ಡಿ.ಕೆ.ಶಿವಕುಮಾರ್ ನಡೆಗೆ ಬೆಚ್ಚಿಬಿದ್ದ ಹಿತಶತ್ರುಗಳು...!

ಬೆಂಗಳೂರು, ಫೆಬ್ರವರಿ 28: ಸದ್ಯಕ್ಕೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಮಾಡಿದೆ. ಮೇಲ್ನೋಟಕ್ಕೆ ಒಬ್ಬ ಹಿಂದೂ ಆಗಿ ದೇವರನ್ನು ನಂಬುವ ವ್ಯಕ್ತಿಯಾಗಿ ಕುಂಭಮೇಳದಲ್ಲಿ ಸ್ನಾನ ಮಾಡುವುದಾಗಲೀ, ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಲೀ ತಪ್ಪೇನಲ್ಲ ಎಂಬಂತೆ ಅವರ ನಡೆ ಕಾಣಬಹುದಾದರೂ ಅದರ ಒಳಸುಳಿಯೇ ಬೇರೆಯಾಗಿದೆ. ಏಕೆಂದರೆ ಇದನ್ನು ಡಿ.ಕೆ.ಶಿವಕುಮಾರ್ ಹೊರತು ಪಡಿಸಿ ಬೇರೆ ಯಾರೂ ಮಾಡಿದ್ದರೂ ಅದಕ್ಕೆ ಪ್ರತ್ಯೇಕವಾದ ವ್ಯಾಖ್ಯಾನಗಳ ಅಗತ್ಯವಿರಲಿಲ್ಲವೇನೋ? ಆದರೆ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಅವರ ನಡೆ ತರಾವರಿಯ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ.

ಕಳೆದ ಕೆಲವು ಸಮಯದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಕೆಲವು ನಾಯಕರು ನಡೆದುಕೊಳ್ಳುತ್ತಿದ್ದ ರೀತಿ ಮತ್ತು ಅವರು ನೀಡುತ್ತಿದ್ದ ಹೇಳಿಕೆಗಳೆಲ್ಲವೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧವಾಗಿಯೇ ಇತ್ತು. ಅಷ್ಟೇ ಅಲ್ಲದೆ ನಡವಳಿಕೆಗಳು, ಚಟುವಟಿಕೆಗಳು ಆದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳಬೇಕೆಂಬ ಹಠಕ್ಕೆ ಬಿದ್ದಂತಿತ್ತು. ಇಷ್ಟಕ್ಕೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆಶಿಯಿಂದ ಕಿತ್ತುಕೊಂಡು ಮಾಡುವ ಸಾಧನೆ ಏನೂ ಇರಲಿಲ್ಲ. ಅಲ್ಲಿ ಇದ್ದದಷ್ಟೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಸಿದು ಪ್ರಾಬಲ್ಯವನ್ನು ಕುಗ್ಗಿಸುವುದಷ್ಟೇ ಮುಖ್ಯವಾಗಿತ್ತು.

DK Shivakumar s Political Move Creates Stir in Karnataka and Beyond

ನಾವು ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ನ ಕೆಲವು ನಾಯಕರು ನಡೆದುಕೊಂಡ ರೀತಿ, ಅವರು ನೀಡಿದ ಹೇಳಿಕೆಗಳು ಎಲ್ಲವನ್ನೂ ನೋಡಿದ್ದೇ ಆದರೆ ಅದು ಕಾಂಗ್ರೆಸ್ ನಲ್ಲಿ ಬಣ ಜಗಳವಿದೆ ಎಂಬುದನ್ನಷ್ಟೇ ತೋರಿಸಿರಲಿಲ್ಲ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದ ಅಧಿಕಾರ ಹಸ್ತಾಂತರ ಆಗಲ್ಲ. ಮತ್ತು ಅದನ್ನು ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲ್ಲ ಏನಿದ್ದರೂ ಮುಂದಿನ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಸಂದೇಶನ್ನು ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಡಿಕೆಶಿಗೆ ರವಾನಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದರು.

ಡಿಕೆಶಿ ವಿರುದ್ಧ ಅಸಮಾಧಾನ ಏಕೆ?

ಇದೆಲ್ಲದರ ನಡುವೆ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಅವರ ಬೆಂಬಲಿಗರು ದಲಿತ, ಹಿಂದುಳಿದವರ ಸಮಾವೇಶವನ್ನು ಮಾಡಿ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದರು. ಆದರೆ ಏನೇ ಮಾಡಬೇಕಾದರೂ ಪಕ್ಷದ ವೇದಿಕೆಯಲ್ಲಿ ಮಾಡಬೇಕು ಅದನ್ನು ಹೊರತು ಕಾಂಗ್ರೆಸ್ಸೇತರವಾಗಿ ಕಾರ್ಯಕ್ರಮಗಳನ್ನು ಮಾಡುವುದು ಸರಿಯಲ್ಲ ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾಹಿತಿಯನ್ನು ಹೈಕಮಾಂಡ್ ಗೆ ಡಿ.ಕೆ.ಶಿವಕುಮಾರ್ ರವಾನಿಸಿದ್ದರು. ಹೈಕಮಾಂಡ್ ಅದನ್ನು ಗಂಭೀರವಾಗಿ ಪರಿಗಣಿಸಿ ತಡೆಯೊಡ್ಡಿತ್ತು.

ಪಕ್ಷದ ವೇದಿಕೆ, ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡವಳಿಕೆಗಳನ್ನು ನೋಡಿದವರು ಇವರ ನಡುವೆ ಬಣ ಜಗಳವಿದೆ ಎಂಬುದನ್ನು ಒಪ್ಪಲು ಸಾಧ್ಯವೇ ಇಲ್ಲ. ಬಹಿರಂಗವಾಗಿ ಯಾವತ್ತೂ ಇಬ್ಬರು ನಾಯಕರು ಹೊರಗೆ ಹಾಕಿಲ್ಲ. ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ ಇವರ ನಡುವಿನ ಬಣಜಗಳ ಮಾತ್ರ ಹಿಂದಿನಿಂದಲೂ ಇದೆ. ಈಗಲೂ ಇದೆ. ಸಮಯ ಸಿಕ್ಕಾಗಲೆಲ್ಲ ಬೇರೆ ಬೇರೆ ಕಾರಣಕ್ಕೆ ಅವರ ಬೆಂಬಲಿಗರು ಅದನ್ನು ಹೇಳಿಕೆಗಳ ಮೂಲಕ ಬಹಿರಂಗಪಡಿಸುತ್ತಲೇ ಇರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ...

ಕುಂಭಸ್ನಾನ ಮಾಡಿ ಸುದ್ದಿಯಾದ ಡಿಕೆಶಿ

ಇದೆಲ್ಲದರ ನಡುವೆಯೂ ಡಿ.ಕೆ.ಶಿವಕುಮಾರ್ ನಡೆ ಅಚ್ಚರಿ ಮೂಡಿಸುತ್ತಿದೆ. ಕುಂಭಮೇಳವನ್ನು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಕ್ಷದ ನಾಯಕರು ಪುಂಖಾನುಪುಂಖವಾಗಿ ತೆಗಳುತ್ತಿದ್ದ ಸಂದರ್ಭದಲ್ಲಿಯೇ ಸಂಸಾರ ಸಹಿತ ಪ್ರಯಾಗ್ ರಾಜ್ ಗೆ ತೆರಳಿ ಪವಿತ್ರ ಸ್ನಾನ ಮಾಡಿ ಬಂದಿದ್ದರು. ಅಷ್ಟೇ ಅಲ್ಲದೆ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ್ದರು. ಇದು ಕೇವಲ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ರಾಜಕಾರಣದಲ್ಲಿ ಸುದ್ದಿ ಮಾಡಿತ್ತು. ಏಕೆಂದರೆ ಡಿ.ಕೆ.ಶಿವಕುಮಾರ್ ಕೇವಲ ರಾಜ್ಯಕ್ಕೆ ಸೀಮಿತರಾದ ನಾಯಕರಲ್ಲ. ಅವರು ದೇಶದ ಯಾವ ಭಾಗದಲ್ಲಿ ಚುನಾವಣೆಯಾದರೂ ಅಲ್ಲಿಗೆ ಹೋಗಿ ಪಕ್ಷದ ಪರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ನಾಯಕ. ಹೀಗಾಗಿಯೇ ಅವರ ಹೇಳಿಕೆ ಮತ್ತು ನಡೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ.

ಇದೀಗ ಶಿವರಾತ್ರಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿರುವುದು ಮತ್ತು ಅದೇ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಬಿಜೆಪಿಯ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾ ಬಂದಿರುವುದು ಇಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಶ್ರೀಸಾಮಾನ್ಯನಿಂದ ಆರಂಭವಾಗಿ ರಾಜಕೀಯ ನಾಯಕರ ತನಕ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಅವರೊಬ್ಬ ಹಿಂದೂವಾಗಿ ಹಿಂದೂಧರ್ಮವನ್ನು ಪಾಲನೆ ಮಾಡುವುದರಲ್ಲಿ ವಿಶೇಷವೇನೂ ಇಲ್ಲ.

ಹಿತಶತ್ರುಗಳಿಗೆ ಸಂದೇಶ ರವಾನಿಸಿದ ಡಿಕೆಶಿ

ಇವತ್ತು ಕಾಂಗ್ರೆಸ್ ನಲ್ಲಿರುವ ಬಹುತೇಕರು ಹಿಂದೂ ಧರ್ಮದ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಒಂದು ಸಮುದಾಯದ ಮತಗಳು ಕೈಬಿಟ್ಟು ಹೋಗುತ್ತವೆ ಎಂಬ ಭಯದಲ್ಲಿ ಹಿಂದೇಟು ಹಾಕುತ್ತಾರೆ. ಆದರೆ ರಾಜಕೀಯದ ಒಳಸುಳಿಗಳನ್ನು ಅರಿತಿರುವ ಮತ್ತು ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿ ಅಲ್ಪಸಂಖ್ಯಾತರ ಓಲೈಕೆ ಮಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದ್ದನ್ನು ನೋಡಿದ್ದಾರೆ. ಹೀಗಾಗಿ ಹಿಂದೂ ಮತಗಳು ಕೈ ಬಿಟ್ಟು ಹೋಗ ಬಾರದೆಂಬ ತಂತ್ರ ಒಂದೆಡೆಯಾದರೆ ಮತ್ತೊಂದೆಡೆ ದೇವರ ಮೇಲಿನ ನಂಬಿಕೆ ಅವರನ್ನು ಅಧ್ಯಾತ್ಮದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ.

ಡಿ.ಕೆ.ಶಿವಕುಮಾರ್ ಅವರ ಉದ್ದೇಶಗಳು ಏನಿವೆಯೋ ಗೊತ್ತಿಲ್ಲ. ಆದರೆ ತಮ್ಮ ನಡೆಯ ಮೂಲಕ ಅವರು ಸ್ವಪಕ್ಷದ ವಿರೋಧಿಗಳಿಗೆ ರಾಜಕೀಯವಾಗಿ ಒಂದು ಸಂದೇಶವನ್ನು ರವಾನಿಸಬೇಕಾಗಿತ್ತು. ಅದನ್ನು ರವಾನಿಸಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ಅಂದರೇನು? ಅವರ ಶಕ್ತಿ, ಸಾಮರ್ಥ್ಯವೇನು? ಎಂಬುದು ಕಾಂಗ್ರೆಸ್ ನ ಕೆಲವರಿಗೆ ಗೊತ್ತಾದಂತೆ ಕಾಣುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಟಾಂಗ್ ಕೊಡಲು ಹೊರಟವರು ತೆಪ್ಪಗೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯಂತು ಇದ್ದೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+