್ ಗಳು ಸೇರ್ಪಡೆಯಾಗಲಿವೆ. ಈಗಾಗಲೇ 368 ವಾರ್ಡ್ ಗಳ ಘೋಷಣೆಯಾಗಿದೆ. ಇದಕ್ಕೆ ಆಕ್ಷೇಪಗಳಿದ್ದರೆ ಸಲ್ಲಿಸಬಹುದು. ಕಾನೂನು ಪ್ರಕಾರ ಸರಿ ಮಾಡಲಾಗುವುದು. ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಜನರಿಗೆ ನಾವು ಅಧಿಕಾರ ನೀಡಬೇಕು. ಹೀಗಾಗಿ ಚುನಾವಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಚುನಾವಣೆ ಸಿದ್ದತೆ ನಡೆಯುತ್ತಿದೆ ಎಂದು ಕರೆ ನೀಡಿದ್ದಾರೆ.

ನನ್ನ ವಿರುದ್ಧ ಟೀಕೆಗಳು ಬಂದರೂ ಪರವಾಗಿಲ್ಲ, ಬೆಂಗಳೂರಿಗೆ ಹೊಸ ರೂಪ ನೀಡುತ್ತೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ. ಬೆಂಗಳೂರಿನ ಜನರಿಗೆ ನೀಡಿರುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡುತ್ತೇವೆ ಎಂದು ತಿಳಿಸಿದರು. ನಿಮ್ಮ ಪರಿಶ್ರಮವನ್ನು ಪಕ್ಷ ಗುರುತಿಸುತ್ತದೆ. ಪಕ್ಷಕ್ಕೆ ದುಡಿದವರಿಗೆ ನಾವು ನಿಗಮಮಂಡಳಿಯಲ್ಲಿ ನೇಮಕ ಮಾಡಿದ್ದೇವೆ. ಸಧ್ಯದಲ್ಲೇ 650 ನಿರ್ದೇಶಕರ ಪಟ್ಟಿ ಕೂಡ ಅಂತಿಮವಾಗಲಿದೆ. ಎರಡು ಮೂರು ದಿನಗಳಲ್ಲಿ ಪಟ್ಟಿ ಪ್ರಕಟಿಸುತ್ತೇವೆ.
ಎರಡು ವರ್ಷಗಳ ನಂತರ ಕೆಲವು ಅಧ್ಯಕ್ಷರು ರಾಜೀನಾಮೆ ನೀಡಲಿದ್ದು, ಬೇರೆಯವರಿಗೆ ಅಧಿಕಾರವನ್ನು ನೀಡಲಾಗುವುದು. ನಾವು ಎಲ್ಲರಿಗೂ ಅಧಿಕಾರವನ್ನು ಹಂಚಿ ಪ್ರೋತ್ಸಾಹ ನೀಡುತ್ತೇವೆ. ನಮ್ಮ ಈ ಹಂಚಿಕೆ ಕೇವಲ ನಿಗಮ ಮಂಡಳಿ ವಿಚಾರದಲ್ಲಿ ಮಾತ್ರ. ಸರ್ಕಾರದ ಮಟ್ಟದಲ್ಲಿ ಅಲ್ಲ ಎಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ಇಲ್ಲವಾದರೆ ನಾನು ಹಂಚಿಕೆ ವಿಚಾರ ಮಾತನಾಡಿದೆ ಎಂದು ಸರ್ಕಾರದ ವಿಚಾರಕ್ಕೆ ಲಿಂಕ್ ಮಾಡಿ ಅನಗತ್ಯ ಚರ್ಚೆ ಮಾಡುವುದು ಬೇಡ. ನಾನು ಹಾಗೂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮಾತಿಗೆ ಬದ್ಧವಾಗಿ ನಡೆಯುತ್ತೇವೆ. ಈ ವಿಚಾರದಲ್ಲಿ ಅನಗತ್ಯ ಚರ್ಚೆ ಬೇಡ ಎಂದು ತಿಳಿಸಿದರು.
ಮುಂದಿನ ದಸರಾದಿಂದ ಪಕ್ಷಕ್ಕೆ ದುಡಿದ ಸುಮಾರು ಸಾವಿರ ಜನ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಿಂದಲೇ ಆಹ್ವಾನ ನೀಡುವಂತೆ ಮಾಡಲಾಗುವುದು. ಎಲ್ಲಾ ಭಾಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು. ಈ ವೈಭವಯುತ ನಾಡಹಬ್ಬವನ್ನು ಜನರು ನೋಡಿ ಕಣ್ತುಂಬಿಕೊಳ್ಳಲಿ ಎಂದು ತಿಳಿಸಿದರು. ಮಹಾತ್ಮಾ ಗಾಂಧಿ ಅವರು ಜನಿಸಿ 156 ವರ್ಷಗಳು ಸಂದಿವೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶತಮಾನ ಕಳೆದಿವೆ. ನೀವೆಲ್ಲರೂ ಬೆಳಗಾವಿಗೆ ಬಂದು ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಭಾಗವವಹಿಸಿದ್ದೀರಿ. ಇಡಿ ವರ್ಷವನ್ನು ಸಂಘಟನೆ ವರ್ಷವಾಗಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಅದರ ಕೆಲಸ ನಡೆಯುತ್ತಿದ್ದು, ಅನೇಕ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರನ್ನು ಪ್ರತಿ ಜಿಲ್ಲೆಗೆ ಕಳುಹಿಸಿ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತಿದೆ.
ನಾನು ಕೂಡ ಒಂದು ತಂಡ ಕಳುಹಿಸಿದ್ದೆ. ಆದರೆ ಹೈಕಮಾಂಡ್ ನಾಯಕರು, ದೆಹಲಿಯಿಂದಲೇ ತಂಡ ಬರಲಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ನಾನು ಈ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇನೆ. ಈಗಿರುವ ಜಿಲ್ಲಾಧ್ಯಕ್ಷರ ಪೈಕಿ ಅನೇಕರು ಅನೇಕ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಮತ್ತೆ ಕೆಲವರು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸುಮಾರು 16 ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಮಾಡಲು ತೀರ್ಮಾನಿಸಿದ್ದೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.












Click it and Unblock the Notifications