ಕಲಬುರಗಿ ಜಿಲ್ಲೆಯ ಕ್ಷೇತ್ರಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಭಾವ: ಡಿಕೆಶಿ ಉರುಳಿಸಿದ 'ಖರ್ಗೆ ಸಿಎಂ' ದಾಳದ ಹಿಂದಿದೆ ನಿಗೂಢ ತಂತ್ರ
ಬೆಂಗಳೂರು, ಏಪ್ರಿಲ್ 11: ಒಂದು ವೇಳೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ( Karnataka Elections 2023 ) ಕಾಂಗ್ರೆಸ್ ( Congress ) ಜಯಭೇರಿ ಬಾರಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( Mallikarjun Kharge ) ಅವರು ಮುಖ್ಯಮಂತ್ರಿಯಾದರೆ, ಅವರ ಅಡಿಯಲ್ಲಿ ಕೆಲಸ ಮಾಡಲು ಖುಷಿಯಿಂದ ಒಪ್ಪಿಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಬಹುದೊಡ್ಡ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ಕಾಂಗ್ರೆಸ್ ಗೆದ್ದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಡಬಹುದು ಎಂಬ ಮಾತುಗಳು ಹಲವು ತಿಂಗಳಿಂದ ಓಡಾಡುತ್ತಲೇ ಇವೆ. ಇದೆಲ್ಲದರ ನಡುವೆ ಡಿಕೆಶಿ ಸಿಡಿಸಿದ ದಲಿತ ಸಿಎಂ ಬಾಂಬ್ ರಾಜ್ಯವಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದಲ್ಲಿಯೂ ಸಂಚಲನವನ್ನು ಮೂಡಿಸಿದೆ.

ಖರ್ಗೆ ಅವರನ್ನು ಸಿಎಂ ಸ್ಥಾನಕ್ಕೆ ತರುವ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಲವು ತಂತ್ರಗಳನ್ನು ನಿಗೂಢವಾಗಿ ಹೆಣೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಡಿಕೆ ಶಿವಕುಮಾರ್ ಅವರ ದಾಳವು ಸಿದ್ದರಾಮಯ್ಯನವರನ್ನು ಸುಮ್ಮನಿರಿಸುವ ತಂತ್ರವೆಂದು ಬಿಂಬಿತವಾದರೂ, ಇದರ ಹಿಂದೆ ಬೇರೆಯದೇ ರಾಜಕೀಯವಿದೆ ಎಂದು ಹೇಳಲಾಗುತ್ತಿದೆ.
'ಖರ್ಗೆ ಮುಖ್ಯಮಂತ್ರಿಯಾದರೆ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಹಿರಿಯ ದಲಿತ ನಾಯಕರಿಗೆ ಈ ಹಿಂದೆಯೂ ಅನ್ಯಾಯವಾಗಿದೆ ಎಂಬ ಧ್ವನಿ ಪಕ್ಷದೊಳಗೆ ಕೇಳಿಬರುತ್ತಿದೆ. ಆದರೆ, ಪಕ್ಷದ ತೀರ್ಮಾನವೇ ಅಂತಿಮ' ಎಂದು ಡಿಕೆಶಿ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಖರ್ಗೆ ಪ್ರಭಾವ
ಕಲಬುರಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲದೇ ದಲಿತ ನಾಯಕರೂ ಆಗಿರುವ ಖರ್ಗೆ ಅವರ ಬಗ್ಗೆ ತಳ ಸಮುದಾಯದಲ್ಲಿ ಅಪಾರ ಅಭಿಮಾನಿಗಳ ಬೆಂಬಲವಿದೆ. ಈ ಹಿನ್ನೆಲೆಯಲ್ಲಿ ನೋಡುವುದಾರೆ, ಕಲಬುರಗಿ ಜಿಲ್ಲೆಯ ಅಫಜಲಪುರ, ಚಿತ್ತಾಪುರ, ಸೇಡಮ್, ಕಲಬುರಗಿ ಗ್ರಾಮಾಂತರ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ ಹಾಗೂ ಆಳಂದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಘೋಷಿಸಿದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಖರ್ಗೆ ಅವರ ಶಿಷ್ಯರೆಂದೇ ಹೇಳಬಹುದು.
ಅಫಜಲಪುರದಲ್ಲಿ ಎಂ ವೈ ಪಾಟೀಲ್, ಚಿತ್ತಾಪುರದಲ್ಲಿ ( ಎಸ್‌ಸಿ ) ಪ್ರಿಯಾಂಕ್ ಖರ್ಗೆ, ಸೇಡಂನಲ್ಲಿ ಡಾ ಶರಣಪ್ರಕಾಶ ಪಾಟೀಲ್, ಕಲಬುರಗಿ ಉತ್ತರದಲ್ಲಿ ಖನೀಜ್ ಫಾತಿಮಾ ಹಾಗೂ ಆಳಂದದಲ್ಲಿ ಬಿಆರ್ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಪ್ರಸ್ತುತ ಎಂ ವೈ ಪಾಟೀಲ್ ಅವರು ಅಫಜಲಪುರದಲ್ಲಿ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ( ಮಲ್ಲಿಕಾರ್ಜುನ ಖರ್ಗೆ ಪುತ್ರ ) ಅವರು ಶಾಸಕರಾಗಿದ್ದಾರೆ. ಖರ್ಗೆ ಅವರ ಶಿಷ್ಯರೆಂದೇ ಬಿಂಬಿತವಾಗಿರುವ ಶರಣ ಪ್ರಕಾಶ ಪಾಟೀಲ್ ಅವರು ಸೇಡಂ ಮಾಜಿ ಶಾಸಕರಾಗಿದ್ದಾರೆ. ಸೇಡಂ ಬಿಜೆಪಿಯಲ್ಲಿ ಅಸಮಾಧಾನಗಳಿದ್ದು, ಶರಣ ಪ್ರಕಾಶ ಪಾಟೀಲ್ ಅವರಿಗೆ ಈ ಬಾರಿಯ ಸ್ಪರ್ಧೆ ಅಷ್ಟೊಂದು ಕಠಿಣವಾಗದು ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.
ಕಲಬುರಗಿ ಉತ್ತರದಲ್ಲಿ ಖನೀಜ್ ಫಾತಿಮಾ ಅವರು ಕಾಂಗ್ರೆಸ್ ಶಾಸಕಿಯಾಗಿದ್ದಾರೆ. ಅವರು ಮಾಜಿ ಸಚಿವ, ದಿವಂಗತ ಕಮರ್ ಉಲ್ ಇಸ್ಲಾಂ ಅವರ ಪತ್ನಿ. ಕಮರ್ ಉಲ್ ಇಸ್ಲಾಂ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿ ಉತ್ತರದಲ್ಲಿ ಖರ್ಗೆ ಪ್ರಭಾವ ಕೆಲಸ ಮಾಡಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆಳಂದದಿಂದ ಮೂರು ಬಾರಿ ಆಯ್ಕೆಯಾಗಿರುವ ಬಿಆರ್ ಪಾಟೀಲ್ ಖರ್ಗೆ ಅವರ ನಿಕಟವರ್ತಿಯೆಂದೇ ಬಿಂಬಿತರಾಗಿದ್ದಾರೆ. ಆಳಂದದಲ್ಲಿಯೂ ಖರ್ಗೆ ಪ್ರಭಾವವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಖರ್ಗೆ ಪ್ರಭಾವವನ್ನು ಅತ್ಯಧಿಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ನಿಗೂಢ ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಡಿಕೆಶಿ ಅಂದುಕೊಂಡಂತೆ ಆದರೆ ಕಲಬುರಗಿ ಜಿಲ್ಲೆಯ ಬಹುತೇಕ ಕ್ಷೇತ್ರಗಳು ಕಾಂಗ್ರೆಸ್ ಒಲಿಯುವುದು ಗ್ಯಾರಂಟಿ.












Click it and Unblock the Notifications