ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿ ಸ್ಟಿಂಗ್ ಆಪರೇಷನ್‌ಗೆ ಯತ್ನ: ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 24: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸ್ಟಿಂಗ್ ಕಾರ್ಯಾಚರಣೆ ವಿವಾದದ ನಡುವೆಯೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಗೆ ಎದುರಾದ ಆತಂಕಕಾರಿ ಹಾಗೂ ವಿಲಕ್ಷಣ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಉದ್ಯಮಿಯೊಬ್ಬರು 'ಮೆಟಾ ಎಐ ಸ್ಮಾರ್ಟ್ ಗ್ಲಾಸ್' ಧರಿಸಿ ತಮ್ಮನ್ನು ಭೇಟಿಯಾಗಿದ್ದು, ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಲು ಅಥವಾ ರಹಸ್ಯವಾಗಿ ವೀಡಿಯೊ ರೆಕಾರ್ಡ್ ಮಾಡುವ ಪ್ರಯತ್ನವಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, 'ದೇವರು ನನಗೆ ಒಂದು ಶಕ್ತಿಯನ್ನು ಕೊಟ್ಟಿದ್ದಾನೆ, ನಾನು ಮುಖಗಳನ್ನು ಓದಬಲ್ಲೆ. ಪ್ರತಿದಿನ ಸಾವಿರಾರು ಜನರು ನನ್ನನ್ನು ಭೇಟಿಯಾಗುತ್ತಾರೆ. ನನ್ನ ಅನುಭವದ ಆಧಾರದ ಮೇಲೆ ಯಾರು ಯಾವ ಕೆಲಸಕ್ಕೆ ಬಂದಿದ್ದಾರೆ ಎಂಬುದನ್ನು ಅವರ ಮುಖ ಭಾವನೆಯಿಂದಲೇ ತಿಳಿದುಕೊಳ್ಳುತ್ತೇನೆ,' ಎಂದು ಹೇಳಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
'ಇತ್ತೀಚೆಗಷ್ಟೇ ಮೆಟಾ ಕನ್ನಡಕವನ್ನು ಧರಿಸಿದ್ದ ಒಬ್ಬ ಉದ್ಯಮಿಯೊಬ್ಬರು ನನ್ನನ್ನು ಭೇಟಿ ಮಾಡಿ ವ್ಯವಹಾರದ ಬಗ್ಗೆ ಚರ್ಚಿಸಲು ಬಂದರು. ಅಧಿಕಾರಿಗಳೇ ಅವರ ಭೇಟಿಗೆ ಸಮಯ ನಿಗದಿಪಡಿಸಿದ್ದರು. ಈ ಉದ್ಯಮಿ ನನ್ನನ್ನು ಮುಂಭಾಗದ ಕೋಣೆಗೆ ಕರೆದೊಯ್ದು ತಮ್ಮ ಲ್ಯಾಪ್‌ಟಾಪ್ ತೆರೆದಿದ್ದು, ಆರಂಭದಲ್ಲಿ ಉದ್ಯಮದ ಕುರಿತು ಮಾತನಾಡಿದರು. ಆದರೆ ನಿಧಾನವಾಗಿ ತಮ್ಮ ಕಂಪನಿ ಹಾಗೂ ಅವ್ಯವಹಾರಗಳ ಕುರಿತು ಮಾತನಾಡುವುದನ್ನು ನಿಲ್ಲಿಸಿದರು. ಬಳಿಕ ರಾಜಕೀಯ ಮತ್ತು ಸೆಫಾಲಜಿ ಅಂದರೆ ಬೂತ್ ಮಟ್ಟದಲ್ಲಿ ಯಾವ ತಂತ್ರಗಳನ್ನು ಮಾಡಬಹುದು ಎಂಬುದರ ಕುರಿತಂತೆ ಚರ್ಚಿಸಲು ಶುರು ಮಾಡಿದ್ದಾರೆ. ಇದು ನನಗೆ ಅನುಮಾನ ಹುಟ್ಟಿಸುವಂತೆ ಮಾಡಿದ್ದು, ನಾನು ಆತನ ಹಿನ್ನಲೆಯನ್ನು ತನಿಖೆ ನಡೆಸುವಂತೆ ಹೇಳಿದ್ದೆ,' ಎಂದು ಹೇಳಿದ್ದಾರೆ.
ಉದ್ಯಮಿಯ ಹೆಸರು ಬಹಿರಂಗಪಡಿಸಿಲ್ಲ ಯಾಕೆ?
ಉದ್ಯಮಿಯ ಹೆಸರನ್ನು ಬಹಿರಂಗಪಡಿಸದ ಡಿ.ಕೆ.ಶಿವಕುಮಾರ್ ಅವರು, ಅವರ ಕನ್ನಡಕವನ್ನು ತಾವು ಸೂಕ್ಷ್ಮವಾಗಿ ಗಮನಿಸಿದ್ದಾಗಿ ತಿಳಿಸಿದರು. 'ಅವರು ನನ್ನನ್ನು ಹಾಗೂ ಕೇರಳದ ನಾಯಕ ವಿ.ಡಿ. ಸತೀಶನ್ ಅವರನ್ನು ಭೇಟಿಯಾದಾಗ 'ಮೆಟಾ ಎಐ ಸ್ಮಾರ್ಟ್ ಗ್ಲಾಸ್' ಧರಿಸಿದ್ದರು. ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಮಹಾರಾಷ್ಟ್ರದಲ್ಲಿ ಕೇಂದ್ರ ಸಚಿವರೊಬ್ಬರನ್ನು ಭೇಟಿಯಾದಾಗ ಅವರು ಆ ಕನ್ನಡಕ ಧರಿಸಿರಲಿಲ್ಲ,' ಎಂದು ತಮಗೆ ಸಿಕ್ಕ ಮಾಹಿತಿಯನ್ನು ಬಿಚ್ಚಿಟ್ಟರು.
ಸಚಿವರಿಗೆ ಎಚ್ಚರಿಕೆ ವಹಿಸುವಂತೆ ಸಿಎಂ ಸೂಚನೆ
ರಾಜ್ಯ ಸರ್ಕಾರದ ಸಚಿವರ ಮೇಲೆ ಸ್ಟಿಂಗ್ ಕಾರ್ಯಾಚರಣೆ ನಡೆಸಲು ಹುನ್ನಾರ ನಡೆಯುತ್ತಿದೆ ಎಂಬ ಬಗ್ಗೆ ತಮ್ಮ ಬಳಿ ನಂಬಲರ್ಹ ಮಾಹಿತಿ ಮತ್ತು ದಾಖಲೆಗಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 'ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸರ್ಕಾರದ ಸಚಿವರಿಗೆ ಜಾಗರೂಕರಾಗಿರಲು ಸಲಹೆ ನೀಡಿದ್ದೇನೆ. ಕುಟುಂಬದ ಹಿರಿಯನಾಗಿ ನನ್ನ ಸಚಿವರಿಗೆ ಯಾವುದೇ ರೀತಿಯ ಕುತಂತ್ರ ಅಥವಾ ಟ್ರ್ಯಾಪ್‌ಗಳಿಗೆ ಬೀಳಬೇಡಿ ಎಂದು ಎಚ್ಚರಿಸಿದ್ದೇನೆ. ಅದರಲ್ಲಿ ಏನು ತಪ್ಪಿದೆ? ನನ್ನ ಬಳಿ ದಾಖಲೆಗಳಿವೆ,' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
'ಸೂಕ್ತ ಸಮಯ ಬಂದಾಗ ಎಲ್ಲಾ ಹೇಳುತ್ತೇನೆ?'
'ನನ್ನನ್ನು ಗುರಿಯಾಗಿಸಿಕೊಂಡು ನಡೆದ ಸ್ಟಿಂಗ್ ಆಪರೇಷನ್ ವಿಷಯದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯಾರು ಹೇಳಿದ್ದು? ತನಿಖೆಯ ಪ್ರತಿಯೊಂದು ವಿಷಯವನ್ನು ಸಾರ್ವಜನಿಕವಾಗಿ ತಕ್ಷಣವೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಸೂಕ್ತ ಸಮಯ ಬಂದಾಗ ಎಲ್ಲ ಮಾಹಿತಿಯನ್ನೂ ಬಹಿರಂಗಪಡಿಸಲಾಗುವುದು,' ಎಂದು ಸ್ಪಷ್ಟಪಡಿಸಿದ್ದಾರೆ.
ಅತ್ಯಾಧುನಿಕ 'ಮೆಟಾ ಎಐ ಸ್ಮಾರ್ಟ್ ಗ್ಲಾಸ್' ಬಳಸಿ ತಮ್ಮ ವಿರುದ್ಧ ರಹಸ್ಯ ಬೇಹುಗಾರಿಕೆ ನಡೆಸಲು ಹುನ್ನಾರ ನಡೆಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಈ ಕಣ್ಣಿಗೆ ಕಾಣಿಸದ ತಂತ್ರಜ್ಞಾನದ ಸ್ಮಾರ್ಟ್ ಗ್ಲಾಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ರಹಸ್ಯ ವೀಡಿಯೊ ರೆಕಾರ್ಡಿಂಗ್ ಮತ್ತು ಗೌಪ್ಯತೆಗೆ ಇದರಿಂದ ಎದುರಾಗುತ್ತಿರುವ ಗಂಭೀರ ಸವಾಲುಗಳೇನು? ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ.


Click it and Unblock the Notifications
