ಸಿದ್ದರಾಮಯ್ಯಗೆ ಟಾಂಗ್ ನೀಡಿ, ಎಚ್‌ಡಿಕೆ ಪರ ಬ್ಯಾಟ್ ಬೀಸಿದ ಡಿಕೆಶಿ
ಬೆಂಗಳೂರು, ಜುಲೈ 14: ತಮ್ಮದೇ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಪರ ವಹಿಸಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರು ಪದೇ ಪದೇ ಪತ್ರಗಳನ್ನು ಬರೆಯುವ ಮೂಲಕ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಲಹೆ ಕೊಡಬೇಕು ನಿಜ ಆದರೆ ಒತ್ತಡ ಹೇರಲು ಮಿತಿ ಇರುತ್ತದೆ ಎಂದು ಸಿದ್ದರಾಮಯ್ಯ ಅವರ ಕಾರ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಸಮಯದಿಂದಲೂ ಸಿದ್ದರಾಮಯ್ಯ ಅವರ ಮೇಲೆ ಮುನಿಸಿನಿಂದಲೇ ಇರುವ ಡಿಕೆ.ಶಿವಕುಮಾರ್ ಅವರು, ಆಗಾಗ ಹೆಸರು ಹೇಳದೆ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಲೇ ಬರುತ್ತಿದ್ದಾರೆ.

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರಕ್ಕೆ ಅನುದಾನಕ್ಕೆಂದು ಒಮ್ಮೆ, ಅನ್ನಭಾಗ್ಯದ ಅಕ್ಕಿ ಕಡಿತ ಮಾಡಿದ್ದಕ್ಕೆ ಒಮ್ಮೆ, ಸಮನ್ವಯ ಸಮಿತಿಗೆ ಸರ್ಕಾರದ ಅನುಮೋದನೆ ನೀಡುವುದಕ್ಕೆ ಒಮ್ಮೆ ಹೀಗೆ ಒಂದರ ಹಿಂದರೊಂದಂತೆ ಪತ್ರಗಳನ್ನು ಬರೆದು ಒತ್ತಡ ಹೇರುತ್ತಿರುವುದು ಡಿ.ಕೆ.ಶಿವಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಏನು ಮಾಡಬೇಕೆಂದು ವಿವೇಚನೆ ಮುಖ್ಯಮಂತ್ರಿಗಳಿಗೆ ಇರುತ್ತದೆ. ಏನೇ ಮಾಡಿದರೂ ಆರ್ಥಿಕ ಚೌಕಟ್ಟಿನ ಒಳಗೇ ಮಾಡಬೇಕಾಗಿರುತ್ತದೆ. ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ಮಾಡಲಾಗಿದ್ದ ಕಡಿತವನ್ನು ಮುಖ್ಯಮಂತ್ರಿಗಳು ವಾಪಾಸ್ ಪಡೆದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಯಾರು ಏನೇ ಮಾಡಿದರೂ ಸಮ್ಮಿಶ್ರ ಸರ್ಕಾರವು ಐದು ವರ್ಷ ಸುಭದ್ರವಾಗಿ ನಡೆಯಲಿದ್ದು, ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications